Friday 28 August, 2009

3D ಚಿತ್ರಗಳ ಮಾಯಾಲೋಕ

ಎಂಬತ್ತರ ದಶಕದಲ್ಲಿ 3ಡಿ ಚಿತ್ರಗಳ ಸುಗ್ಗಿಯೇ ಇದ್ದುದು ನೆನಪಿದೆಯೆ? "ಛೋಟಾ ಚೇತನ್", "ಶಿವಾ ಕಾ ಇನ್ಸಾಫ್" ಹಿಂದಿಯಲ್ಲಾದರೆ, ಕನ್ನಡದಲಿ "ಕಾಡಿನಲ್ಲಿ ಜಾತ್ರೆ", "ಸೂಪರ್ ಬಾಯ್", ಮಲಯಾಳಮ್ಮಿನ "ಮೈ ಡಿಯರ್ ಕುಟ್ಟಿ ಚಾತ್ತನ್", ತಮಿಳಿನ "ಚಿನ್ನಾರಿ ಚೇತನ್" ಮುಂತಾದ ಚಿತ್ರಗಳು ಭಾರಿ ಹುಚ್ಚು ಹಿಡಿಸಿದ್ದವು ಆಗ. ವಿಶೇಷ ಕನ್ನಡಕ ಧರಿಸಿ ನೋಡಬೇಕಾಗಿತ್ತು ಇಂಥಾ ಚಿತ್ರಗಳನ್ನು. 3ಡಿ ಕಾಮಿಕ್ಸ್ ಗಳೂ ಕೂಡಾ ಆಗ ಮಾರುಕಟ್ಟೆಗೆ ಬಂದವು. ಇವನ್ನೂ ಕೂಡ ಕೆಂಪು ನೀಲಿ ಕನ್ನಡಕ ಹಾಕಿಯೇ ನೋಡಬೇಕಿತ್ತು. ಹಾಗೆ ನೋಡಿದಾಗ ಚಿತ್ರಗಳು ಪರದೆಯಿಂದ ಅಥವಾ ಪುಟದಿಂದ ಎದ್ದು ಹೊರಗೆ ಬಂದಂತೆ ದೃಷ್ಟಿಭ್ರಮೆ (optical illusion) ಉಂಟಾಗುತ್ತಿತ್ತು. ಒಮ್ಮೆಗೆ ಪ್ರವಾಹದಂತೆ ಬಂದ ಇಂಥ ಚಿತ್ರಗಳು ಧಿಡೀರನೆ ಮಾಯವಾದವು ಕೂಡ. ದುಬಾರಿ ತಯಾರಿಕಾ ವೆಚ್ಚ, ಪ್ರದರ್ಶಿಸಲು ವಿಶೇಷ ಪರದೆ ಬೇಕು, ಕನ್ನಡಕ ತಯಾರಿಸಿ ವಿತರಿಸಬೇಕು, ಹೀಗಾಗಿ ಒಮ್ಮೆಲೆ ಮರೆಯಾದವು. ಈಗ IMAXನಂಥ ಥೇಟರಿನಲ್ಲಿ ಈಗಲೂ ಕಾಣಿಸುತ್ತವೆ. ಇಂಥಾ ಚಿತ್ರಗಳಿಗೆ Anaglyph ಗಳು ಎನ್ನುತ್ತೇವೆ. ಇಂಟರ್ನೆಟ್ನಲ್ಲಿ ಬೇಕಾದಷ್ಟು ತಾಣಗಳಿವೆ. ಚಿತ್ರಗಳನ್ನು ತಯಾರಿಸಲು ವಿಶೇಷ software ಬೇಕು, ಮತ್ತು ನೋಡಲು anaglyph ಕನ್ನಡಕ ಬೇಕು.

Stereogram ಗಳು ಇನ್ನೊಂದು ವಿಧ. ಇವು ಚಿತ್ರದಲ್ಲಿ ಚಿತ್ರ. ಇವನ್ನು ತಯಾರಿಸಲೂ ವಿಶೇಷ ತಂತ್ರಾಂಶ ಬೇಕು. ಆದರೆ ನೋಡಲು ಬೇರೆ ಸಾಧನ ಬೇಡ. ನಮ್ಮ ಕಣ್ಣನ್ನು ವಕ್ರವಾಗಿಸಿ (cross eyed) ಆಗಿ ನೋಡಿದರೆ ಏನೋ ಒಂದು pattern ಅಥವಾ design ಇರುವ ದೊಡ್ಡ ಚಿತ್ರದಲ್ಲಿ ಹುದುಗಿರುವ ಮತ್ತೊಂದು ಚಿತ್ರ ಕಾಣಿಸುತ್ತದೆ. ಇವು ನೋಡಲು ಸ್ವಲ್ಪ ಕಷ್ಟ. Googleನಂತಹ ಜಾಲತಾಣದಲ್ಲಿ stereogram ಎಂದು ಕೊಟ್ಟರೆ ಸಾವಿರಾರು ತಾಣಗಳು ಸಿಗುತ್ತವೆ.

ನನ್ನ ಲೇಖನದ ಮುಖ್ಯ ಉದ್ದೇಶ stereoscopic ಚಿತ್ರಗಳ ಬಗ್ಗೆ ಬರೆಯುವುದು. ಮೇಲಿನದು ಪೀಠಿಕೆಯಾಯಿತು.
ಏನಿದು stereoscopic ಚಿತ್ರ?

ನಮ್ಮ ಎರಡು ಕಣ್ಣುಗಳ ಮಧ್ಯೆ ಐದಾರು ಸೆಂಟಿಮೀಟರ್ ಅಂತರವಿದೆ ತಾನೆ? ಹೀಗಾಗಿ ಒಂದು ವಸ್ತುವನ್ನು ಇವೆರಡು ಸ್ವಲ್ಪ ವಿಬಿನ್ನವಾಗಿಯೇ ನೋಡುತ್ತವೆ. ಹತ್ತಿರದಲ್ಲಿರುವ ವಸ್ತುವನ್ನು ಒಂದೊಂದು ಕಣ್ಣು ಮುಚ್ಚಿ ನೋಡಿ, ವ್ಯತ್ಯಾಸ ಗೊತ್ತಾಗುತ್ತದೆ. ವ್ಯತ್ಯಾಸದಿಂದಲೇ ನಾವು ಹೊರ ಜಗತ್ತನ್ನು ಆಳ ಅಗಲ ಇರುವ ಘನ (solid) ವಾಗಿ ನೋಡುತ್ತೇವೆ ಹೊರತು ಒಂದು ಚಪ್ಪಟೆ ಚಿತ್ರದಂತಲ್ಲ. ನಮ್ಮ ಎರಡೂ ಕಣ್ಣುಗಳೆಂಬ ಕ್ಯಾಮರಾಮೆನ್ ಕಳಿಸುವ flat ಚಿತ್ರಗಳನ್ನು ಮೆದುಳಿನಲ್ಲಿ ಕುಳಿತ ಒಬ್ಬ editor ಸಂಯೋಜಿಸಿದಾಗ ವಸ್ತುವು ವಸ್ತುವಿನಂತೆ ತೋರುತ್ತದೆ ಹೊರತು ಫೋಟೊದಲ್ಲಿರುವ ಚಪ್ಪಟೆ ಚಿತ್ರದಂತೆ ಕಾಣುವುದಿಲ್ಲ. ವಸ್ತುವಿನ ಆಳ, ಅಗಲ, ಯಾವ ವಸ್ತು ಹಿಂದಿದೆ, ಯಾವುದು ಮುಂದಿದೆ, ಏನು ನಮ್ಮ ಹತ್ತಿರ ಬರುತ್ತಿದೆ, ಯಾವುದು ದೂರ ಸರಿಯುತ್ತಿದೆ ಎನ್ನುವುದು ನಮಗೆ ಗೊತ್ತಾಗುತ್ತದೆ. ಇದಕ್ಕೆಲ್ಲ ಕಾರಣ ನಮ್ಮ ಕಣ್ಣುಗಳ ನಡುವೆ ಇರುವ ಅಂತರ. ಇದಕ್ಕೆ stereoscopic vision ಅಥವಾ binocular vision ಎನ್ನುತ್ತಾರೆ.

ಒಂದು ಸಣ್ಣ ಪ್ರಯೋಗ. ಒಂದು ಕಣ್ಣು ಮುಚ್ಚಿ ಎದುರಿನಲ್ಲಿರುವ ಏನಾದರನ್ನು ಮುಟ್ಟಲು ಪ್ರಯತ್ನಿಸಿ. ಅಷ್ಟು ಸುಲಭವಲ್ಲ. ನಮ್ಮ ಕೈ ಎಲ್ಲೆಲ್ಲೋ ಓಡಾಡುತ್ತದೆ. ಒಂದೇ ಕಣ್ಣಿನಿಂದ ನೋಡಿದಾಗ ಹೊರಜಗತ್ತು flat ಆಗಿಬಿಡುತ್ತದೆ. ಆಳ ಅಗಲ ದೂರ ಇವನ್ನು ತೀರ್ಮಾನಿಸಲು ನಮ್ಮ ಮಿದುಳಿಗೆ ಕಷ್ಟವಾಗುತ್ತದೆ. ಅಂದರೆ ಹೊರಜಗತ್ತನ್ನು ಮೂರನೆಯ ಆಯಾಮ (three dimensional) ಆಗಿ ನೋಡಲು ಎರಡು ಕಣ್ಣು ಬೇಕು.

ಏಕಾಗ್ರತೆಯಿಂದ ಮಾಡುವ ಕೆಲಸಗಳಿಗೆ ಒಂದೇ ಕಣ್ಣು ಸಾಕು. ಗುರಿ ಇಡುವಾಗ, ಗುಂಡು ಹೊಡೆಯುವಾಗ, ಬಾಣ ಬಿಡುವಾಗ ಒಂದು ಕಣ್ಣು ಮುಚ್ಚಲೇ ಬೇಕು, ಇಲ್ಲವಾದರೆ ಎರಡೂ ಕಣ್ಣುಗಳು ಕಳಿಸುವ ವಿಭಿನ್ನ ಮಾಹಿತಿಗಳು ಮೆದುಳನ್ನು ಗೊಂದಲಗೊಳಿಸುತ್ತವೆ. ಫೋಟೊ ತೆಗೆಯುವಾಗ ಒಂದು ಕಣ್ಣು viewfinder ನೋಡುತ್ತಿದ್ದರೆ, ಇನ್ನೊಂದು ಹೊರಗೆ ನೇರವಾಗಿ ನೋಡುತ್ತದೆ, ಅದಕ್ಕಾಗಿ ಆ ಕಣ್ಣನ್ನು ಮುಚ್ಚುತ್ತೇವೆ.

ಇಂಥಾ ಮೂರನೆ ಆಯಾಮದ stereoscopic ಚಿತ್ರಗಳನ್ನು ತಯಾರಿಸುವುದು ಸುಲಭ. ನೋಡಲು ನಮ್ಮ ಕಣ್ಣುಗಳು ಸಾಕು, ಇಲ್ಲವೇ stereoscope ಎಂಬ ದರ್ಶಕಯಂತ್ರ (optical instrument) ಸಿಗುತ್ತದೆ. ಇದನ್ನು ಮನೆಯಲ್ಲಿ ನಾವೇ ತಯಾರಿಸಬಹುದು.

ಇಲ್ಲಿ ಕೆಲವು ಮಾದರಿಗಳಿವೆ:

ಚಿತ್ರವನ್ನು ಹಾಗೇ ನೋಡಿದರೆ ಬರೀ ಗೆರೆಗಳು ಕಾಣುತ್ತವೆ. ಕಣ್ಣುಗಳನ್ನು ವಕ್ರಿಸಿ ನೋಡಿದರೆ (cross eyed) ಸುರುಳಿ ಆಕಾರ ಸ್ಪಷ್ಟವಾಗಿ ಕಾಣುತ್ತದೆ.

(ಚಿತ್ರಕೃಪೆ: ಅಂತರಜಾಲ)

ನೋಡುವುದು ಹೇಗೆ?ಎರಡೂ ಚಿತ್ರಗಳ ಮಧ್ಯ ತೋರು ಬೆರಳಿಡಿ. ಬೆರಳನ್ನೇ ನೋಡುತ್ತ ಅದನ್ನು ಹತ್ತಿರ ತನ್ನಿ. ಹಿಂದಿನ ಎರಡು ಚಿತ್ರಗಳು ಒಂದಕ್ಕೊಂದು ಹತ್ತಿರ ಬಂದಂತೆ ಕಾಣಿಸುತ್ತದೆ. ಬೆರಳು ಸ್ವಲ್ಪ ದೂರ ಬಂದಾಗ ಚಿತ್ರಗಳು ಕೂಡಿ, ಅಲ್ಲಿ ಮೂರು ಚಿತ್ರಗಳು ಇದ್ದಹಾಗೆ ತೋರುತ್ತದೆ. ಬೆರಳನ್ನು ಮೂಗಿನ ಹತ್ತಿರ ತಂದಾಗ ಬೆರಳು ಕಾಣಿಸದೆ, ಸ್ಕ್ರೀನ್ ಮೇಲೆ ಮೂರು ಚಿತ್ರಗಳು ಕಾಣುತ್ತದೆ. ಮಧ್ಯದ್ದು 3ಡಿ ಚಿತ್ರವಾಗಿರುತ್ತದೆ. ಮೊದಲನೆ ಪ್ರಯತ್ನದಲ್ಲೇ 3ಡಿ ಚಿತ್ರ ಕಾಣದೆ ಇರಬಹುದು, ಅನೇಕ ಸಲ ಪ್ರಯತ್ನಬೇಕು. ಆದರೆ ಒಂದು ಸಲ 3ಡಿ ಚಿತ್ರ ಕಾಣಿಸಿದರೆ, ಆಮೇಲೆ ಅಷ್ಟು ಕಷ್ಟಪಡಬೇಕಿಲ್ಲ. ಇಂಥಾ ಚಿತ್ರ ನೋಡಿದ ಕೂಡಲೆ ನಮ್ಮ ಕಣ್ಣುಗಳು ತಾನಾಗೆ crosseyed ಆಗಿಬಿಡುತ್ತವೆ. ಪ್ರಾರಂಭದಲ್ಲಿ ಕಣ್ಣುನೋವು ಬರಬಹುದು, ತುಂಬ strain ಮಾಡುವುದರಿಂದ. ಅಭ್ಯಾಸ ಆದಮೇಲೆ ಕಣ್ಣುನೋವು ಅಷ್ಟಾಗಿ ಆಗದೇ ಇದ್ದರೂ ಪದೆ ಪದೆ ನೋಡುತ್ತಿದ್ದರೆ ಕಣ್ಣಿಗೆ ಆಯಾಸ, ನೋವು, ತಲೆನೋವು ಬರುವ ಸಂಭವವಿದೆ.

(ಚಿತ್ರಕೃಪೆ: ಅಂತರಜಾಲ)

ಮೇಲಿನ ಚಿತ್ರ ನೋಡಿ. stereoscope ಚಿತ್ರದ ರೀತಿ ನೋಡಿದರೆ ಹಾವು ಎದ್ದು ಬಂದು ನಮ್ಮತ್ತ ಹಾರುತ್ತಿರುವ ಹಾಗೆ ಕಾಣುತ್ತದೆ. ಇದು ನನಗೆ ತುಂಬ ಇಷ್ಟವಾದ ಚಿತ್ರಗಳಲ್ಲಿ ಒಂದು.

ಈ ಫೋಟೋಗಳನ್ನು ತೆಗೆಯುವುದು ಸುಲಭ. ಒಂದು ಸ್ಥಿರವಸ್ತುವನ್ನು ಆಯ್ದುಕೊಳ್ಳಿ. ಕ್ಯಾಮರಾ ಸ್ಟ್ಯಾಂಡ್ ಇದ್ದರೆ ಒಳ್ಳೆಯದು. ಎಡಕಣ್ಣನ್ನು ಪ್ರತಿನಿಧಿಸುವ ಫೋಟೋ ತೆಗೆಯಿರಿ. ಕ್ಯಾಮರಾವನ್ನು ಐದಾರು ಸೆಂಟಿಮೀಟರ್ ಬಲಕ್ಕೆ ಚಲಿಸಿ ಅದೇ ವಸ್ತುವಿನ ಇನ್ನೊಂದು ಫೋಟೋ ತೆಗೆಯಿರಿ. ಇದು ಬಲಗಣ್ಣನ್ನು ಪ್ರತಿನಿಧಿಸುತ್ತದೆ. ಎರಡನ್ನು ಕಂಪ್ಯೂಟರ್‍ಗೆ ವರ್ಗಾಯಿಸಿ, ಬೇಕಾದರೆ ಯಾವುದಾದರೂ editing software ಬಳಸಿ ಬೇಡದ ಭಾಗಗಳನ್ನು ಕತ್ತರಿಸಿ, ಎರಡನ್ನೂ ಅಕ್ಕಪಕ್ಕ ಇರಿಸಿ. ಈಗ ಸ್ಟೀರಿಯೋಸ್ಕೋಪ್ ಚಿತ್ರ ಸಿದ್ಧವಾಯಿತು. ಮೇಲೆ ತಿಳಿಸಿದ ರೀತಿ ನೋಡಿದರೆ ಆಳ ಅಗಲ ಇರುವ ಮೂರನೆ ಆಯಾಮ ಚಿತ್ರ ಎದ್ದು ಕಾಣುತ್ತದೆ.

ಚಲಿಸುವ ವಸ್ತುಗಳನ್ನು ಹೀಗೆ ತೆಗೆಯಲು ಒಂದು ಕ್ಯಾಮರಾ ಸಾಲುವುದಿಲ್ಲ. ಎರಡು ಕ್ಯಾಮರಾಗಳನ್ನು ಜೊತೆಗೆ ಇಟ್ಟು, ಒಂದೇ ಸಲಕ್ಕೆ ಕ್ಲಿಕ್ ಆಗಲು ವ್ಯವಸ್ಥೆ ಮಾಡಿದರೆ ಆಗ ಚಲಿಸುತ್ತಿರುವ ವಸ್ತುಗಳನ್ನೂ 3ಡಿ ರೂಪದಲ್ಲಿ ನೋಡಬಹುದು. ಹಾರುತ್ತಿರುವ ಹಕ್ಕಿಗಳು, ಓಡುತ್ತಿರುವ ಪ್ರಾಣಿಗಳು, ಮನುಷ್ಯರು, ಟ್ರಾಫಿಕ್, ಹರಿಯುವ ನೀರು, ಜಲಪಾತ, ಸಮುದ್ರ, ಹೀಗೆ...

stereoscopic (3D) videoಗಳನ್ನು ಮಾಡುವುದೂ ಹೀಗೆ. youtubeನಲ್ಲಿ ಸಾಕಷ್ಟು ವೀಡಿಯೋಗಳಿವೆ. ಅದರಲ್ಲಿ ಕೆಲ ಉದಾಹರಣೆಗಳು:

http://www.youtube.com/watch?v=t_vctA4HilM&feature=related

http://www.youtube.com/watch?v=Ml_p_eXsiYg&NR=1

stereoscopic ಚಿತ್ರಗಳು ಬರೀ ಮನರಂಜನೆಗೆ ಮಾತ್ರವಲ್ಲ, ವೈಜ್ಞಾನಿಕ ಪ್ರಯೋಗಗಳಲ್ಲಿಯೂ ತುಂಬಾ ಸಹಕಾರಿ. stereoscopic microscopeಗಳು ಮೊದಲಿಂದಲೂ ಇವೆ. ಸೂಕ್ಷ್ಮಜೀವಿಗಳ ಮೇಲ್ಮೈ ಲಕ್ಷಣ (texture), microsurgeryಯಲ್ಲಿ ಮಾಡಬೇಕಾದ ಸೂಕ್ಷ್ಮ ಕೆಲಸಗಳಿಗೆ ಈ ಮೂರನೆ ಆಯಾಮದ ಚಿತ್ರಗಳು ಬೇಕೇಬೇಕು, ಸರಿಯಾದ ಜಾಗಕ್ಕೆ ಯಂತ್ರ ಹೋಗುತ್ತಿದೆಯೇ ಎಂದು ನೋಡಲು.

ಬೈನಾಕ್ಯುಲರ್‍ಗಳಲ್ಲಿ ಎರಡು ದೂರದರ್ಶಕಗಳಿರುವುದು ಗೊತ್ತಿರುವುದೇ ಎಲ್ಲರಿಗೂ.
ಖಗೋಳವಿಜ್ಞಾನಿಗಳು ಆಕಾಶಕಾಯಗಳನ್ನು ಅಭ್ಯಸಿಸಲು ಅವುಗಳ 3D ಚಿತ್ರ ತೆಗೆಯುತ್ತಾರೆ. ಕೋಟ್ಯಂತರ ಮೈಲು ದೂರದ ಕಾಯಗಳನ್ನು stereoscopic ರೀತಿಯಲ್ಲಿ ತೆಗೆಯಲು ನಮ್ಮ ಕಣ್ಣುಗಳ ಐದಾರು ಸೆಂಟಿಮೀಟರ್ ಅಂತರವಿರಲಿ, ನಮ್ಮ ಭೂಮಿಯ ಎಷ್ಟು ದೂರದ ಅಂತರವೂ ಸಾಕಾಗುವುದಿಲ್ಲ. ನಮ್ಮ ಕಣ್ಣುಗಳಿಗೆ ಎಲ್ಲಾ ನಕ್ಷತ್ರಗಳು ಒಂದೇ ದೂರದಲ್ಲಿದ್ದಂತೆ ಕಾಣುವುದಿಲ್ಲವೆ? ಅಷ್ಟೇಕೆ, ದೂರದಲ್ಲಿರುವ ಬೆಟ್ಟಸಾಲಿನಲ್ಲಿ ಯಾವ ಬೆಟ್ಟ ಮುಂದಿದೆ, ಯಾವುದು ಹಿಂದಿದೆ, ಯಾವ ಮರ ಮುಂದಿದೆ ಎಂದು ನಮ್ಮ ಕಣ್ಣುಗಳಿಗೆ ಗೋಚರಿಸುವುದಿಲ್ಲ. ಏಕೆಂದರೆ ನಮ್ಮ ಕಣ್ಣುಗಳ ಅಂತರ ತುಂಬಾ ದೂರದ ವಸ್ತುಗಳನ್ನು stereoscopic ಆಗಿ ನೋಡಲು ಸಾಲುವುದಿಲ್ಲ.

ಆಕಾಶಕಾಯಗಳ 3D ಚಿತ್ರ ತೆಗೆಯಲು ಸರಳ ವಿಧಾನ ಉಪಯೋಗಿಸುತ್ತಾರೆ: ಒಂದು ರಾತ್ರಿ ಆಕಾಶದ ಒಂದು ಭಾಗದ ಚಿತ್ರ ತೆಗೆಯುತ್ತಾರೆ. ಮರುದಿನ ರಾತ್ರಿ ಸರಿಯಾಗಿ ಅದೇ ಸಮಯಕ್ಕೆ ಅದೆ ಭಾಗದ ಇನ್ನೊಂದು ಚಿತ್ರ ತೆಗೆಯುತ್ತಾರೆ. ಈ 24 ಗಂಟೆ ಅವಧಿಯಲ್ಲಿ ಭೂಮಿ ಲಕ್ಷಾಂತರ ಮೈಲುಗಳನ್ನು (ಸುಮಾರು 16 ಲಕ್ಷ ಮೈಲುಗಳು) ಕ್ರಮಿಸಿಬಿಟ್ಟಿರುತ್ತದೆ. ಆದ್ದರಿಂದ ಈ ಎರಡೂ ಚಿತ್ರಗಳಲ್ಲಿ stereoscopic ಚಿತ್ರಗಳಿಗೆ ಬೇಕಾದ ವ್ಯತ್ಯಾಸವಿರುತ್ತದೆ. ಹೀಗೆ ತೆಗೆದಾಗ ಶಿಸ್ತಿನಿಂದ ಚಲಿಸುತ್ತಿರುವ ಗ್ರಹ ಉಪಗ್ರಹಗಳು, ಪುಂಡುಪೋಕರಿಗಳಂತೆ ಅಂಡಲೆಯುವ ಕ್ಷುದ್ರಗ್ರಹ, ಉಲ್ಕೆ, ಧೂಮಕೇತುಗಳು - ಎಲ್ಲವೂ ಎದ್ದು ಕಾಣುತ್ತವೆ.

ಖಗೋಳಚಿತ್ರದ 3D ಉದಾಹರಣೆ:


(ಚಿತ್ರಕೃಪೆ: ಅಂತರಜಾಲ)


ಇನ್ನು ನಾನು ತೆಗೆದ ಕೆಲ stereo ಚಿತ್ರಗಳು:










stereo ಎನ್ನುವುದು ಕೇವಲ ದೃಷ್ಟಿಗೆ ಸಂಬಂಧಿಸಿದ್ದು ಮಾತ್ರವಲ್ಲ. ನಮಗೆ ಎರಡು ಕಣ್ಣು ಇದ್ದಂತೆ ಎರಡು ಕಿವಿಗಳಿವೆ. ಇದು ಕೂಡ ಹೊರಜಗತ್ತಿನ ಶಬ್ದವನ್ನು stereophonic ಆಗಿ ಕೇಳಲು. ಕಣ್ಣು ಮುಚ್ಚಿ ಶಬ್ದವನ್ನು ಕೇಳಲು ಪ್ರಯತ್ನಿಸಿ. ಶಬ್ದ ಯಾವ ಕಡೆಯಿಂದ ಬರುತ್ತಿದೆ ಎಂದ ಹೆಚ್ಚಿನ ಪಕ್ಷ ಸರಿಯಾಗಿ ಹೇಳಬಹುದು. stereophonic sound ಎಂದು ನಾವೆಲ್ಲ ಕೇಳಿದ್ದೇವೆ. ಟಿವಿ ಸ್ಪೀಕರ್, ಟೇಪ್, stereo, headphone, ಇವೆಲ್ಲವೂ ಎರಡೂ ಕಿವಿಗಳಿಗೆ ಶಬ್ದವನ್ನು ತುಂಬಿಸುತ್ತವೆ. Earphone ಅಥವಾ headphoneಇಂದ ಬರೀ ಒಂದು ಕಿವಿಯಲ್ಲಿ ಕೇಳಲು ಪ್ರಯತ್ನಿಸಿ. ಧ್ವನಿ ಆ ಕಿವಿಯಲ್ಲಿ ಮಾತ್ರ ಕೇಳುತ್ತದೆ. ಎರಡೂ ಕಿವಿಗೆ ಹಾಕಿದಾಗ, ಧ್ವನಿಯು ಕಿವಿಯ ಮೂಲಕ ಕೇಳದೆ, ತಲೆಯಲ್ಲಿ ಕೇಳಿದಂತಾಗುತ್ತದೆ. ಅಂದರೆ, ನಮ್ಮ ಮೆದುಳಿನಲ್ಲಿಯೇ ಯಾರೋ speaker on ಮಾಡಿದಂತೆ ಭ್ರಮೆ (phonic illusion) ಆಗುತ್ತದೆ.

ಹೀಗೆ ನಮಗಿರುವ ಎರಡು ಕಣ್ಣು, ಕಿವಿಗಳಿಂದ ಹೊರಜಗತ್ತನ್ನು flat ಆಗಿ ನೋಡದೆ, ಕೇಳದೆ, ಘನವಾಗಿ (solid, 3 dimensional) ನೋಡಲು, ಕೇಳಲು ಸಾಧ್ಯವಾಗಿದೆ. ಇದು ನಮ್ಮ, ಅಂದರೆ ಎಲ್ಲಾ ಪ್ರಾಣಿಗಳ ಅಳಿವು, ಉಳಿವಿಗೂ ಅತ್ಯಂತ ಸಹಾಯಕವಾಗಿದೆ. ಅಪಾಯವನ್ನು ಅರಿಯಲು, ದೂರವನ್ನು ನಿರ್ಧರಿಸಲು, ಶಬ್ದ ಯಾವ ಕಡೆಯಿಂದ ಬರುತ್ತಿದೆಯೆಂದು ತಿಳಿಯಲು, ಆಹಾರ ಎಷ್ಟು ದೂರದಲ್ಲಿದೆಯೆಂದು ನಿರ್ಣಯಿಸಲು...ಹೀಗೆ.

ಒಂದು ಸಲ ಈ ಚಿತ್ರಗಳನ್ನು ನೋಡುವ ವಿಧಾನ ತಿಳಿದ ನಂತರ ಆ ಮಜವೇ ಬೇರೆ. ಅದೇ ಒಂದು ಗೀಳಾಗಿಬಿಡುವ ಅಪಾಯವಿದೆ. ಅಂತರಜಾಲದಲ್ಲಿ ಇಂಥಾ ಚಿತ್ರಗಳಿಗಾಗಿಯೇ ಸಾವಿರಾರು ತಾಣಗಳಿವೆ. ಡಿಜಿಟಲ್ ಕ್ಯಾಮರಾ ಇರುವವರು stereo ಫೋಟೋಗಳನ್ನು ತೆಗೆಯುವುದು ಅತಿ ಸುಲಭ ಎಂದು ಮೇಲೆ ಹೇಳಿದ್ದೇನೆ. ಇನ್ನೇಕೆ ತಡ. ಪ್ರಯತ್ನಿಸಿ ನೋಡಿ...

12 comments:

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಹೊಸ ವಿಷಯವನ್ನು ಅನೇಕ ಉದಾಹರಣೆಗಳೊಂದಿಗೆ ಚೆನ್ನಾಗಿ ಬರೆದಿರುವಿರಿ. ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

Guruprasad said...

ತುಂಬ ಒಳ್ಳೆ information . ತುಂಬ ಚೆನ್ನಾಗಿ ಚಿತ್ರಗಳ ಸಮೇತ ವಿವರಿಸಿದ್ದೀರ....

Ittigecement said...

ದೀಪಸ್ಮಿತ...

ಥ್ರೀಡಿ ಸಿನೇಮಾ ಹೇಗೆ ಮಾಡುತ್ತಾರೆಂಬ ಕುತೂಹಲ ಬಹಳ ದಿನಗಳಿಂದ ಇತ್ತು...
ವಿವರವಾಗಿ..
ಲಿಂಕ್‍ಗಳೊಂದಿಗೆ ತಿಳಿಸಿಕೊಟ್ಟಿದ್ದೀರಿ....

ಉಪಯುಕ್ತ ಮಾಹಿತಿಗಳಿಗಾಗಿ ಧನ್ಯವಾದಗಳು....

ದೀಪಸ್ಮಿತಾ said...

ಮಲ್ಲಿಕಾರ್ಜುನ್, ಗುರು, ಪ್ರಕಾಶ, ಪ್ರತಿಕ್ರಿಯೆಗೆ ಧನ್ಯವಾದಗಳು. ಈ ವಿಷಯದ ಬಗ್ಗೆ ಅನೇಕ ದಿನಗಳಿಂದ ಕುತೂಹಲವಿತ್ತು. ಪುಸ್ತಕಗಳಲ್ಲಿ ಓದಿದ, ಅಂತರಜಾಲದಲ್ಲಿ ಸಿಕ್ಕಿದ ಮಾಹಿತಿ, ಮತ್ತು ನನ್ನ ಸ್ವಂತ ಅನುಭವ ಕೂಡಿಸಿ ಇದನ್ನು ಬರೆದ. ಲೇಖನ ಮೆಚ್ಚಿದ್ದಕ್ಕೆ ವಂದನೆಗಳು

ಜಲನಯನ said...

ದೀಪಸ್ಮಿತ, ನಿಮ್ಮ 3-D ಚಿತ್ರಗಳು ಅದರ ವಿವರಣೆ ಚನ್ನಾಗಿದೆ. ನಿಮ್ಮ ಕುತೂಹಲಕ್ಕೆ ಸಿಕ್ಕ ಸಬ್ಜಕ್ಟ್ ವಿಭಿನ್ನ. ಚನ್ನಾಗಿದೆ ಬ್ಲಾಗ್ ಪೋಸ್ಟ್.

Unknown said...

ಅನೇಕ ಹೊಸ ಮಾಹಿತಿಗಳನ್ನು ತಿಳಿಸಿದ ಒಳ್ಳೆಯ ಲೇಖನ. ಆಕ್ಷೇತ್ರದಲ್ಲಿದ್ದ ನನ್ನ ಅಜ್ಞಾನನವನ್ನು ದೂರ ಮಾಡಿದ ಲೇಖನ. ಪೂರಕ ಚಿತ್ರಗಳೂ ಅಷ್ಟೆ. ಆಸಕ್ತಿ ಹುಟ್ಟಿಸುವಂತಿವೆ.

ದೀಪಸ್ಮಿತಾ said...

ಜಲನಯನ ಸರ್, ಹೌದು ಈ ವಿಷಯ ಸ್ವಲ್ಪ ವಿಬಿನ್ನ. ಫೋಟೋಗ್ರಫಿ, ಚಿತ್ರಕಲೆ, ಹೀಗೆ ಕಣ್ಣಿಗೆ ಸಂಬಂಧಿಸಿದ ಕಲಾ ಪ್ರಕಾರದಲ್ಲಿ ಆಸಕ್ತಿ ಇರುವವರಿಗಂತೂ ಇದು ತುಂಬಾ ಆಸಕ್ತಿದಾಯಕವಾಗಬಹುದು. ಪ್ರತಿಕ್ರಿಯೆಗೆ ಧನ್ಯವಾದ

ದೀಪಸ್ಮಿತಾ said...

ಸತ್ಯನಾರಾಯಣ ಸರ್, ನನ್ನ ಬ್ಲಾಗ್ ಒಂದು ಹೊಸ ವಿಷಯದ ಬಗ್ಗೆ ತಿಳಿಸಿದರೆ ನನ್ನ ಪ್ರಯತ್ನ ಸಾರ್ಥಕ. ನಿಮ್ಮ ಐತಿಹಾಸಿಕ ವಿಷಯ ಮತ್ತು ದೇವಾಲಯಗಳ ಬಗ್ಗೆ ಇರುವ ಬ್ಲಾಗ್ ಗಳು ನನಗೂ ಕುತೂಹಲ. ಪ್ರತಿಕ್ರಿಯೆ, ಪ್ರೋತ್ಸಾಹಕ್ಕೆ ಧನ್ಯವಾದ

AntharangadaMaathugalu said...

ಸರ್..
ನಿನ್ನೆನೇ ನಿಮ್ಮ ಬರಹ ಓದಿ ಪ್ರತಿಕ್ರಿಯೆ ಕೂಡ ಹಾಕಿದ್ದೆ, ಆದರೆ ಅದು ಯಾಕೆ ಇಲ್ಲ ಗೊತ್ತಾಗಲಿಲ್ಲ. ಹೋಗಲಿ ಬಿಡಿ, ಈಗ ಮತ್ತೆ ಬರೀತಿದೀನಿ. ಬರಹ ತುಂಬಾ ಚೆನ್ನಾಗಿದೆ. ಸರಳವಾಗಿ ನಮಗೆ ಅರ್ಥವಾಗುವಂತಿದೆ ವಿವರಣೆ. ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ ಸಾರ್...

ಶ್ಯಾಮಲ

ಕ್ಷಣ... ಚಿಂತನೆ... said...

ಸರ್‍, ನಾನು ನಿಮ್ಮ ಬ್ಲಾಗಿಗೆ ಬಂದಿದ್ದು ಆಕಸ್ಮಿಕವಾಗಿ. ಬರಹಗಳು, ಚಿತ್ರಗಳು, ೩ಡಿ ಚಿತ್ರಗಳು, ಜೊತೆಗೆ ಫೋಟೋಗ್ರಾಫ್ಗಳು ತುಂಬಾ ಚೆನ್ನಾಗಿವೆ ಮತ್ತು ಮಾಹಿತಿದಾಯಕವಾಗಿವೆ.

ಚಂದ್ರಶೇಖರ ಬಿ.ಎಚ್.

ಬಾಲು said...

olleya mahithi. thumba chennagide. upayukta maahiti mattu photogalu.

ಅನಂತ್ ರಾಜ್ said...

ದೀಪಸ್ಮಿತ ಸರ್, ನನ್ನ ಬ್ಲಾಗ್ಗೆ ಭೇಟಿ ನೀಡಿ ನೀವು ನನ್ನನ್ನು ನಿಮ್ಮ ಅದ್ಭುತ ಲೋಕಕ್ಕೆ ಕರೆದೊಯ್ದಿರಿ.ನಿಮ್ಮ ಒ೦ದೊ೦ದು ಪೋಸ್ಟ್ ಗಳು ಅನುಕರಣೀಯ. ೩ಡಿ ಚಿತ್ರಗಳ ಮಾಯಾಲೋಕವ೦ತೂ ತು೦ಬಾ ವಿಚಾರಗಳನ್ನು ತಿಳಿಸಿತು.
ನಿಮ್ಮ ಪರಿಚಯವಾದದ್ದು ಬಹಳ ಸ೦ತಸ..
ವ೦ದನೆಗಳು
ಅನ೦ತ್