Wednesday 18 August, 2010

ಸ್ವಲ್ಪ ಸುತ್ತಾಡೋಣ ಬನ್ನಿ...

ನಮ್ಮ ಸುತ್ತಮುತ್ತಲಿನಲ್ಲೇ ನೋಡಬೇಕಾದ ಅನೇಕ ಜಾಗಗಳಿವೆ ಎಂದು ಹಿಂದೆ ಬರೆದಿದ್ದೆ. ಒಂದು ದಿನದಲ್ಲಿ ನೋಡಬಹುದಾದ ಕೆಲ ಜಾಗಗಳು ಇಲ್ಲಿವೆ. ಇವೆಲ್ಲ ಬೆಂಗಳೂರಿನ ದಕ್ಷಿಣದಲ್ಲಿ ಹೊಸೂರು ರಸ್ತೆ ಸುತ್ತಮುತ್ತಲಲ್ಲಿ ಇವೆ.

ಸಿಲ್ಕ್ ಬೋರ್ಡ್ ಸರ್ಕಲ್ ಇಂದ ಹೊಸೂರು ರಸ್ತೆಯಲ್ಲಿ ಸುಮಾರು ಹತ್ತು ಕಿಲೋಮೀಟರ್ ಹೋದರೆ ಎಲೆಕ್ಟ್ರಾನಿಕ್ ಸಿಟಿ ಸಿಗುತ್ತದೆ. ಇನ್ನೂ ಆರು ಕಿ.ಮಿ.ಮುಂದೆ ಹೋದರೆ ಸಿಗುವುದು ಚಂದಾಪುರ. ಇಲ್ಲಿ ಬಲಗಡೆ ರಸ್ತೆ ಹೋಗುವುದು ಆನೇಕಲ್ ಗೆ. ಚಂದಾಪುರ ಶನಿವಾರ ನಡೆಯುವ ಸಂತೆಗೆ ಪ್ರಸಿದ್ಧ. ಇಲ್ಲಿ ನಡೆಯುವ ಕುರಿ, ದನ, ಎತ್ತು, ಎಮ್ಮೆಗಳ ವ್ಯಾಪಾರಕ್ಕೆ ಸುತ್ತಮುತ್ತ ಮತ್ತು ತಮಿಳುನಾಡಿನ ರೈತರು ಬರುತ್ತಾರೆ.

ಚಂದಾಪುರದಲ್ಲಿ ಎಡಗಡೆ ರಸ್ತೆಯಲ್ಲಿ ಹೋದರೆ ಸಿಗುವುದು ನಮ್ಮ ಮೊದಲ ನಿಲ್ದಾಣ ರಾಮಸಾಗರ ಕೆರೆ. ಚಂದಾಪುರದ ಸುಂದರ ಕೆರೆ ಮೇಲೆ ಹಾದು ಹೋದರೆ ಮೊದಲು ಸಿಗುವುದು ಹೀಲಲಿಗೆಯ ಪುಟ್ಟ ರೈಲು ನಿಲ್ದಾಣ. ನಗರದಿಂದ ಮತ್ತು ತಮಿಳುನಾಡಿನಿಂದ ಎಲೆಕ್ಟ್ರಾನಿಕ್ ಸಿಟಿಗೆ ಮತ್ತು ಹೀಲಲಿಗೆಯಲ್ಲಿರುವ BCET ಇಂಜಿನಿಯರಿಂಗ್ ಕಾಲೇಜಿಗೆ ರೈಲಿನಲ್ಲಿ ಬರುವವರು ಇಲ್ಲೇ ಇಳಿಯಬೇಕು. ಇದೇ ರಸ್ತೆಯಲ್ಲಿ ಸುಮಾರು ಎರಡು ಕಿ.ಮಿ. ಹೋದರೆ ಸಿಗುವುದು ರಾಮಸಾಗರ. ಬಲಗಡೆ ಸಣ್ಣ ರಸ್ತೆಯಲ್ಲಿ ಹೋದರೆ ಇರುವುದು ರಾಮಸಾಗರ ಕೆರೆ. ಅಲ್ಲಿ ತೆಗೆದ ಕೆಲ ದೃಶ್ಯಗಳು.


White browed Bulbul

Red Whiskered Bulbul


ಇದು ಸುಮಾರು ದೊಡ್ಡ ಕೆರೆ. ಇದರ ಇನ್ನೊಂದು ದಡದಲ್ಲಿರುವ ಮುತ್ತಾನಲ್ಲೂರು ಗ್ರಾಮದಲ್ಲಿ ಒಡ್ಡಿನ ಮೂಲಕ ಹತ್ತಿರದ ಹೊಲಗದ್ದೆಗಳಿಗೆ ಈ ಕೆರೆ ನೀರು ಉಪಯೋಗವಾಗುತ್ತದೆ. ಪಕ್ಷಿವೀಕ್ಷಣೆಗೆ ಇದು ಒಳ್ಳೆ ಸ್ಥಳ

ಬನ್ನಿ, ಮುತ್ತಾನಲ್ಲೂರು ಮತ್ತು ರಾಮಸಾಗರದಿಂದ ವಾಪಸ್ ಚಂದಾಪುರಕ್ಕೆ ಬರೋಣ. ಹೊಸೂರು ರಸ್ತೆಯಲ್ಲಿ ಸ್ವಲ್ಪ ಮುಂದೆ, ಅಂದರೆ ಎರಡು ಕಿ.ಮಿ. ಹೋದರೆ ಸಿಗುವುದು ಹಳೆ ಚಂದಾಪುರ. ಇಲ್ಲಿರುವುದು ಈ ಅದ್ಭುತ ಜೈನ ಮಂದಿರ. ಸಂಪೂರ್ಣ ಅಮೃತಶಿಲೆಯಲ್ಲಿರುವ ಇದು ಇನ್ನೂ ನಿರ್ಮಾಣ ಹಂತದಲ್ಲಿದೆ.


ಇನ್ನು ಸೀದಾ ತಮಿಳುನಾಡಿನ ಹೊಸೂರಿಗೇ ಹೋಗೋಣ. ಚಂದಾಪುರದಿಂದ ಹತ್ತು ಕಿ.ಮಿ. ಇರುವುದು ಅತ್ತಿಬೆಲೆ. ಇದು ಮುಗಿಯುತ್ತಿದ್ದಂತೆ ಸಿಗುವುದು ಕರ್ನಾಟಕ-ತಮಿಳುನಾಡು ಗಡಿ
.
ಹೊಸೂರಿನಲ್ಲಿ ಎಡಗಡೆ ಬಾಗಲೂರು ರಸ್ತೆಯಲ್ಲಿ ತಿರುಗಿ ಸುಮಾರು ಹತ್ತು ಕಿ.ಮಿ. ಹೋದರೆ ಇರುವುದು ಕೆಲವಾರಪಳ್ಳಿ ಡ್ಯಾಂ. ಇದು ನಂದಿಬೆಟ್ಟದ ಬಳಿ ಹುಟ್ಟುವ ಪೊನ್ನಯ್ಯಾರ್ ನದಿಗೆ ಅಡ್ದಲಾಗಿ ಕಟ್ಟಲಾಗಿದೆ. ಇದೇ ನದಿಗೆ ಮುಂದೆ ಕೃಷ್ಣಗಿರಿ ಬಳಿ ಇನ್ನೊಂದು ಅಣೆಕಟ್ಟು ಇದೆ.

ಅಣೆಕಟ್ಟು ಮತ್ತು ಹಿನ್ನೀರು ಹೊಸೂರು ಜನತೆಗೆ ಒಳ್ಳೆ picnic spot. ಪಕ್ಷಿವೀಕ್ಷಣೆಗೆ ಇದು ಒಳ್ಳೆ ಜಾಗ
ಈ ಕೆಲವಾರಪಳ್ಳಿ ಅಣೆಕಟ್ಟು ಮತ್ತು ಸುತ್ತಮುತ್ತಲು ಸೆರೆಸಿಕ್ಕ ಕೆಲ ಚಿತ್ರಗಳು.

ನೀರಿನ ಒಳಹರಿವು ಕಡಿಮೆಯಿರುವುದರಿಂದ ಗೇಟ್ ಗಳು ಸಂಪೂರ್ಣ ತೆರೆದಿಲ್ಲ. ಮಳೆ ಚೆನ್ನಾಗಿ ಬಂದರೆ ಮನಮೋಹಕ ದೃಶ್ಯವಾಗಬಹುದು ಈ ಅಣೆಕಟ್ಟು.

ಮುಂದೆ ನದಿ ಮಧ್ಯದ ಮರದಲ್ಲಿದ್ದ ಅಸಂಖ್ಯಾತ ಗೀಜಗನ ಗೂಡುಗಳನ್ನು ನೋಡಿ. ಎಂತಹ ಅದ್ಭುತ ಕಲೆಗಾರ ಮತ್ತು ವಾಸ್ತುಶಿಲ್ಪಿ ಈ ಗೀಜಗ ಹಕ್ಕಿ (weaver bird).

ಕೆಲವಾರಪಳ್ಳಿ ಡ್ಯಾಂ ನೋಡಾಯ್ತಲ್ಲ. ವಾಪಸ್ ಹೊಸೂರಿಗೆ ಬಂದರೆ ಕಾಣುವುದು ನಗರದ ಮಧ್ಯದಲ್ಲಿರುವ ಬೆಟ್ಟ. ಇದರ ಮೇಲಿದೆ ಚಂದ್ರಚೂಡೇಶ್ವರ ದೇವಾಲಯ. ಬೆಟ್ಟದ ತುದಿಯವರೆಗೂ ರಸ್ತೆಯಿದೆ. ಅದರ ಕೆಲ ಚಿತ್ರಗಳು.
 ಬೆಟ್ಟದ ಮೇಲಿಂದ ಕಾಣುವ ಕಲ್ಯಾಣಿ
ಹೊಸೂರು ತಮಿಳುನಾಡಿನಲ್ಲಿ ಇದ್ದರೂ ಕನ್ನಡ, ತೆಲುಗು ಹೆಚ್ಚುಕಡಿಮೆ ಎಲ್ಲರಿಗೂ ಗೊತ್ತು. ನಾನು ಚಂದ್ರಚೂಡೇಶ್ವರ ಬೆಟ್ಟಕ್ಕೆ ಹೋದಾಗ ದೇವಸ್ಥಾನದ ಕಚೇರಿಯಲ್ಲಿ ಮೀಟಿಂಗ್ ಸಂಪೂರ್ಣ ಕನ್ನಡದಲ್ಲಿ ನಡೆಯುತ್ತಿತ್ತು.


ಸದ್ಯಕ್ಕಿಷ್ಟು ಪ್ರಯಾಣ ಸಾಕು. ಒಂದು ಭಾನುವಾರದ ಟೂರ್ ಆಯಿತು. ಇಲ್ಲಿ ತಿಳಿಸಿದ ಯಾವ ಸ್ಥಳಗಳೂ ಅದ್ಭುತ, ಸುಂದರ ಅಥವಾ ಪ್ರೇಕ್ಷಣೀಯ ಅನ್ನಿಸುವ ಜಾಗಗಳಲ್ಲ. ಆದರೆ, ಒಂದು ದಿನ ಹಾಯಾಗಿ ಕಾಲಕಳೆಯಲು ಹೋಗಿಬರಬಹುದು.

ಹಿಂದೊಮ್ಮೆ ಬರೆದಂತೆ ನಮ್ಮ ಸುತ್ತಮುತ್ತಲಿನಲ್ಲೇ ನೋಡುವಂತಹ ಅನೇಕ ಜಾಗಗಳಿರುತ್ತವೆ. ಅವು tourist attraction ಅನ್ನಿಸುವಂತಹದಲ್ಲದಿರಬಹುದು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೂ ಸೌಂದರ್ಯವಿರುತ್ತದೆ, ಆಶ್ಚರ್ಯಕರ ವಿಷಯಗಳು ಕಣ್ಣಿಗೆ ಸಿಕ್ಕೇಸಿಗುತ್ತದೆ. ನೋಡುವ ಕಣ್ಣು, ಅನುಭವಿಸುವ ಮನಸ್ಸಿದ್ದರೆ ಸಾಕು

11 comments:

ಸುಬ್ರಮಣ್ಯ said...

:-)

ಸೀತಾರಾಮ. ಕೆ. / SITARAM.K said...

ಬೆಂಗಳೂರಿಗರಿಗೆ ಭಾನುವಾರದ ಪಿಕ್ನಿಕ್-ಗೆ ಒಳ್ಳೆ ಸ್ಥಳ.
ಪಕ್ಷಿಗಳಚಿತ್ರ ಅದ್ಭುತವಾಗಿವೆ.
ಮಾಹಿತಿ ಮತ್ತು ಚಿತ್ರಗಳಿಗೆ ಧನ್ಯವಾದಗಳು.

ಸಾಗರದಾಚೆಯ ಇಂಚರ said...

tumbaa sundara sthalada parichaya

dhanyavaadagalu

Subrahmanya said...

ತುಂಬ ಚೆನ್ನಾಗಿದೆ ಸರ್. Thanks

ಶಿವಪ್ರಕಾಶ್ said...

Nija sir..
manasige santhoshasiguva yaava stalavaadaru okay ;)

prasca said...

ಚಿತ್ರಗಳನ್ನು ತುಂಬಾ ಚೆನ್ನಾಗಿ ತೆಗೆದಿದ್ದೀರಿ. ಅಭಿನಂದನೆಗಳು, ಚಿಟ್ಟೆಯ ಚಿತ್ರವಂತೂ ಸುಂದರವಾಗಿದೆ.

ಮನಸಿನಮನೆಯವನು said...

ಗೂಡುಗಳು ಸುಂದರ..
ಚೆನ್ನಾಗಿದೆ..

Ittigecement said...

ನಾನು ಬೆಂಗಳೂರಲ್ಲೇ ಇದ್ದರೂ ಈ ಪ್ರದೇಶ ಇನ್ನೂ ನೋಡಿರಲಿಲ್ಲ..
ಪರಿಚಯಿಸಿದ್ದಕ್ಕೆ ಧನ್ಯವಾದಗಳು...

ಚಂದದ ಚಿತ್ರ ಲೇಖನಕ್ಕೆ ಧನ್ಯವಾದಗಳು...

V.R.BHAT said...

ತುಂಬಾ ಚೆನ್ನಾಗಿದೆ, ಧನ್ಯವಾದಗಳು

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

good information ...nice photos

shivu.k said...

ಅರೆರೆ...ಇದು ನನಗೆ ಗೊತ್ತೇ ಆಗಿರಲಿಲ್ಲವಲ್ಲ ಸರ್,

ಸುಂದರ ಚಿತ್ರಗಳ ಜೊತೆಗೆ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಿ..ಥ್ಯಾಂಕ್ಸ್.