Sunday, 27 February, 2011

ಪುರಾಣಗಳ ಬಗ್ಗೆ ಪುರಾಣ

ಮೊದಲೇ ಹೇಳಿಬಿಡುತ್ತೇನೆ. ಇಲ್ಲಿ ಬರೆದಿರುವ ವಿಷಯಗಳು ನಾನು ಓದಿ, ಕೇಳಿದ್ದರ ಬಗ್ಗೆ ಬಂದ ಕೆಲ ಆಲೋಚನೆಗಳು ಅಷ್ಟೆ ಹೊರತು ಯಾವುದೇ ಗಂಭೀರ ಸಂಶೋಧನೆ ಅಲ್ಲ. ಆದ್ದರಿಂದ ಕೆಲವು ತಪ್ಪು ಬರಹಗಳಿರುವ ಸಾಧ್ಯತೆ ಇದೆ.


ಯುದ್ಧ, ಆಡಳಿತದಲ್ಲಿ ಮಹಿಳೆ
ಈಗ ಸೈನ್ಯದಲ್ಲಿ, ವಾಯುಪಡೆಯಲ್ಲಿ ಸ್ತ್ರೀಯರು ದೊಡ್ಡ ಹುದ್ದೆಯಲ್ಲಿದ್ದರೆ ಅದೇ ದೊಡ್ಡ ಸುದ್ದಿ. ಆದರೆ ನಮ್ಮ ಪುರಾಣಗಳನ್ನು ಸ್ವಲ್ಪ ಅವಲೋಕಿಸಿದಾಗ ಮಹಿಳೆಯರು ಯುದ್ಧದಲ್ಲಿ ನೇರ ಇಲ್ಲ ಪರೋಕ್ಷವಾಗಿ ಭಾಗವಹಿಸಿದ್ದ ಹೇರಳ ಉದಾಹರಣೆಗಳು ಸಿಗುತ್ತವೆ. ಮಹಿಶಾಸುರ, ಶುಂಭ, ನಿಶುಂಭ, ರಕ್ತಬೀಜಾಸುರ ಮುಂತಾದ ಅಂದಿನ ಭಯೋತ್ಪಾದರಾದ ರಾಕ್ಷಸರನ್ನು ಬಗ್ಗುಬಡಿಯಲು ಮಹಿಳೆಯೇ ಬೇಕಾಯಿತು. ಸ್ವಲ್ಪಕಾಲ ದುರ್ಗೆ/ಚಾಮುಂಡಿ/ಮಹಿಶಾಸುರಮರ್ದಿನಿಯನ್ನು ದೇವರು ಎಂಬುದು ಮರೆತು ಒಬ್ಬ ಸ್ತ್ರೀ ಎಂದು ಮಾತ್ರ ನೋಡಿದಾಗ ನಮ್ಮ ಆಗಿನ ಜನ ಮಹಿಳೆಗೂ ಎಂಥ ಸ್ಥಾನ ಕೊಟ್ಟಿದ್ದರು ಎಂದು ತಿಳಿಯುತ್ತದೆ. ಮಹಿಶಾಸುರನನ್ನು ಯಾವ ದೇವತೆ, ತ್ರಿಮೂರ್ತಿಗಳಿಗೂ ಕೊಲ್ಲಲು ಸಾಧ್ಯವಾಗದೇ ಇದ್ದಾಗ ತಮ್ಮೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಸೃಷ್ಟಿಸಿದ ಶಕ್ತಿಯೇ ದುರ್ಗೆ. ಅಷ್ಟೆ ಅಲ್ಲ, ತಮ್ಮೆಲ್ಲ ಆಯುಧವನ್ನು ಧಾರೆ ಎರೆದರು. ಅದು ಯುದ್ಧ ತಂತ್ರದಲ್ಲಿ concentration of forces at a single point ನ ಅತಿ ಪುರಾತನ ಉದಾಹರಣೆ.

ತ್ರೇತಾಯುಗದಲ್ಲಿ ದಶರಥನು ಸಂಹಾಸುರನ ಜೊತೆ ಯುದ್ಧಕ್ಕೆ ಹೋದಾಗ ಅವನ ಮುದ್ದಿನ ಮಡದಿ ಕೈಕೇಯಿ ಕೂಡ ಅವನ ಜೊತೆ ಯುದ್ಧಕ್ಕೆ ಹೋಗುತ್ತಾಳೆ. ದಶರಥನು ಮೂರ್ಛೆಹೋದಾಗ ಅವನ ಶುಶ್ರೂಶೆ ಮಾಡಿ ಅವನ ಜೀವ ಉಳಿಸುತ್ತಾಳೆ. ಇದರಿಂದ ಸುಪ್ರೀತನಾದ ದಶರಥ ಬೇಕಾದ ವರ ಕೇಳು ಎನ್ನುತ್ತಾನೆ. ಆಗ ಕೇಳದೆ, ಮುಂದೆ ಮಕ್ಕಳು ಹುಟ್ಟಿ ದೊಡ್ಡವರಾದ ಮೇಲೆ ತನ್ನನ್ನು ಚಿಕ್ಕಂದಿನಿಂದ ನೋಡಿಕೊಂಡು ಬೆಳೆಸಿದ್ದ ಮಂಥರೆಯ ಮಾತು ಕೇಳಿ ವರಗಳ ದುರ್ಬಳಕೆ ಮಾಡಿಕೊಳ್ಳುತ್ತಾಳೆ. ಮುಂದೆ ಆಗುವುದೆಲ್ಲ ದೊಡ್ಡ ರಾಮಾಯಣವೇ ಬಿಡಿ.

ದ್ವಾಪರಯುಗದಲ್ಲಿ ಸತ್ಯಭಾಮೆ ಕೂಡ ಯುದ್ಧದಲ್ಲಿ ಭಾಗವಹಿಸಿದ್ದು ಕಾಣಬಹುದು. ಪ್ರಾಗ್ಜ್ಯೋತಿಷಪುರ (ಇಂದಿನ ಅಸ್ಸಾಂ) ನರಕಾಸುರನ ರಾಜಧಾನಿ. ಅವನು ಭೂದೇವಿಯ ಮಗ. ಅವನು ಮರಣ ಅವನ ತಾಯಿಯ ಕೈಯ್ಯಲ್ಲೇ ಎಂದು ವರವಿರುತ್ತದೆ. ಅವನ ಉಪಟಳವನ್ನು ತಾಳಲಾರದೆ ವಿಷ್ಣುವಿನ ಅವತಾರವಾದ ಕೃಷ್ಣ ಮತ್ತು ಅವನ ಪತ್ನಿ, ಭೂದೇವಿಯ ಅವತಾರವಾದ ಸತ್ಯಭಾಮೆ ಗರುಡನ ಮೇಲೆ ಕುಳಿತು ನರಕಾಸುರನ ಮೇಲೆ ಯುದ್ಧಕ್ಕೆ ಹೋಗುತ್ತಾರೆ. ಆಗ ಕೂಡ ಒಳ್ಳೆಯ ತಂದೆ ತಾಯಿಗಳಿಗೆ ಪುಂಡ ಮಕ್ಕಳು ಇರುತ್ತಿದ್ದರು ಎಂದಾಯಿತು. ಯುದ್ಧದಲ್ಲಿ ಕೃಷ್ಣನು ಮೂರ್ಛೆ ಹೋಗಿದ್ದಾಗ ಸತ್ಯಭಾಮೆ ಯುದ್ಧವನ್ನು ಮುಂದುವರೆಸಿ ನರಕಾಸುರನ ವಧೆ ಮಾಡುತ್ತಾಳೆ. ಹೀಗೆ ಇಲ್ಲೂ ಕೂಡ ಮಹಿಳೆ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಾಣಬಹುದು.

ದ್ರೌಪದಿ ಕೂಡ ತನ್ನ ಗಂಡಂದಿರ ಮುಖ್ಯ ನಿರ್ಧಾರಗಳಲ್ಲಿ ಭಾಗವಹಿಸುತ್ತಿದ್ದಳು ಎಂದು ಮಹಾಭಾರತದಲ್ಲಿ ಬರುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ನೇರವಾಗಿ ಭಾಗವಹಿಸದೇ ಇದ್ದರೂ, ಅದರ ಮುಖ್ಯ ಕಾರಣಕರ್ತರಲ್ಲಿ ದ್ರೌಪದಿಯೂ ಒಬ್ಬಳು.

ಇವೆಲ್ಲ ಪುರಾಣ ಆಯಿತು. ಅದಕ್ಕೆಲ್ಲ ಯಾವುದೇ ಆಧಾರವಿಲ್ಲ, ಯುಗಯುಗಳಿಂದ ಹರಿದು ಬಂದ ಕತೆಗಳು, ಶ್ಲೋಕಗಳು, ತಾಳೆಗರಿ ದಾಖಲೆಗಳನ್ನು ಬಿಟ್ಟರೆ. ಇತಿಹಾಸವನ್ನು ನೋಡಿದರೆ ಅನೇಕ ಮಹಿಳಾ ಆಡಳಿತಗಾರರು, ಶತ್ರುಗಳೊಡನೆ ಹೋರಾಡಿದ ವೀರ ಮಹಿಳೆಯರು ಸಿಗುತ್ತಾರೆ. ದೆಹಲಿಯನ್ನು ಆಳಿದ ಏಕೈಕ ಮುಸ್ಲಿಮ್ ಮಹಿಳೆ ರಜಿಯಾ ಸುಲ್ತಾನ (1236-1240), ಅಕ್ಬರನ ಸೈನ್ಯದ ಜೊತೆ ಯುದ್ಧ ಮಾಡಿದ ರಾಣಿ ದುರ್ಗಾವತಿ, ಔರಂಗಜೇಬನ ವಿರುದ್ಧ ಹೋರಾಡಿದ ಕೆಳದಿಯ ಚೆನ್ನಮ್ಮ, ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ಕಿತ್ತೂರು ಚೆನ್ನಮ್ಮ, ಝಾನ್ಸಿಯ ಲಕ್ಷ್ಮಿಬಾಯಿ (ಮೂಲ ಹೆಸರು ಮಣಿಕರ್ಣಿಕಾ), ಪೋರ್ತುಗೀಸರನೊಡನೆ ಹೋರಾಡಿದ ತುಳುನಾಡಿನ ರಾಣಿ ಅಬ್ಬಕ್ಕ, ಅಬ್ಬಬ್ಬಾ! ದೆಹಲಿಯ ಇಂದಿನ "ರಾಣಿ"ಯ ಬಗ್ಗೆ ಮುಂದೆ ಯಾರಾದರೂ ಹೀಗೆ ಬರೆಯಬಹುದೇನೋ???

ಅಂಗವಿಕಲರ ಸ್ಥಾನ
ಈಗ ವಿಕಲಚೇತನರಿಗೆ ಅನೇಕ ಸೌಲಭ್ಯಗಳು ಸಿಗುತ್ತಿವೆ. ಹಿಂದಿನ ಕಾಲದಲ್ಲಿ ಹೇಗಿತ್ತು? ಒಬ್ಬ ಅಂಧ ವ್ಯಕ್ತಿ ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯಾಗಿದ್ದು ದ್ವಾಪರಯುಗದಲ್ಲಿ ಕಾಣುತ್ತದೆ. ಹಸ್ತಿನಾಪುರದ ರಾಜ ಮೊದಲು ಕಿರಿಯವನಾದ ಪಾಂಡು. ಅವನ ಸಾವಿನ ನಂತರ ದೊಡ್ಡವನಾದ ಧೃತರಾಷ್ಟ್ರ ಅಂಧನಾಗಿದ್ದರೂ ಸಿಂಹಾಸನವೇರಬೇಕಾಗುತ್ತದೆ. ಮೊದಲೆಲ್ಲ ಭೀಷ್ಮ, ನಂತರ ದುರ್ಯೋಧನರ ಕೈಗೊಂಬೆ ರಾಜನಾಗಿದ್ದರೂ, official ಆಗಿ ರಾಜನಾಗಿದ್ದು ಧೃತರಾಷ್ಟ್ರ ತಾನೆ? ಒಬ್ಬ ದೃಷ್ಟಿಹೀನ ವ್ಯಕ್ತಿ ಒಂದು ದೊಡ್ಡ ದೇಶದ ರಾಜನಾಗಿದ್ದು ಸಾಮಾನ್ಯ ವಿಷಯವೇನಲ್ಲ.

ಉದ್ದಿಮೆ, ವೃತ್ತಿಗಳು
ಒಬ್ಬ ವ್ಯಕ್ತಿ ಮಾಡುವ ಕೆಲಸದಿಂದ ಅವನ ಜಾತಿಯನ್ನು ನಿರ್ಧರಿಸಿದ್ದು ಎಲ್ಲರಿಗೂ ಗೊತ್ತಿರುವುದೇ. ರಾಜ, ಮಂತ್ರಿ, ಪುರೋಹಿತ, ಗುರು (ದ್ರೋಣಾಚಾರ್ಯ, ಬೃಹನ್ನಳೆ, ಗರ್ಗ, ವಿಶ್ವಾಮಿತ್ರ), ಋಷಿ, ಸೂತ (ರಥ ನಡೆಸುವವನು, ಸಂಜಯ, ಕರ್ಣನ ತಂದೆ), ವೈದ್ಯ (ಧನ್ವಂತರಿ, ಅಶ್ವಿನಿ ಸಹೋದರರು, ಚ್ಯವನ), ಶಿಲ್ಪಿ (ಮಯ), ಅಡುಗೆಯವರು (ಭೀಮ, ನಳ) ಹೀಗೆ ಕೆಲ ವೃತ್ತಿಗಳ ಉಲ್ಲೇಖ ನಮ್ಮ ಪುರಾಣ, ಮಹದ್ಗ್ರಂಥಗಳಲ್ಲಿವೆ. ಆಗ ಇದ್ದ ಉದ್ದಿಮೆಗಳೇನು? ಆಭರಣಗಳಿಗೆ ಬೇಕಾಗುವ ಚಿನ್ನ, ರತ್ನಗಳ ಗಣಿಗಾರಿಕೆ ಹೇಗಿತ್ತು? ಯುದ್ಧ ಸಲಕರಣೆಗಳನ್ನು ಹೇಗೆ ತಯಾರಿಸುತ್ತಿದ್ದರು? ಆಹಾರ ತಯಾರಿಕೆ, ಸರಬರಾಜು ಹೇಗಿತ್ತು? ಒಂದು ರಾಜ್ಯದಿಂದ ದೂರದ ಇನ್ನೊಂದು ರಾಜ್ಯಕ್ಕೆ ಸುದ್ದಿ ಹೇಗೆ ತಲುಪಿಸುತ್ತಿದ್ದರು? ಅರಮನೆ, ಕೋಟೆ, ದೇವಾಲಯಗಳನ್ನು ಹೇಗೆ, ಯಾರು ಕಟ್ಟುತ್ತಿದ್ದರು? ಯಾವುದರ ಬಗ್ಗೆಯೂ ದಾಖಲೆಗಳಿಲ್ಲ. ಆದರೆ ಹೈನುಗಾರಿಕೆ ಒಂದು ಉದ್ದಿಮೆಯಾಗಿತ್ತು ಎಂದು ದ್ವಾಪರಯುಗದಲ್ಲಿ ಕಾಣಬಹುದು. ವೃಂದಾವನದ ಜನ ಹಾಲು, ಮತ್ತದರ ಉತ್ಪನ್ನಗಳನ್ನು ಮಥುರಾ ಮುಂತಾದ ದೊಡ್ಡ ಪಟ್ಟಣಗಳಿಗೆ ಸರಬರಾಜು ಮಾಡುತ್ತಿದ್ದರು ಎಂದು ಮಹಾಭಾರತದಲ್ಲಿ ಕಾಣಬಹುದು.

ಪುರಾ ಮತ್ತು ಇತಿಹಾಸ
ಅದೆಲ್ಲ ಸರಿ, ಪುರಾಣ (mythology) ಮತ್ತು ಇತಿಹಾಸ (history), ಇವೆರಡರ ಮಧ್ಯೆ ಇರುವ ಸರಹದ್ದು ಯಾವುದು? ಪುರಾಣದಲ್ಲಿ ಬರುವ ಇಂದ್ರ, ಅಗ್ನಿ, ವಾಯು, ದೇವತೆಗಳು, ರಾಕ್ಷಸರು, ದೇವ ದಾನವ ಯುದ್ಧಗಳು ಈಗೆಲ್ಲಿ? ಅವರೆಲ್ಲ ಈಗೇನು ಮಾಡುತ್ತಿದ್ದಾರೆ? ಕಲಿಯುಗದಲ್ಲಿ ದೇವತೆಗಳು ಮತ್ತು ರಾಕ್ಷಸರು ಮನುಷ್ಯರಾಗಿ ಭೂಲೋಕದಲ್ಲಿ ಹುಟ್ಟುತ್ತಾರೆ ಎಂಬ ಪ್ರಸ್ತಾಪ ಮಹಾಭಾರತದಲ್ಲಿ ಬರುತ್ತದೆ. ಈಗಿನ ಭಯೋತ್ಪಾದರನ್ನು ರಾಕ್ಷಸರ ಪುನರ್ಜನ್ಮವೆನ್ನಬಹುದೇನೋ.

ದಶಾವತಾರದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಪರಶುರಾಮನ ಕಾಲದವರೆಗೆ ಪುರಾಣ ಕಾಲವೆನ್ನಬಹುದು. ತ್ರೇತಾಯುಗದಿಂದ ಪುರಾಣ ಮತ್ತು ಇತಿಹಾಸ ಇವೆರಡರ ಕಲಸುಮೇಲೋಗರ (intermixing) ಕಾಣಬಹುದು. ಹತ್ತು ತಲೆ, ಇಪ್ಪತ್ತು ಕೈಗಳು ಇರುವ ರಾವಣ, ಭೂಮಿ ಆಕಾಶ ಸಂಚರಿಸುವ ನಾರದ, ಸಮುದ್ರ ದಾಟುವ, ಪರ್ವತ ಎತ್ತುವ ಹನುಮಂತ, ಬೆಂಕಿ ಮೂಲಕ ಹೋದರೂ ಸಾಯದ ಸೀತೆ ಮುಂತಾದ ಅತಿಮಾನುಷ ವ್ಯಕ್ತಿತ್ವಗಳು ಕಾಣಬಹುದು. ಅದೇ ರೀತಿ ಅಯೋಧ್ಯ, ಹಂಪೆ, ಲಂಕೆ ಮುಂತಾದ "ಐತಿಹಾಸಿಕ" ಅಂದರೆ ಭೂಮಿಯ ಮೇಲೆ ಇಂಥದ್ದೇ ಜಾಗ ಎಂದು ತೋರಿಸಬಹುದಾದ ಪ್ರದೇಶಗಳೂ ಕಾಣಬಹುದು. ಅಂದರೆ ಈ ಕಾಲದಿಂದ ಸ್ವಲ್ಪ ಸ್ವಲ್ಪವಾಗಿ ಪುರಾಣ ಕಡಿಮೆಯಾಗುತ್ತ, ಇತಿಹಾಸ ಪ್ರಾರಂಭವಾಗುತ್ತದೆ.

ದ್ವಾಪರಯುಗದಲ್ಲೂ ಇದನ್ನು ಕಾಣಬಹುದು. ಹಸ್ತಿನಾಪುರ (ಮೀರಟ್ ಬಳಿ ಈಗ ಚಿಕ್ಕ ಗ್ರಾಮವಾಗಿದೆ), ಮಥುರಾ, ಇಂದ್ರಪ್ರಸ್ಥ (ಇಂದಿನ ದೆಹಲಿ), ದ್ವಾರಕೆ (ಇಂದಿನ ಗುಜರಾತಿನಲ್ಲಿದೆ, ಸಮುದ್ರದಲ್ಲಿ ಮುಳುಗಿದೆ), ಮುಂತಾದ ಜಾಗಗಳನ್ನು ತೋರಿಸಬಹುದು. ಹಾಗೆ ರಾಕ್ಷಸರನ್ನು ಕೊಲ್ಲುವ, ವಿಶ್ವರೂಪ ತೋರಿಸುವ ಕೃಷ್ಣ, ಪಾಂಡವರ ಜನನಕ್ಕೆ ಕಾರಣವಾಗುವ ಇಂದ್ರ, ಯಮ, ವಾಯು ಮುಂತಾದ "ಸ್ವರ್ಗ"ದಲ್ಲಿರುವ ದೇವತೆಗಳು, ಸ್ವರ್ಗಕ್ಕೆ ಹೋಗಿ ಬರುವ ಅರ್ಜುನ, ಶಿವನೆಂಬ ದೇವರೊಡನೆ ಹೋರಾಡಿ ಪಾಶುಪತಾಸ್ತ್ರ ಹೊಂದುವ ಅರ್ಜುನ, ಈ ಕಾಲಘಟ್ಟದಲ್ಲೂ ಮುಖ ತೋರಿಸುವ "ಚಿರಂಜೀವಿ" ಹನುಮಂತ, ಜಾಂಬವಂತ, ಇವೆಲ್ಲ ಪೌರಾಣಿಕತೆಯನ್ನು ತೋರಿಸುತ್ತದೆ.

ಈ ಕಾಲದಿಂದ ಇಂದ್ರ ಮುಂತಾದ ದೇವತೆಗಳ ಸ್ಥಾನಮಾನ ಕಡಿಮೆಯಾಗುತ್ತ ಬರುತ್ತದೆ. ಇಂದ್ರನ ಪೂಜೆಯನ್ನು ಸ್ವತಹ ಕೃಷ್ಣನೇ ತಡೆಹಿಡಿದು, ಪ್ರಕೃತಿಯ (ಗೋವರ್ಧನಗಿರಿ) ಪೂಜೆಯ ಮಹತ್ವ ಸಾರುತ್ತಾನೆ. ಸ್ವಲ್ಪ ಯೋಚಿಸಿ ನೋಡಿ. ಈ ಕಾಲಘಟ್ಟದ ನಂತರ ಅತಿಮಾನುಷ ವ್ಯಕ್ತಿ, ಘಟನೆಗಳು ಅಷ್ಟಾಗಿ ಕಂಡುಬರುವುದಿಲ್ಲ. ಪವಾಡಗಳು, ಅಲ್ಲಿ ಇಲ್ಲಿ ಸ್ವಲ್ಪ ಕಂಡುಬಂದರೂ ಪುರಾಣದಲ್ಲಿ ಬರುವ ಹಾಗೆ ಸಾಮಾನ್ಯ ಘಟನೆಗಳಾಗಿರುವುದಿಲ್ಲ.

ಹಿಂದು ಧರ್ಮ ಪುರಾಣಗಳಂತೆ ಬೈಬಲ್ ನಲ್ಲಿ ಕೂಡ ಪವಾಡ, ಅತಿಮಾನುಷ ಘಟನೆಗಳ ವರ್ಣನೆಯಿದೆ. ಸಮುದ್ರ ಸೀಳುವ ಮೋಸಸ್, ಜಗತ್ತಿನ ಎಲ್ಲ ಜೀವರಾಶಿಯ ಗಂಡು ಹೆಣ್ಣು ಪ್ರಾಣಿಗಳನ್ನು ದೋಣಿಯಲ್ಲಿ ಸಾಗಿಸಿ ರಕ್ಷಿಸುವ ನೊವಾ (Noah's Ark), ದೇವರಿಂದ ನೇರ ಜನಿಸುವ ಆಡಮ್ (ಆದಿಮ??), ಈವ್, ಅವರನ್ನು ಪಾಪಿಗಳನ್ನಾಗಿಸುವ ಸೈತಾನ, ಸತ್ತವರನ್ನು ಬದುಕಿಸುವ, ಸ್ವತಃ ತಾನೇ ಪುನರ್ಜನ್ಮ ಎತ್ತುವ ಕ್ರಿಸ್ತ, ಹೀಗೆ ಹೇರಳ ಅದ್ಭುತ ಎನಿಸುವ ಕಾರ್ಯ, ಘಟನೆಗಳು ಬೈಬಲ್ ನಲ್ಲಿವೆ. ಇಲ್ಲೂ ಕೂಡ ಗಮನಿಸಿದರೆ, ಕ್ರಿಸ್ತನ ಕಾಲದ ನಂತರ ಇಂತಹ ಅದ್ಭುತ ಘಟನೆಗಳು ಅಷ್ಟಾಗಿ ಕಂಡುಬರುವುದಿಲ್ಲ. ನಮ್ಮ ಹಾಗೆ ಕ್ರೈಸ್ತರೂ ಪವಾಡಗಳನ್ನು ನಂಬುತ್ತಾರೆ. ಕ್ರೈಸ್ತರು ಸಂತ ಪದವಿ (saint) ಪಡೆಯಬೇಕಾದರೆ ಅವರು ಪವಾಡ ಮಾಡಿರಲೇಬೇಕು ಎನ್ನುವ ನಿಯಮವಿದೆ.

ಬೈಬಲ್ ಕಥೆಗಳಿಗೂ ನಮ್ಮ ಪುರಾಣ ಕಥೆಗಳಿಗೂ ಕೆಲ ಸಾಮ್ಯತೆ ಇವೆ. ನಮ್ಮಲ್ಲಿ ಹೇಗೆ ದೇವರು (ವಿಷ್ಣು) ಒಂಭತ್ತು ಸಲ ಅವತಾರ ಎತ್ತಿದ್ದನು, ಹತ್ತನೆಯ ಅವತಾರದ ವೇಳೆ ಪ್ರಳಯವಾಗುತದೆ ಎನ್ನುವ ನಂಬಿಕೆ ಇದೆಯೋ, ಹಾಗೆ ಬೈಬಲ್ ನಲ್ಲಿ ಕೂಡ ದೇವರು ಭೂಮಿಗೆ ಒಂಭತ್ತು ಸಲ ಭೇಟಿ ಇತ್ತಿದ್ದಾನೆ, ಹತ್ತನೆ ಸಲ ಬಂದಾಗ ಪ್ರಳಯವಾಗುತ್ತದೆ ಎನ್ನುವ ಪ್ರಸ್ತಾಪವಿದೆ. ನಮ್ಮಲ್ಲಿ ಕೂರ್ಮಾವತಾರದ ವೇಳೆ ಮನುವು ಜೀವರಾಶಿಯನ್ನು, ಗಿಡಮೂಲಿಕೆಗಳನ್ನು ದೋಣಿಯಲ್ಲಿ ಜಲಪ್ರಳಯದಿಂದ ರಕ್ಷಿಸಿದ್ದನು ಎಂದು ಇದೆಯೋ ಹಾಗೆ ಕ್ರೈಸ್ತರಲ್ಲಿ ನೋವಾನು ಜಲಪ್ರಳಯದಿಂದ (The Great Flood) ಜೀವರಾಶಿಯನ್ನು ರಕ್ಷಿಸಿದ್ದನು ಎನ್ನುವ ನಂಬಿಕೆ ಇದೆ.

ಇದಿಷ್ಟು ಸದ್ಯಕ್ಕೆ ನನಗೆ ಬಂದ ಆಲೋಚನೆಗಳು. ಹೀಗೆ ಯೋಚಿಸುತ್ತಾ ಹೋದರೆ ಇನ್ನೂ ಅದ್ಭುತ ಸಂಗತಿಗಳು ಕಾಣಬಹುದೇನೋ.

9 comments:

ಅನಂತ್ ರಾಜ್ said...

uttma vicharagalannu prastuta padisidderi deepasmitha avare. aadare yenu pratipaadisuttidderi endu arivaagalilla. bahushaha nimma alochanegalannu daakhalisidderi endu nanna anisike.. sariye?

shubhashayagalu
ananth

shivu.k said...

ಕುಲದೀಪ್ ಸರ್,

ನೀವು ಬರೆದಿರುವ ವಿಚಾರ ತುಂಬಾ ಚೆನ್ನಾಗಿದೆ. ಅದನ್ನು ನಿರೂಪಿಸಿರುವ ರೀತಿಯೂ ಇಷ್ಟವಾಯಿತು..

ದೀಪಸ್ಮಿತಾ said...

ಅನಂತರಾಜ್ ಸರ್, ನೀವು ಬರೆದಂತೆ ನನಗೆ ಬಂದ ಆಲೋಚನೆಗಳನ್ನು ದಾಖಲಿಸಿದ್ದೇನೆ ಅಷ್ಟೆ. ಮೊದಲೇ ಬರೆದಂತೆ ಇದು ಯಾವುದೋ ಗಂಭೀರ ಸಂಶೋಧನೆಯ ಫಲ ಅಲ್ಲ. ನಮ್ಮ ಪುರಾಣ ಕಥೆಗಳನ್ನು ಯಾರೂ ಹೇಗೆ ಬೇಕಾದರೂ ಅರ್ಥೈಸಬಹುದಲ್ಲ?

ದೀಪಸ್ಮಿತಾ said...

ಶಿವು ಸರ್, ಲೇಖನ ಓದಿ ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು

ಜಲನಯನ said...

ಕುಲದೀಪ್ ಸರ್, ಪೌರಾಣಿಕ, ಐತಿಹಾಸಿಕ, ಆಧಿನಿಕ ಎಲ್ಲ ಕಾಲಗಳ ಆಧಾರದಲ್ಲಿ ಸಮಾಜದ ಆಗು ಹೋಗುಗಳಲ್ಲಿ ಹೆಣ್ಣಿನ ಪಾತ್ರದ ಚಿತ್ರಣ ಚನ್ನಾಗಿದೆ...

sunaath said...

ಕುಲದೀಪರೆ,
ನೀವು ಹೇಳುತ್ತಿರುವದು ಸತ್ಯವೆಂದು ಅನಿಸುತ್ತದೆ. ನಮ್ಮ ಪುರಾಣಗಳಲ್ಲಿ ಬರೆದಿರುದನ್ನು ನಾವು ಈ ಬೆಳಕಿನಲ್ಲಿ
ಪರೀಕ್ಷಿಸುವ ಅವಶ್ಯಕತೆ ಇದೆ. ಉತ್ತಮ ಲೇಖನ.

ಸುಧೇಶ್ ಶೆಟ್ಟಿ said...

vicharadhaare thumba ishta aayitu.... chandada baraha...

http://jyothibelgibarali.blogspot.com said...

nivu breyuva shaily ishtavayithu.. hennina bagge chennagi barediddiri ...

http://jyothibelgibarali.blogspot.com said...
This comment has been removed by the author.