Monday, 2 October 2017

ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ

ಅರೆ, ಇದೇನಿದು, ಈ ಬ್ಲಾಗ್ ಪುಟ ಯಾವಾಗ ಸುದ್ದಿವಾಹಿನಿ ಆಯಿತು? ಹೌದು, ಇದು ನಮ್ಮ ಸುದ್ದಿವಾಹಿನಿಗಳು ಉಪಯೋಗಿಸುವ ಪದಪುಂಜಗಳ ಬಗ್ಗೆ. ಈಗೆ ಎಡಬಿಡದೆ ಮಳೆ ಸುರಿಯುತ್ತಿದೆ ಎಲ್ಲಾ ಕಡೆ. ಟಿವಿ ಚಾನಲ್‌ಗಳನ್ನು ನೋಡಿ. "ವರುಣನ ಆರ್ಭಟ, ವರುಣನ ಅಬ್ಬರ" ಎಂಬ ಶೀರ್ಷಿಕೆಗಳ ಅಬ್ಬರ. ಸುಮ್ಮನೆ ಮಳೆ ಎಂದರೆ ಅದು ಸಪ್ಪೆ, ವರುಣನ ಆರ್ಭಟ ಎಂದೇ ಹೇಳಬೇಕು, ಬರೆಯಬೇಕು. ನಾಲ್ಕು ಹನಿ ಮಳೆಯಾಗಲೀ, ಕುಂಭದ್ರೋಣ ಮಳೆಯಾಗಲಿ, ಈ ವಿಶೇಷಣ ಉಪಯೋಗಿಸಲೇಬೇಕು.

ಇನ್ನು ಬೆಂಗಳೂರನ್ನು ಬೆಂಗಳೂರು ಎಂದು ಕೇಳಿ, ಓದಿ ಎಷ್ಟು ಸಮಯವಾಯಿತೋ ಎನಿಸುತ್ತದೆ. ಕೊಳಚೆ ಪ್ರದೇಶದ ಸುದ್ದಿಯಿರಲಿ, ಉದ್ಯಾನವಿರಲಿ, ಮಾಲ್ ಸುದ್ದಿಯಿರಲಿ, ರಸ್ತೆ ಬಗ್ಗೆ ಇರಲಿ, ಸಿಲಿಕಾನ್ ಸಿಟಿ ಎಂದೇ ಸಂಬೋಧಿಸಬೇಕು. ಆಗಾಗ ಕೇಳಿಬರುವ ಇನ್ನೊಂದು ವಿಶೇಷಣ ಪದ "ಉದ್ಯಾನ ನಗರಿ". ಇದು "ಸಿಲಿಕಾನ್ ಸಿಟಿ" ಯಷ್ಟು ಪ್ರಯೋಗದಲ್ಲಿಲ್ಲ, ಆದರೆ ಕೆಲ ವರ್ಷಗಳ ಹಿಂದೆ ಇದು ಸ್ವಲ್ಪ ಅತೀ ಪ್ರಯೋಗದಲ್ಲಿತ್ತು.

ಅತಿಯಾದ ವಿಶೇಷಣ ಪದಗಳ ಇತರ ಊರುಗಳೂ ಇವೆ. ಮೈಸೂರನ್ನು "ಅರಮನೆ ನಗರಿ" ಎಂದೇ ಹೇಳಬೇಕು. ಬೆಳಗಾವಿ "ಕುಂದಾ ನಗರಿ" ಆಗಲೇಬೇಕು. ಶಿವಮೊಗ್ಗ "ತುಂಗಾ ನಗರಿ". ಚಿತ್ರದುರ್ಗ "ಕೋಟೆ ನಗರಿ"

ಸಚಿನ್ ತೆಂಡುಲ್ಕರ್ ಬಗ್ಗೆ ಪ್ರತಿಸಲ ಹೇಳುವಾಗಲೂ "ಮಾಸ್ಟರ್ ಬ್ಲಾಸ್ಟರ್" ಎಂದೇ ಸಂಬೋಧಿಸಬೇಕು.


ಈ ವಿಶೇಷಣ ಪದಗಳು ಪ್ರಾರಂಭದಲ್ಲಿ ಕೇಳುವಾಗ ಅಷ್ಟೇನೂ ಅನಿಸುವುದಿಲ್ಲ. ಆದರೆ ಅತೀ ಬಳಕೆಯಿಂದ, ಸಮಯ ಸಂದರ್ಭ ನೋಡದೆ, ಎಲ್ಲಾ ಸತಿ ಅವನ್ನೇ ಬಳಸಿದಾಗ ಕಿರಿಕಿರಿ ಎನಿಸುತ್ತದೆ. ದಸರಾ ಬಗ್ಗೆ ಹೇಳುವಾಗ "ಅರಮನೆ ನಗರಿ" ಎಂದರೆ ಸರಿ ಇರಬಹುದೇನೊ. ಮೈಸೂರಿನ ಕೊಳಚೆ ಪ್ರದೇಶದ ಬಗ್ಗೆ ಹೇಳುವಾಗಲೂ ಇದೇ ಪದ ಪ್ರಯೋಗ ವಿಚಿತ್ರವಲ್ಲವೆ? ಅತೀ ಬಳಕೆಯಿಂದ ಕ್ಲೀಷೆ (cliche) ಎನಿಸುತ್ತದೆ. ನೇರ ಪದ ಉಪಯೋಗಿಸಿದರೆ ಸಪ್ಪೆ ಎಂದು ತಿಳಿದುಕೊಂಡಿದ್ದಾರೋ ನಮ್ಮ ಸುದ್ದಿವಾಹಿನಿಗಳು. ಈಗ ಪತ್ರಿಕೆಗಳು, ನೆಟ್ ಪತ್ರಿಕೆಗಳೂ ಈ ವ್ಯಾಧಿ ಶುರುಮಾಡಿಕೊಂಡಿವೆ

2 comments:

sunaath said...

ಸರಿಯಾಗಿ ಹೇಳಿದ್ದೀರಿ. ಈ ಕ್ಲೀಶೆಗಳಿಂದಾಗಿ ವಾಕರಿಕೆ ಬರುವಂತಾಗಿದೆ.

nenapina sanchy inda said...

ಸರಿಯಾಗಿ ಹೇಳಿದ್ದೀರಿ ☺☺
ಮಾಲತಿ ಶೆಣೈ