Wednesday, 21 October 2009

ಪ್ರಕೃತಿ ಸೌಂದರ್ಯ - ನಮ್ಮ ಸುತ್ತಮುತ್ತಲಿನಲ್ಲೇ ಇದೆ






ಮೇಲಿನ ಚಿತ್ರಗಳನ್ನು ನೋಡಿದರೆ ಎಲ್ಲಿಯದು ಎಂದು ಊಹಿಸಲು ಸಾಧ್ಯವೇ? ಯಾವುದೋ ದಟ್ಟ ಅರಣ್ಯ, ಅಲ್ಲಿಯ ಕೆರೆ ಇಲ್ಲ ನದಿ ಅನಿಸಬಹುದು. ಎಲ್ಲಿಯೂ ಹೋಗಬೇಕಾಗಿಲ್ಲ. ಈ ಚಿತ್ರಗಳು ಬೆಂಗಳೂರಿನದೇ. ಸರ್ಜಾಪುರ ರಸ್ತೆಯ ಒಳ ರಸ್ತೆಯಲ್ಲಿ ಹೋದರೆ ಎಚ್.ಎಸ್.ಆರ್.ಲೇಯೌಟ್ ಬಳಿ ಇರುವ ಹರಳೂರು ಗ್ರಾಮದ ಎರಡು ಬೇರೆ ಕೆರೆಗಳ ಚಿತ್ರಗಳು.

ಇದನ್ನು ಬರೆಯುವ ಕಾರಣ ಏನೆಂದರೆ, ನಾವು ನಿಸರ್ಗವನ್ನು ಹುಡುಕಿಕೊಂಡು ಎಲ್ಲೆಲ್ಲೋ ಹೋಗಬೇಕಾಗಿಲ್ಲ. ನಿಸರ್ಗ, ಪ್ರಕೃತಿ ಸೌಂದರ್ಯ ಎಂದರೆ ಎಲ್ಲೋ ದೂರದ ಕಾಡು ಬೆಟ್ಟ ಜಲಪಾತ ಮಾತ್ರ ಎಂಬ ಭ್ರಮೆ ನಮ್ಮ ಅನೇಕರಲ್ಲಿದೆ, ಅದರಲ್ಲೂ ನಗರವಾಸಿಗಳಲ್ಲಿ. ಹೆಚ್ಚಿನ ಜನರಲ್ಲಿ ಇದೇ ಭಾವನೆ, ಪ್ರಕೃತಿಯನ್ನು ನೋಡುವುದು ಎಂದಕೂಡಲೆ ಯಾವುದೋ resort, package tour, trekking club ನವರು ಕರೆದುಕೊಂಡು ಹೋಗಿ ತೋರಿಸುವ ಗುಡ್ಡ ಬೆಟ್ಟ, ಜಲಪಾತ, ನದಿ, ಕೆರೆ, ತೊರೆ ಎಂಬ ಭಾವನೆ.

ಹೆಚ್ಚಿನವರಿಗೆ ತಾವು ನೋಡಲಿರುವ ಜಾಗಗಳ ಬಗ್ಗೆ ಆಸಕ್ತಿ, ಕುತೂಹಲ ಕೂಡ ಇರುವುದಿಲ್ಲ. Tourನವರು ಹೇಗೂ ತೋರಿಸುತ್ತಾರೆ ಎಂಬ ಉಡಾಫೆ. ಅವರು ಏನನ್ನು ತೋರಿಸುತ್ತಾರೋ, 'ಹಾ ಚೆನ್ನಾಗಿದೆ, ಆ ಫಾಲ್ಸ್ ಚೆನ್ನಾಗಿದೆ, ಈ ದೇವಸ್ಥಾನ ಚೆನ್ನಾಗಿದೆ' ಎಂದು ಉದ್ಗರಿಸಿ, ತಮ್ಮ ಫೋಟೋ ತೆಗೆಸಿಕೊಂಡರೆ ಸಾಕು, ಅದೇ ಸಾರ್ಥಕ.

ನಾನು ಪ್ರವಾಸಿ ಸ್ಥಳಗಳಲ್ಲಿ ನೋಡಿದ್ದೇನೆ, ಅನೇಕ ಪ್ರವಾಸಿಗರಿಗೆ ತಮ್ಮ ಫೋಟೋ ತೆಗೆಸಿಕೊಳ್ಳುವುದರಲ್ಲೇ ಆಸಕ್ತಿ, ಹಿಂದಿರುವ ಪ್ರೇಕ್ಷ್ನಣೀಯ ಜಾಗದ ಫೋಟೋ ಬರದಿದ್ದರೂ ಪರವಾಗಿಲ್ಲ, ತಮ್ಮ ಫೋಟೋ ಬರಬೇಕು. ತಾವು ಇಂಥಾ ಜಾಗಕ್ಕೆ ಹೋಗಿದ್ದೆವು ಎಂಬ ನೆನಪಿಗೆ ತಮ್ಮ ಫೋಟೋ ತೆಗೆಸಿದರೆ ತಪ್ಪೇನಿಲ್ಲ, ಆದರೆ ಎಲ್ಲಾ ಜಾಗಗಳಲ್ಲೂ ಈ ಪ್ರವೃತ್ತಿ ಮುಂದುವರೆಯುತ್ತದೆ. ಅವರ ಯಾವ ಫೋಟೋ ನೋಡಿದರೂ ಕಾಣುವುದು ಅವರ ಮುಖಗಳೇ. ಹೋಗಿದ್ದ ಪ್ರವಾಸಿ ಸ್ಥಳದ ಚಿತ್ರ ಎಲ್ಲೋ ಹಿಂದೆ ಮಸುಕಾಗಿರುತ್ತದೆ.

ಹೋದ ಸ್ಥಳದ ಮಹತ್ವ, ಅಲ್ಲಿ ತಾವು ಇರಬೇಕಾದ ರೀತಿ, ಇವಾವುದರ ಬಗ್ಗೆಯೂ ಆಸಕ್ತಿ ನಮ್ಮಲ್ಲನೇಕರಿಗೆ ಇರುವುದಿಲ್ಲ. ಕಾಡಿನಲ್ಲಿ ಒಂದು ಜಲಪಾತದ ಬಳಿ ಹೋಗಿದ್ದಾಗ, ಒಂದು ಹುಡುಗಿ high heeled shoe ಧರಿಸಿ ಬಂದಿದ್ದು ನೋಡಿ ಆಶ್ಚರ್ಯವಾಗಿತ್ತು. ಇದೇನು ಕಾಲೇಜ್ ಇಲ್ಲ ನಗರದ ರಸ್ತೆಯೇ? ಕಾಡು, ಗುಡ್ಡ ಬೆಟ್ಟದಲ್ಲಿ ಓಡಾಡಬೇಕಾದರೆ ಎಂಥಾ ಬಟ್ಟೆ ಇರಬೇಕು ಎಂಬುದರ ಪ್ರಾಥಮಿಕ ಜ್ಞಾನ ಕೂಡ ಇಲ್ಲದೆ ಬಂದಿದ್ದು ನೋಡಿ ವಿಚಿತ್ರ ಎನಿಸಿತು. ಇದು ಕೇವಲ ಶಾಲಾ ಕಾಲೇಜ್ ವಿದ್ಯಾರ್ಥಿಗಳ ನಡವಳಿಕೆ ಮಾತ್ರ ಎಂದು ಭಾವಿಸಬೇಕಾಗಿಲ್ಲ. ಒಂದು ಬೆಟ್ಟ ಹತ್ತುತ್ತಿದ್ದಾಗ ದಾರಿಯುದ್ದಕ್ಕೂ ಕೆಳಗೆ ಹರಿಯುತ್ತಿದ್ದ ನದಿಯ ಜುಳುಜುಳು ಸಪ್ಪಳ ಸುಂದರವಾಗಿ ಕೇಳಿಸುತ್ತಿತ್ತು. ಎದುರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬ walkman ಹಿಡಿದುಕೊಂಡು ಚಿತ್ರಗೀತೆ ಕೇಳುತ್ತ ಬರುವುದು ನೋಡಿ ಆಶ್ಚರ್ಯವಾಗಿತ್ತು. ಅಲ್ಲ, ಹಾಡು ಸಂಗೀತ ಎಲ್ಲಿಯೂ ಕೇಳಬಹುದು. ಆದರೆ ಈ ಪ್ರಕೃತಿಯ ಅದ್ಭುತ ಸಂಗೀತ ಬೇರೆಲ್ಲಿಯಾದರೂ ಕೇಳಲು ಸಾಧ್ಯವೇ? ನಗರಕ್ಕೆ ಬಂದ ಮೇಲೆ ಈ ಜುಳು ಜುಳು ನಿನಾದ ಮತ್ತೆ ಕೇಳಲು ಆಗುತ್ತದೆಯೇ? ಎಂಥಾ ಮೂರ್ಖರು, ತಾವು ಬಂದ ಜಾಗದ ಸೌಂದರ್ಯವನ್ನು ಅನುಭವಿಸಲೂ ಇವರಿಗೆ ಆಗುತ್ತಿಲ್ಲ ಎಂದು ಬೇಸರವಾಗುತ್ತದೆ. ಇನ್ನು ದೊಡ್ಡದಾಗಿ music ಹಾಕಿಕೊಂಡು ಕಿರುಚುತ್ತ, ಕುಡಿಯುತ್ತ ಮೋಜು ಮಾಡುವುದೇ ಪ್ರವಾಸ ಎಂದು ಭಾವಿಸುವವರ ಬಗ್ಗೆ ಬರೆಯುವುದೇ ಬೇಡ.

ನೂರಾರು ರೂಪಾಯಿ ತೆತ್ತು package tourನಲ್ಲಿ ಹೋಗಿ ನೋಡಿದ ಜಾಗ ಮಾತ್ರ ಪ್ರಕೃತಿ ಎಂಬ ಭ್ರಮೆ ಬೇಡ. ಕಣ್ಣು ತೆರೆದು ನೋಡಿದರೆ, ನಮ್ಮ ಸುತ್ತಮುತ್ತ ಕೂಡ ನಿಸರ್ಗ ಸುಂದರವಾಗೇ ಕಾಣುತ್ತದೆ. ಮೊದಲೇ ತಿಳಿಸಿದಂತೆ ಮೇಲಿರುವ ಚಿತ್ರಗಳು ಬೆಂಗಳೂರು ನಗರದ್ದೇ. ನಾವು ಇಲ್ಲೆ ಹತ್ತಿರದಲ್ಲಿರುವ ಕೆರೆ, ದೊಡ್ಡ ಮರ, ಉದ್ಯಾನವನ, ಊರಿಂದ ತುಸುವೇ ದೂರದ ಚಿಕ್ಕ ಗುಡ್ಡ, ಮನೆಯ ಎದುರಿರುವ ಮರದ ಮೇಲಿನ ಹಕ್ಕಿ ಗೂಡು, ಯಾವುದೇ ಕುಂಡ, flower showದಲ್ಲಿ ಭಾಗವಹಿಸದ ರಸ್ತೆಬದಿ ಹೂವು - ಇಂಥವನ್ನೆಲ್ಲ ಗಮನಿಸುವುದೇ ಇಲ್ಲ.

ಬೇರೆ ಏನೂ ಬೇಡ, ಎಷ್ಟು ಜನ ತಲೆ ಎತ್ತಿ ಆಕಾಶ ನೋಡುತ್ತಾರೆ? ಪ್ರತಿ ಕ್ಷ್ಣಣ ಬದಲಾಗುವ ಮೋಡಗಳು, ದಿನಕಳೆದಂತೆ ಬಣ್ಣ ಬದಲಾಯಿಸುವ ಮೋಡಗಳು ಕೂಡ ನಿಸರ್ಗದ ಭಾಗವಲ್ಲವೇ? ಸಮಯವಿಲ್ಲದವರು ಹೋಗಲಿ, ಬೇಕಾದಷ್ಟು ಸಮಯವಿದ್ದರೂ ನೋಡಿ ಆನಂದಿಸುವವರು ಎಷ್ಟು ಜನ?

ಇವನ್ನೆಲ್ಲ ನೋಡಿ ಸಂತೋಷಪಡಬೇಕಾದರೆ ನಾವು ಬರೀ ಕವಿ, ಸಾಹಿತಿ, ಛಾಯಾಚಿತ್ರಗಾರ ಆಗಬೇಕಾಗಿಲ್ಲ, ನೋಡುವ ಕಣ್ಣು, ಆನಂದಿಸುವ ಮನಸ್ಸಿದ್ದರೆ ಸಾಕಲ್ಲವೇ?

19 comments:

shivu.k said...

ಒಂದು ಉತ್ತಮ ಲೇಖನ ಸರ್.
ಪ್ರತಿಯೊಬ್ಬರೂ ಕೂಡ ನಿತ್ಯ ಬದುಕಿನ ಸಹಜ ಸೌಂದರ್ಯವನ್ನು ಮರೆತು ಹಣ ಖರ್ಚು ಮಾಡಿ ಬೇರೆನೋ ಹುಡುತ್ತಿರುತ್ತಾರೆ. ಅವರಿಗೆಲ್ಲಾ ಯಾವಾಗ ತಿಳಿವಳಿಕೆ ಬರುತ್ತೋ? ಗೊತ್ತಿಲ್ಲ...

SSK said...

ನಿಮ್ಮ ಮಾತು, ಲೇಖನದ ಎಲ್ಲ ಹೇಳಿಕೆಗಳು ಅಕ್ಷರ ಸಹ ನಿಜ.
ಮನ ಮುಟ್ಟುವ ಲೇಖನಕ್ಕೆ ಧನ್ಯವಾದಗಳು!

Me, Myself & I said...

ನಮ್ಮಲ್ಲಿರ್ಬೇಕಾದ ಸಾಮಾಜಿಕ ಜ್ಞಾನದ ಬಗ್ಗೆ ತುಂಬಾ ಸರಳವಾದ ಉದಾಹರಣೆಗಳೊಂದಿಗೆ ಪ್ರಕತಿಸಿದ್ದೀರ.

ಚಂದಿನ | Chandrashekar said...

ಸತ್ಯ,
ಎಲ್ಲೋ ಹುಡುಕಿದೆ ಕಾಣದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ...

Jyoti Hebbar said...

ನಿಮ್ಮ ಬರಹವನ್ನು ಓದಿ ಆ ಸ್ಥಳಕ್ಕೆ ಹೋಗಲೇ ಬೇಕು ಎನಿಸಿತು. ಪ್ರೌಢ ಬರಹಕ್ಕೆ ದನ್ಯವಾದಗಳು.

ಸೀತಾರಾಮ. ಕೆ. / SITARAM.K said...

ನಮ್ಮ ಸುತ್ತ ಮುತ್ತದ ಪ್ರಪ೦ಚವನ್ನು ನೋಡುವ ಬೆರಗುಗಣ್ಣು ಹಾಗೂ ರಸಸ್ವಾದನೆಯ ಚಿರನೂತನ ಮನವಿದ್ದಲ್ಲಿ - ಸೊಬಗು, ಸೌ೦ದರ್ಯ, ಪ್ರಕೃತಿ, ಸಿರಿ, ಅದರ ಸುತ್ತ ಮುತ್ತ ಎನೇ ಇದ್ದರೂ ಅದರಲ್ಲಿ ಅರಳುತ್ತದೇ- ನಿಜವಾಗಿ ಹೇಳಿದಿರಿ. ಲೇಖನ ಚೆನ್ನಗಿ ಮೂದಿದೆ ಒಪ್ಪ ಚಿತ್ರಗಳೊ೦ದಿಗೆ.

ಸವಿಗನಸು said...

ಪ್ರಕೃತಿ ಸೌಂದರ್ಯ ನಮ್ಮ ಸುತ್ತಮುತ್ತಲಿನಲ್ಲೇ ಇದೆ...ಈ ಮಾತು ನಿಜ.
ಉತ್ತಮವಾಗಿ ಬರೆದಿದ್ದೀರ ...
ಧನ್ಯವಾದಗಳು

Jagadeesh Balehadda said...

ಫೋಟೋಗ್ರಾಪಿ ಚನ್ನಾಗಿದೆ ಜೊತೆಗೆ ಬರಹ ಕೂಡಾ.

ದೀಪಸ್ಮಿತಾ said...

ಬ್ಲಾಗ್‍ಗೆ ಭೇಟಿ ನೀಡಿ ಪ್ರತಿಕ್ರಿಯೆ ನೀಡಿದ ನನ್ನ ಸ್ನೇಹಿತರೆಲ್ಲರಿಗೂ ನನ್ನ ವಂದನೆಗಳು. ಹೀಗೆ ಬಂದು ಸಲಹೆ ಸೂಚನೆ ಕೊಡುತ್ತ ಪ್ರೋತ್ಸಾಹ ನೀಡಿ.

Ittigecement said...

ಸತ್ಯವಾದ ಮಾತು...!

"ನೋಡುವ ಕಣ್ಣಿರಲು... ಎಲ್ಲೆಲ್ಲೂ ಸೌಂದರ್ಯವೆ...!"

ಚಂದದ ಫೋಟೊ ಲೇಖನಕ್ಕೆ ಅಭಿನಂದನೆಗಳು...

sughosh s. nigale said...

ಲೇಖನ, ಫೋಟೋ ಎರಡಕ್ಕೂ ಹ್ಯಾಟ್ಸಾಫ್...

ಮನಸು said...

ಚಿತ್ರಗಳು ಚೆನ್ನಾಗಿವೆ, ಅಲ್ಲದೆ ನಿಮ್ಮ ಬರಹ ತುಂಬಾ ಚೆನ್ನಾಗಿದೆ ನಮ್ಮ ಸುತ್ತಮುತ್ತಲಿನ ಸೌಂದರ್ಯದಲ್ಲಿ ವಿಶೇಷತೆ ಕಾಣಬೇಕು..
ಧನ್ಯವಾದಗಳು
ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಜಲನಯನ said...

ದೀಪಸ್ಮಿತಾ ಸರ್, ನಮ್ಮ ಸುತ್ತಮುತ್ತಲೂ ಪ್ರಕೃತಿಯ ಸೊಬಗಿದೆ ಎನ್ನುವುದಕ್ಕೆ ಆ ದೃಷ್ಟಿಯಲ್ಲಿ ನೋಡುವ ಮನಸಿರಬೇಕು ಎನ್ನೋದನ್ನು ಬಹಳ ಚನ್ನಾಗಿ ನಿರೂಪಿಸಿದ್ದೀರಿ..ಬೆಂಗಳೂರಿನ ಸುತ್ತಮುತ್ತಲ ಕೆರೆಗಳನ್ನು ರಕ್ಷಿಸಿದರೆ ನಮ್ಮ ಅಂತರ್ಜಲದ ಸಮಸ್ಯೆಯೂ ಸೊಲ್ಪ ಕಡಿಮೆಯಾಗುವುದಲ್ಲದೇ..ಪರಿಸರದ ರಕ್ಷಣೆಯೂ ಆಗುತ್ತೆ..ಅಲ್ವೇ..?

ವಿ.ರಾ.ಹೆ. said...

ನಮಸ್ತೆ,

ನಿಮ್ಮ ಮಾತುಗಳು ನೂರಕ್ಕೆ ನೂರು ನಿಜ. ಅನುಭವಿಸುವ ಮನಸ್ಸಿದ್ದರೆ ಪ್ರಕೃತಿಯನ್ನು ಎಲ್ಲೆಲ್ಲೂ ಅನುಭವಿಸಬಹುದು.

ಕಂಡ ಕಂಡಲ್ಲಿ ಫೋಟೋ ತೆಗೆಸಿಕೊಳ್ಳುವ ಚಟದವರನ್ನು ಪ್ರವಾಸಕ್ಕೆ ಕರೆದೊಯ್ಯದಿರುವುದೇ ಒಳ್ಳೆಯದು.

ನೀವು ಹೇಳಿದಂತೆ ನನ್ನನಿಸಿಕೆಯೂ ಕೂಡ. ಬಹಳ ಇಷ್ಟವಾಯಿತು ಬರಹ. thank you...

ಗೌತಮ್ ಹೆಗಡೆ said...

olleya baraha. shivu sir helidante namma janakke yavaga buddhi barutto?

ಹರೀಶ ಮಾಂಬಾಡಿ said...

ನಮ್ಮ ಸುತ್ತಮುತ್ತ ನೆಲ್ಲಾ ಇದೆ ಎಂದು ನೋಡದೆ ಇರುವುದೇ ಇದಕ್ಕೆ ಕಾರಣ.
ಈ ಪ್ರವೃತಿ ಜಾಗತೀಕರಣದ ಕೆಟ್ಟ ಅನಾವರಣಕ್ಕೆ ಉದಾಹರಣೆ.

ಕನಸು said...

ಹಾಯ್
ನಿಮ್ಮ ಬ್ಲಾಗು ತುಂಬಾ ಚೆನ್ನಾಗಿದೆ ಆಗಾಗ್ಗೆ ಬರುತ್ತೆನೆ

Badarinath Palavalli said...

ಶೈಲಿ ಚೆನ್ನಾಗಿದೆ.
all the best..
-ಬದರಿನಾಥ ಪಲವಳ್ಳಿ
pl. visit Kannada poems blog:
www.badari-poems.blogspot.com

Unknown said...

tumbaa olle photogaLu Sir. especially 1st and 2nd. munduvarisi