Wednesday, 10 June 2009

’ಇನಿದನಿ’ಗೆ ಒಂದು ವರ್ಷ

ನಾನು ಈ ಬ್ಲಾಗ್ ಪ್ರಾರಂಭಿಸಿ ಒಂದು ವರ್ಷವಾಯಿತು (ಜೂನ್ 10). ಮಧ್ಯದಲ್ಲಿ ಕೆಲಸದ ಒತ್ತಡ, ಸಮಯದ ಅಭಾವದಿಂದ ಸ್ವಲ್ಪಕಾಲ ಬರೆಯುವುದು ನಿಲ್ಲಿಸಿದ್ದರೂ, ಈಗ ಮತ್ತೆ ಚಿಗುರಿದೆ. ನನ್ನ ಬ್ಲಾಗಿಗೆ ಭೇಟಿ ಕೊಟ್ಟು, ಓದಿ, ನೋಡಿ, ಪ್ರತಿಕ್ರಿಯೆ ನೀಡಿದ, ನೀಡುತ್ತಿರುವ, ಪ್ರೋತ್ಸಾಹಿಸುತ್ತಿರುವ ನನ್ನ ಎಲ್ಲಾ ಬ್ಲಾಗ್ ಸ್ನೇಹಿತರಿಗೆ ನಾನು ತುಂಬಾ ಕೃತಜ್ನನಾಗಿದ್ದೇನೆ.

ನನಗೆ photography ಪ್ರಿಯವಾಗಿರುವುದರಿಂದ ಈ ಬ್ಲಾಗಿನಲ್ಲಿ ಬರವಣಿಗೆಗಿಂತ ಫೋಟೋಗಳೇ ಜಾಸ್ತಿ. ಅವಕ್ಕೆ ಭಾವಗೀತೆ, ಚಿತ್ರಗೀತೆ ಶೀರ್ಷಿಕೆ ಕೊಡುವುದು ನನಗೆ ಇಷ್ಟ.

ನಾನು ಇದನ್ನು ಪ್ರಾರಂಬಿಸಿದಾಗ ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಬರೆಯಬೇಕೆಂದಿದ್ದೆ. ಇದುವರೆಗೂ ಇಂಗ್ಲೀಷ್ ಲೇಖನ ಬರೆದಿಲ್ಲ. ಇಂಗ್ಲೀಷ್ ದ್ವೇಷಿಯೇನಲ್ಲ, ಆದರೆ ಕನ್ನಡ ಹೆಚ್ಚು ಪ್ರಿಯ, ಅಷ್ಟೆ. ಮುಂದೆ ಆಂಗ್ಲ ಬರವಣಿಗೆ ಕೂಡ ಮಾಡುತ್ತೇನೆ, ಲೇಖನಕ್ಕೆ ಆ ಭಾಷೆಯೇ ಸೂಕ್ತ ಎನಿಸಿದರೆ.

ಕಂಪ್ಯೂಟರ್ ಮೊದಲು ಬಂದಾಗ, ಅದು ನಮ್ಮ ಭಾಷೆಗಳನ್ನೆಲ್ಲ ನುಂಗಿ ನೀರು ಕುಡಿದುಬಿಡುತ್ತದೆ, ಇನ್ನು ಮೇಲೆ ಬರೀ ಇಂಗ್ಲೀಷ್‍ದೇ ಸಾಮ್ರಾಜ್ಯ ಎಂಬ ಭಯ ಇತ್ತು ಕನ್ನಡಿಗರಲ್ಲಿ (ಮತ್ತು ಇತರ ಭಾಷಿಕರಲ್ಲಿ). ಆದರೆ ನೋಡಿ, ಅಂತರಜಾಲದಿಂದಾಗಿ ಈ ಎಲ್ಲ ಭಾಷೆಗಳು ಇನ್ನಷ್ಟು ಸಮೃದ್ಧಿಯಾಗಿವೆ. ಜಗತ್ತಿನ ಯಾವ ಮೂಲೆಯಿಂದ ಕೂಡ ಒಬ್ಬ ಕನ್ನಡಿಗ ಕನ್ನಡ ಪತ್ರಿಕೆ ಓದಬಹುದು, ಕನ್ನಡ ಪತ್ರ ಬರೆದು ಇಡೀ ಜಗತ್ತಿನ ಮುಂದೆ ಇಡಬಹುದು. ಬ್ಲಾಗ್ ಪ್ರಪಂಚದಲ್ಲೇ ಎಷ್ಟು ಸೃಜನಶೀಲತೆ ಕಾಣುತ್ತಿದೆ. ಕನ್ನಡದ್ದೇ ನೂರಾರು ಬ್ಲಾಗ್ ಗಳನ್ನು ನೋಡಿದರೆ ನಿಜಕ್ಕೂ ಸಂತೋಷ ಮತ್ತು ಹೆಮ್ಮೆಯಾಗುತ್ತದೆ. ಹೆಚ್ಚಿನ ಬ್ಲಾಗ್ ಗಳು ತುಂಬ ಪ್ರಬುದ್ಧ. ಹಿಂದೆ ಬರೀ ಪತ್ರಿಕೆ, ವಾರಪತ್ರಿಕೆ ಇದ್ದ ಕಾಲದಲ್ಲಿ ಈ ತರಹದ ಸೃಜನಶೀಲತೆ ಬೆಳೆಯಲು ಸಾಧ್ಯವಿತ್ತೆ? ಲೇಖನ, ಕತೆ, ಕವನ, ಫೋಟೊ ಮುಂತಾದವು ವಿಷಾದ ಪತ್ರದೊಡನೆ ಹಿಂದಿರುಗಿ ಬರುವುದೇ ಸಾಮಾನ್ಯವಾಗಿತ್ತು. ಎಷ್ಟೋ ಪ್ರತಿಭಾವಂತ ಬರಹಗಾರರು ಪ್ರೋತ್ಸಾಹ ಇಲ್ಲದೆ ಅವರ ಪ್ರತಿಭೆ, ಅನಿಸಿಕೆ ಅವರಲ್ಲೇ ಮುರುಟಿ ಹೋಗಿತ್ತು.

ಆದರೆ ಈಗ ಅಂತರಜಾಲ ಬಂದು, ಬ್ಲಾಗ್ ಎಂಬ ಹೊಸ ವೇದಿಕೆ ಬಂದು ಅನೇಕ ಪ್ರತಿಭಾವಂತರಿಗೆ ತಮ್ಮ ಅನಿಸಿಕೆ, ಬರಹ, ಚಿತ್ರ, ಫೋಟೊ, ಕವನ, ಒಟ್ಟಿನಲ್ಲಿ ತಮ್ಮ ಆಸಕ್ತ ಕ್ಷೇತ್ರ ಮತ್ತು ಅದರಲ್ಲಿ ತಮ್ಮ ಪ್ರತಿಭೆ, ಸಾಧನೆಯನ್ನು ಇಡೀ ಜಗತ್ತಿನ ಮುಂದೆ ಇಟ್ಟು, ಅದರ ಬಗ್ಗೆ ಚರ್ಚೆ ನಡೆಯಲು ಒಳ್ಳೆಯ ವೇದಿಕೆಯಾಗಿದೆ. ನನ್ನಂತಹ ಅರೆಬೆಂದ ಸಾಮಾನ್ಯ ಲೇಖಕನಿಗೂ ಇಲ್ಲಿ ಜಾಗ ಸಿಕ್ಕಿದೆ, ಓದುಗರು ಇದ್ದಾರೆ.

ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...
ಧನ್ಯವಾದ

Wednesday, 3 June 2009

ಕನ್ನಡ ಚಿತ್ರಗಳಲ್ಲಿಯ ಕನ್ನಡೇತರ ಗೀತೆಗಳು

ನಮ್ಮ ಕನ್ನಡ ಚಿತ್ರಗಳಲ್ಲಿ ಎಷ್ಟೊಂದು ಮಧುರ ಗೀತೆಗಳು ಬಂದಿವೆ, ಮತ್ತು ಬರುತ್ತಿವೆ. ಸ್ವಲ್ಪಕಾಲ ಮಾಧುರ್ಯ ಕಡಿಮೆಯಾಗಿದ್ದು ನಿಜ. ಮೊದಮೊದಲು ನಮ್ಮ ಕನ್ನಡಿಗರೇ ಕನ್ನಡ ಚಿತ್ರ, ಚಿತ್ರಗೀತೆಗಳೆಂದರೆ ಮೂಗುಮುರಿಯುತ್ತಿದ್ದ ಕಾಲವಿತ್ತು. ಈಗ ಅನೇಕ FM ಚಾನೆಲ್‍ಗಳು ಬಂದು ಮತ್ತೆ ಕನ್ನಡ ಗೀತೆಗಳನ್ನು ಜನಪ್ರಿಯಗೊಳಿಸುತ್ತಿವೆ.

ಇರಲಿ, ನನ್ನ ವಿಷಯ ಅದಲ್ಲ. ನನಗೆ ನಮ್ಮ ಕನ್ನಡ ಚಿತ್ರಗೀತೆಗಳಲ್ಲಿ ಬಳಸಿದ್ದ ಅನ್ಯ ಭಾಷೆ ಹಾಡುಗಳ ಬಗ್ಗೆ ಕುತೂಹಲ. ಅವುಗಳ ಒಂದು ಪಟ್ಟಿ, ನನಗೆ ತಿಳಿದ ಕೆಲ ಹಾಡುಗಳು...

ಸಂಸ್ಕೃತ ಶ್ಲೋಕಗಳು ಸುಮಾರು ಸಿನೆಮಾಗಳಲ್ಲಿ ಬಳಕೆಯಾಗಿವೆ. "ಕವಿರತ್ನ ಕಾಳಿದಾಸ" ಯಾರಿಗೆ ನೆನಪಿಲ್ಲ? ವಿಷ್ಣುವರ್ಧನ್ ಅಭಿನಯದ "ಭಾಗ್ಯಜ್ಯೋತಿ" ಚಿತ್ರದಲ್ಲಿ ಡಾ.ಪಿ.ಬಿ ಶ್ರೀನಿವಾಸ್ ಅವರು ಅದ್ಭುತವಾಗಿ ರಚಿಸಿ ಹಾಡಿದ ’ದಿವ್ಯಗಗನ ವನವಾಸಿನಿ, ಭವ್ಯರುಚಿರಧರಹಾಸಿನಿ, ಪಂಕಜ ನೇತ್ರಿ...’ ತುಂಬಾ ಅಪರೂಪದ ಗೀತೆ. ಇದರ ಸ್ತ್ರೀ ಧ್ವನಿ ಯಾರದ್ದು ಅಂತ ನನಗೆ ಗೊತ್ತಿಲ್ಲ. ಈ ಸುಂದರ ಗೀತೆ ಆಕಾಶವಾಣಿಯಲ್ಲಿ ಕೇಳಿ ತುಂಬಾ ದಿನಗಳಾಗಿವೆ.

’ರಾ ರಾ, ಸರಸಕು ರಾ ರಾ...’. ಇದು ಯಾರು ಬೇಕಾದರೂ ಸುಲಭದಲ್ಲಿ ಹೇಳಬಹುದು ಎಲ್ಲಿಯದು ಎಂದು. "ಆಪ್ತಮಿತ್ರ"ದಲ್ಲಿ ಈ ತೆಲುಗು ಗೀತೆ ಇದ್ದರೂ, ರೇಡಿಯೋದಲ್ಲಿ ಹೆಚ್ಚಾಗಿ ಕೇಳಿಬರುವುದು ಅದರ ಕನ್ನಡ ಅವತರಣಿಕೆ ’ಬಾರಾ, ಸರಸಕೆ ಬಾರ..’
ದ್ವಾರಕೀಶ ವಿಷ್ಣುವರ್ಧನ್ ಜೋಡಿಯ ಹಿಂದಿನ ಚಿತ್ರ "ರಾಯರು ಬಂದರು ಮಾವನ ಮನೆಗೆ"ಯಲ್ಲಿ ಸಂತ ತ್ಯಾಗರಾಜರ ತೆಲುಗು ರಚನೆ ಬಳಕೆಯಾಗಿತ್ತು.

ಕನ್ನಡ ಚಿತ್ರವೊಂದರಲ್ಲಿ ಉರ್ದು ಹಾಡು ಇತ್ತು ಎಂದು ಎಷ್ಟು ಜನರಿಗೆ ಗೊತ್ತು? ’ಖಾನಾ ಪೀನಾ ಮಜಾ ಉಡಾನಾ...’ ಎಂಬ ಉರ್ದು ಹಾಡು "ಶ್ರೀಕೃಷ್ಣದೇವರಾಯ" ಸಿನೆಮಾದಲ್ಲಿ ಇದೆ. ಇದು ಬಹಳ ಜನರಿಗೆ ಗೊತ್ತಿಲ್ಲ. ಐತಿಹಾಸಿಕ ಚಿತ್ರದಲ್ಲಿ ಉರ್ದು ಹಾಡು ಎಲ್ಲಿಂದ ಬಂತು ಅಂತ ಅನುಮಾನ ಬೇಡ. ಕೃಷ್ಣದೇವರಾಯನ ಕಾಲದಲ್ಲಿ ಬಹಮನಿ ರಾಜ್ಯ ಕೂಡ ಇತ್ತಲ್ಲ?

ಹಂಸಲೇಖ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರಪ್ರಶಸ್ತಿ ದೊರಕಿಸಿ ಕೊಟ್ಟ "ಗಾನಯೋಗಿ ಪಂಚಾಕ್ಷರಿ ಗವಾಯಿ" ಸಿನೆಮಾದಲ್ಲಿ ತಾನ್ ಸೇನ್ ರಚಿಸಿದ 'ಗಾನ ವಿದ್ಯಾ ಬಡೀ ಕಠಿಣ ಹೈ...' ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯ ಅವರಿಗೆ ಕನ್ನಡದಲ್ಲಿ ಅತ್ಯುತ್ತಮ ಗಾಯಕ ಪ್ರಶಸ್ತಿ ಕೊಟ್ಟ 'ಉಮಂಡು ಘಮಂಡು...' ಎಂಬ ಎರಡು ಹಿಂದಿ ಗೀತೆಗಳಿವೆ.

ಇಂಗ್ಲೀಶ್ ಹಾಡುಗಳ ಬಗ್ಗೆ ಹೇಳುವುದಾದರೆ, ಡಾ.ರಾಜ್‍ಕುಮಾರ ಹಾಡಿದ ’If you come today, its too early, if you come tomorrow, its too late, you pick the time, tick tick tick...' ., "Operation Diamond Racket" ಚಿತ್ರದ್ದು. ಇದು ಹೆಚ್ಚಾಗಿ ಎಲ್ಲರಿಗೂ ಗೊತ್ತಿರುವ ಹಾಡು. ನನಗೆ ಗೊತ್ತಿರುವ ಹಾಗೆ ಇನ್ನೂ ಒಂದೆರಡು ಚಿತ್ರಗಳಲ್ಲಿ ಇಂಗ್ಲೀಶ್ ಹಾಡುಗಳಿವೆ.

"ಮದರ್" ಎಂಬ ಚಿತ್ರದಲ್ಲಿ ’Somewhere, someone is waiting for me...' ಎಂಬ ಸಂಪೂರ್ಣ ಇಂಗ್ಲೀಶ್ ಗೀತೆ ಇದೆ.

"ಬೆಸುಗೆ" ಸಿನೆಮಾ ನಮ್ಮ ಕನ್ನಡಿಗರಲ್ಲಿ ಯಾರಿಗೆ ಗೊತ್ತಿಲ್ಲ? ’ಬೆಸುಗೆ ಬೆಸುಗೆ’ ಈ ಹಾಡು ತುಂಬ ಜನಪ್ರಿಯ. ಆದರೆ ಇದೇ ಸಿನೆಮಾದಲ್ಲಿ ಸಂಪೂರ್ಣ ಇಂಗ್ಲೀಶಿನಲ್ಲಿ ಒಂದು ಹಾಡಿದೆ. ’Love is a merry melody, life is a haunting rhapsody...' ಇದು ಕೂಡ ಹೆಚ್ಚಿನವರಿಗೆ ಗೊತ್ತಿಲ್ಲ.

ನನಗೆ ಗೊತ್ತಿರುವ ಮಟ್ಟಿಗೆ ಈ ಮೂರು ಸಂಪೂರ್ಣ ಇಂಗ್ಲೀಶ್ ಹಾಡುಗಳು. "ಬಿಳಿ ಹೆಂಡ್ತಿ" ಸಿನೆಮಾದ ’Happiest moments every event, feel the blessings, what an enchantment, ಬಿಳೀ ಹೆಂಡ್ತಿ singing with joy...’. ಇದರಲ್ಲಿ ಬರುವ ’ಬಿಳಿ ಹೆಂಡ್ತಿ’, ’ಅತ್ತೆ, ಮಾವ’ ಮುಂತಾದ ಕನ್ನಡ ಪದಗಳನ್ನು ಬಿಟ್ಟರೆ ಇದು ಕೂಡ ಪೂರ್ತಿ ಇಂಗ್ಲೀಶ್ ಹಾಡು ಎನ್ನಬಹುದು.

ಇನ್ನು ಕಲಬೆರಕೆ ಹಾಡುಗಳಿಗೆ ಬರವೇನಿಲ್ಲ. ಕನ್ನಡ ಇಂಗ್ಲೀಶ್, ಕನ್ನಡ ತಮಿಳು (’H2O'), ಕನ್ನಡ ಮಲಯಾಳಮ್ (’My Autograph'), ಇವು ನನಗೀಗ ನೆನಪಿಗೆ ಬರುತ್ತಿರುವ ಕಲಬೆರಕೆ ಹಾಡುಗಳು.

ಇನ್ನೂ ಈ ಥರದ ವಿಶಿಷ್ಟ ಹಾಡುಗಳು ಕನ್ನಡ ಹಾಡುಗಳ ಕಣಜದಲ್ಲಿರಬಹುದು. ಅವನ್ನು ಜನರಿಗೆ ತಲುಪಿಸುವುದು ಆಕಾಶವಾಣಿಯ, ವಿವಿಧಭಾರತಿಯ ಮತ್ತು ಇತರ ಎಫ್.ಎಂ ವಾಹಿನಿಗಳ ಕರ್ತವ್ಯ. ಅಷ್ಟೆ ಅಲ್ಲ, TV ವಾಹಿನಿಗಳು ಕೂಡ ಬರೀ ಹೊಸ ಹಾಡುಗಳನ್ನು ಮಾತ್ರ ಹಾಕದೆ ಇಂಥಾ ವಿಶಿಷ್ಟ, ವಿಚಿತ್ರ ಗೀತೆಗಳನ್ನು ಜನರಿಗೆ ತಲುಪಿಸಬೇಕು.

Saturday, 25 April 2009

Saturday, 4 April 2009

ಮನೆ ಹೆಸರುಗಳ ಸುತ್ತ

ವಾಹನಗಳ ಮೇಲೆ ಬರೆದಿರುವ ಚಿತ್ರ ವಿಚಿತ್ರ ಹೆಸರುಗಳ ಬಗ್ಗೆ ಬರೆದಿದ್ದೆ. ಈ ಸಲ ಮನೆ ಹಾಗೂ ಹೋಟೆಲ್ ಹೆಸರುಗಳ ಬಗ್ಗೆ ಬರೆಯೋಣ ಅನ್ನಿಸಿತು.
ಮನೆ. ಇದರ ಕಲ್ಪನೆಯೇ ಸುಂದರ. East or West, home is the best. ಕನ್ನಡದಲ್ಲಿ ಹೇಳುವುದಾದರೆ, 'ಪೂರ್ವ ಅಥವ ಪಶ್ಚಿಮ, ನಮ್ಮ ಮನೆಯೆ ಉತ್ತಮ' ಎನ್ನಬಹುದು. ನಮ್ಮದೆ ಸ್ವಂತ ಮನೆ ಆದಮೇಲೆ ಅದಕ್ಕೊಂದು ಹೆಸರು ಬೇಡವೇ? ನಾನು ನೋಡಿದ, ಕೇಳಿದ ಕೆಲ ಮನೆ ಹೆಸರುಗಳ ಬಗ್ಗೆ ಈ ಲೇಖನ.

ಬಸವೇಶ್ವರನಗರದಲ್ಲಿ ಒಂದು ಮನೆ, "ಅನು ಮಹಾ". ಹಾಗೆಂದರೇನು ಎಂದು ಮನೆಯವರನ್ನೇ ಕೇಳಬೇಕು. ದೇವರ ಹೆಸರ ಮನೆಗಳಿಗೆ ಬರವಿಲ್ಲ. ವೆಂಕಟೇಶ ನಿಲಯ, ಶ್ರೀ ನಿವಾಸ, ರಾಮ ನಿಲಯ, ಮಾರುತಿ ನಿವಾಸ - ಹೀಗೆ ಪಟ್ಟಿ ಬೆಳೆಯುತ್ತದೆ.

ಕೆಲ ಪ್ರಸಿದ್ಧರ ಮನೆಗಳಂದರೆ - ನಟ, ನಿರ್ದೇಶಕ ಸಿ.ಆರ್.ಸಿಂಹರ ಮನೆ ಹೆಸರು 'ಗುಹೆ'. ಸಿಂಹ ಇರಬೇಕಾದ್ದು ಗುಹೆಯಲ್ಲಿ ತಾನೆ? ಅವರ ಸಹೋದರ ಶ್ರೀನಾಥರ ಮೊದಲ ಮನೆ 'ಹೃದಯ'. ಪ್ರಣಯರಾಜನಿಗೆ ತಕ್ಕ ಹೆಸರಾಗಿತ್ತು ಅದು. ಗಿರೀಶ್ ಕಾಸರವಳ್ಳಿ ಇರುವುದು 'ಮನೆ' ಯಲ್ಲಿಯೇ. ಅವರದೇ ಸಿನೆಮಾ 'ಮನೆ' ಯಿಂದ ಪ್ರೇರಿತ ಇರಬಹುದು. ಕುವೆಂಪು ಅವರ ಮೈಸೂರು ಮನೆ 'ಉದಯರವಿ' ಆದರೆ, ಅವರಷ್ಟೇ ಪ್ರತಿಭಾವಂತರಾದ ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಮನೆ ಹೆಸರು 'ನಿರುತ್ತರ'.

villa ಎಂದರೆ ಹಳ್ಳಿ ಮನೆ, ಗದ್ದೆ ತೋಟದ ಮಧ್ಯೆ ಇರುವ ಮನೆ ಎಂದು ಅರ್ಥ. ಆದರೆ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲೂ ಅನೇಕ ವಿಲ್ಲಾಗಳು ಸಿಗುತ್ತವೆ. ಅರಮನೆಯಂತಹ ಬಂಗಲೆಗೆ 'ಕುಟೀರ' ಎಂದು ಹೆಸರಿಡುತ್ತಾರೆ ಅಲ್ಲವೇ, ಹಾಗೆ. ಇದರ ಕನ್ನಡ ಅರ್ಥದ ಜೊತೆ ಓದಿದರೆ ತಮಾಶೆ ಎನಿಸುತ್ತದೆ. ಕಮಲಾನಗರದ ಒಂದು ಮನೆ ಹೆಸರು 'ಸುಖ್ ವಿಲ್ಲಾ'. 'ಆನಂದ್ ವಿಲ್ಲಾ' ಕೂಡ ಎಲ್ಲೋ ನೋಡಿದ್ದೇನೆ. ಪಾಪ, ಮನೆಯ ಪರಿಸ್ಥಿತಿಯನ್ನು ಹೀಗೆ ಜಗಜ್ಜಾಹೀರು ಮಾಡಬೇಕೆನಿಸಿತ್ತೋ ಏನೋ? 'ಶಾಂತಿ ವಿಲ್ಲಾ' ಹೆಸರಿನ ನಾಟಕ ಕೂಡ ಬಂದಿತ್ತು.

ಕೆಲ ಸುಂದರ ಗೃಹನಾಮಗಳು:
ದೇಗುಲ
ದೇವಾಲಯ
ಮಂದಿರ
ಗುಡಿ
ಪ್ರಕೃತಿ
ನಿಸರ್ಗ
ಮನಶ್ಶಾಂತಿ
ಕುಟೀರ
ಇನಿ ದನಿ
ಕಲರವ
ಚಿಲಿ ಪಿಲಿ
ಸಂತಸ
ಚಂದಿರ
ಸಮೃದ್ಧಿ
ನಗು
....ಇದಕ್ಕೆ ಕೊನೆಯಿಲ್ಲ ಬಿಡಿ

ಎಚ್.ಎಸ್.ಆರ್ ಲೇಔಟ್ ಮನೆ ಹೆಸರು 'ನಮ್ಮ ಮನೆ' .
ಕೆಲ ಹೋಟೆಲ್ ಗಳು:ಮಲ್ಲೇಶ್ವರದ ಪ್ರಸಿದ್ಧ 'ಹಳ್ಳಿ ಮನೆ'. ತ್ಯಾಗರಾಜನಗರದ 'ಕೋಳಿ ಮನೆ'. 'ಅಜ್ಜಿ ಮನೆ' ಕೂಡ ಎಲ್ಲೋ ನೋಡಿದ್ದೇನೆ. ಬೆಂಗಳೂರು ಮೈಸೂರು ಹೆದ್ದಾರಿ ಮೇಲೆ 'ಹಂಚಿನ ಮನೆ' ಹೋಟೆಲ್ ಇದೆ.

Monday, 30 March 2009

ಓ ನನ್ನ ಬೆಳಕೆ...


...ಇರುಳ ವಿರುದ್ಧ, ಬೆಳಕಿನ ಯುದ್ಧ
ಕೊನೆಯಿಲ್ಲದ ಕಾದಾಟ

ತಡೆಯೇ ಇಲ್ಲದೆ, ನಡೆಯಲೆ ಬೇಕು
ಸೋಲಿಲ್ಲದ ಹೋರಾಟ...

Sunday, 22 February 2009

ಹಕ್ಕಿ ಹಾರುತಿದೆ ನೋಡಿದಿರಾ...



ಆಡುತಿರುವ ಮೋಡಗಳೇ, ಹಾರುತಿರುವ ಹಕ್ಕಿಗಳೇ
ಯಾರ ಭಯವೂ ನಿಮಗಿಲ್ಲ
ನಿಮ್ಮ ಭಾಗ್ಯ ನಮಗಿಲ್ಲ...

ನೋಡಯ್ಯ ಕ್ವಾಟೆ ಲಿಂಗವೇ, ಬೆಳ್ಳಕ್ಕಿ ಜೋಡೀ ಕುಂತವೇ...


ಅಂಗಯ್ಯಷ್ಟಗಲಾ ಗೂಡು, ಆದ್ರೂನೂ ದರ್ಬಾರ್ ನೋಡು
ಪ್ರೀತೀಲಿ ಲೋಕ ಮರ್ತವೇ......

ಮಹಿಶಾಸುರ ಮರ್ಧಿನಿ, ಮಹಾಬಲಿಪುರಂ


Wednesday, 31 December 2008

His Majesty in deep thought


ಶಿಲೆಗಳು ಸಂಗೀತವ ಹಾಡಿವೆ...

ಉದ್ರಿ (ಸೊರಬದ ಬಳಿಯಿರುವ ಗ್ರಾಮ) ದೇವಾಲಯದ ಸಹಸ್ರದಳ ಕಮಲ
ಸಾಗರದ ಬಳಿಯ ಉಮಾ ಮಹೇಶ್ವರ ದೇವಾಲಯ

ಇಕ್ಕೇರಿಯ ಅಘೋರೇಶ್ವರ ದೇವಾಲಯ


ಇಕ್ಕೇರಿಯ ಅಘೋರೇಶ್ವರ ದೇವಾಲಯದ ಮೇಲ್ಛಾವಣಿ







Tuesday, 21 October 2008

ಹೇ ದಿನಕರ ಶುಭಕರ ಧರೆಗೆ ಬಾ, ಈ ಧರಣಿಯ ದೇಗುಲ ಬೆಳಗು ಬಾ..


ಹೂವು ಚೆಲುವೆಲ್ಲ ತಂದೆಂದಿತು...


ಇಳಿದು ಬಾ ತಾಯಿ ಇಳಿದು ಬಾ...

.
..ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ!
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ!

ಸಿರಿವಾರಿಜಾತ ವರಪಾರಿಜಾತ ತಾರಾ-ಕುಸುಮದಿಂದೆ
ವೃಂದಾರವಂದ್ಯೆ ಮಂದಾರಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ!

ಬಂದಾರೆ ಬಾರೆ ಒಂದಾರೆ ಸಾರೆ ಕಣ್ ಧಾರೆ ತಡೆವರೇನೆ?
ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೆ?
...
ದ.ರಾ.ಬೇಂದ್ರೆ

ದೀಪವು ನಿನ್ನದೆ ಗಾಳಿಯು ನಿನ್ನದೆ, ಆರದಿರಲಿ ಬೆಳಕು...