Wednesday 25 June, 2008

ಕನ್ನಡದಲ್ಲಿ ಇಂಗ್ಲೀಷೋ, ಇಂಗ್ಲೀಷಿನಲ್ಲಿ ಕನ್ನಡವೋ?

"one cup ಹಾಲು, half tea spoon sugar, ಇವನ್ನೆಲ್ಲ ಸೇರಿಸಿ mix ಮಾಡ್ಕೊಳ್ ಬೇಕು. Half litre waterನ ten minutes ವರೆಗೆ heat ಮಾಡ್ಬೇಕು. ಎರಡು onion ತೆಗೆದುಕೊಂಡು slice ಮಾಡಿ, one pinch salt ಹಾಕಿ........." ಅಬ್ಬ, ಓದಲೇ ಇಷ್ಟು ಕಿರಿಕಿರಿ ಆದರೆ, ಅದನ್ನ ಕೇಳುವುದು ಹೇಗೆ. ಇದು ನಮ್ಮ ಅನೇಕ ವಾಹಿನಿಗಳಲ್ಲಿ ಬರುವ ಅಡಿಗೆ ಕಾರ್ಯಕ್ರಮಗಳ ಒಂದು ಉದಾಹರಣೆ. ಈಗೀಗ ಸಾಮಾನ್ಯ ಕನ್ನಡ ಪದಗಳೂ ಕಾಣೆಯಾಗುತ್ತಿವೆ. "ಇದು kitchen, ಇದು bedroom, ಎರಡು toilet, bathroomಗಳಿವೆ...." ಹೀಗೆ ಮುಂದುವರೆಯುತ್ತದೆ. "ನಿಮ್ಮ songನ play ಮಾಡ್ತೇವೆ", ಇದು ನಮ್ಮ ಎಫ್.ಎಂ ರೇಡಿಯೊ ಧ್ವನಿ.

ಅನೇಕರಿಗೆ ಸಂಖ್ಯೆ, ಸಮಯ, ವಾರಗಳನ್ನು ಕನ್ನಡದಲ್ಲಿ ಹೇಳಲು ಬರುವುದೇ ಇಲ್ಲ. Monday, Tuesday ಎಂದೇ ಹೇಳಬೇಕು, ಸೋಮವಾರ, ಮಂಗಳವಾರ ಹೇಳಲು ಬರುವುದಿಲ್ಲ. "ನಮ್ ಕಾಲೇಜ್ ಬೆಳಿಗ್ಗೆ eight-thirtyಗೆ start ಆಗಿ two-thirtyಗೆ ಮುಗಿಯುತ್ತೆ". "ಇವತ್ತು lunch, one-thirtyಯಿಂದ twoವರೆಗೆ, ಅಂದ್ರೆ thirty minutes ಇತ್ತು". ಎಂಟುವರೆ, ಎರಡುವರೆ, ಎರಡು ಗಂಟೆ, ಇಂಥಾ ಪದಗಳು ನಮ್ಮ ಅನೇಕರಿಗೆ ಕಷ್ಟ. "ಇದಕ್ಕೆ five hundred rupees ಆಯ್ತು". ಐನೂರು ರೂಪಾಯಿ? ಛೆ, ಛೆ, ಯಾಕೆ ಬೇಕು ಆ ಹಳೆ ಪದಗಳು.

ಮರೆಯಾಗುತ್ತಿರುವ ಇನ್ನೊಂದು ಪದಪುಂಜ "ಹೋದ ಸಲ". "last time ನಾ ಅಲ್ಲಿಗೆ ಹೋದಾಗ...", "last month ಕೂಡ ಹೀಗೆ ಅಗಿತ್ತು...", "last year ನಲ್ಲಿ...". ಹೋದ ಸಲ, ಹೋದ ತಿಂಗಳು, ಹೋದ ವರ್ಷ, ಇವೆಲ್ಲ last yearರೇ ಮಾಯವಾಗಿಬಿಟ್ಟಿವೆ."ಅವನಿಗೆ last week Friday eight-thirtyಗೆ fifty rupees ಕೊಟ್ಟಿದ್ದೆ", ಇದು ಕನ್ನಡದಲ್ಲಿ ಇಂಗ್ಲೀಷೋ, ಇಲ್ಲ ಇಂಗ್ಲೀಷಿನಲ್ಲಿ ಕನ್ನಡವೋ ಗೊತ್ತಾಗುವುದಿಲ್ಲ.

ಬರೀ ನಗರವಾಸಿ, ಆಂಗ್ಲ ಮಾಧ್ಯಮದಿಂದ ಬಂದವರಿಗೆ ಮಾತ್ರ ಈ ಅಭ್ಯಾಸ ಇದೆ ಅಂತ ಅರ್ಥ ಅಲ್ಲ. ಹಳ್ಳಿ, ಸಣ್ಣ ಪಟ್ಟಣಗಳಿಂದ ಬಂದವರೆಂತೂ, ಕನ್ನಡದಲ್ಲೇ ಶಿಕ್ಷಣ ಮಾಡಿದವರು ಎಂದು ಹೇಳಿಕೊಳ್ಳುವವರಲ್ಲೂ ಈ ಚಟವಿದೆ. ನಮ್ಮ ತರಕಾರಿ ಮಾರುವವರನ್ನು ನೋಡಿ. ಎಷ್ಟೋ ಸಲ, ಅವರಿಗಿಂತ ನಮಗೇ ಕನ್ನಡದ ತರಕಾರಿ ಹೆಸರುಗಳು ಚೆನ್ನಾಗಿ ಬರುತ್ತವೇನೋ ಅನ್ನಿಸುತ್ತದೆ. ಬದನೆಕಾಯಿ, ಎಲೆ ಕೋಸು, ಎಲ್ಲ ಮರೆತೇ ಹೋಗುತ್ತಿವೆ brinjal, cabbageಗಳ ಆರ್ಭಟದಲ್ಲಿ.

ಪ್ರಾದೇಶಿಕವಾಗಿ ಕನ್ನಡದಲ್ಲಿ ಭಿನ್ನತೆಗಳಿವೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಹವ್ಯಕ, ಹೀಗೆ ಭಾಷಾ ಪ್ರಭೇದಗಳಿವೆ. ಕೆಲವು ಜಾತಿ ಪಂಗಡಗಳಿಗೆ ’ಅ’ ಮತ್ತು ’ಹ’ ಗಳಿಗೆ ವ್ಯತ್ಯಾಸವಿಲ್ಲ. ನಮ್ಮ ಕಂಗ್ಲಿಷ್ ಜನ, ತಾವು ಎಷ್ಟು ಕೆಟ್ಟದಾಗಿ ಇಂಗ್ಲೀಷ್ ಮತ್ತು ಕನ್ನಡ ಒಟ್ಟಿಗೆ ಎರಡನ್ನೂ ಕೊಲೆ ಮಾಡಿದರೂ, ಈ ಜನರನ್ನು ಗೇಲಿ ಮಾಡುತ್ತಾರೆ. "ಆಲು ಆಣ್ಣು, ಅಕ್ಕಿ ಆರುತಿದೆ, ನಿಮಗೆ ಹಾದರದ ಸ್ವಾಗತ" ಇಂಥಾ ವ್ಯಂಗ್ಯ ಮಾಡುವುದು ಈ sunday, monday ಜನರೇ, ತಾವು ಎಷ್ಟು ಕೆಟ್ಟದಾಗಿ ಮಾತಾಡುತ್ತೇವೆ ಎನ್ನುವ ಪರಿವೆ ಇಲ್ಲದೆ. ಭಾಷೆಯಲ್ಲಿ ಶುದ್ಧ ಪ್ರಯೋಗ ಇರಬೇಕು ನಿಜ. ಭಾಷಾ ಅಪಭ್ರಂಶ ಕೇಳಲು ಕರ್ಕಶ ಖಂಡಿತ, ಆದರೆ ಈ ಕಂಗ್ಲಿಷ್ ಜನರ ಭಾಷೆ ಇನ್ನೂ ಕರ್ಕಶ.

ಭಾಷೆಯ ವಿಷಯದಲ್ಲಿ ಮಡಿವಂತಿಕೆ ಮಾಡಬೇಕಾಗಿಲ್ಲ. ಸಂಪೂರ್ಣ ಶುದ್ಧ ಕನ್ನಡ ಮಾತಾಡಲು ಈಗ ಸಾಧ್ಯವಿಲ್ಲ. ಎಷ್ಟೋ ಆಂಗ್ಲ ಪದಗಳು ಕನ್ನಡದವೇ ಎನ್ನುವಷ್ಟು ಬೆರೆತಿವೆ ನಮ್ಮ ಭಾಷೆಯಲ್ಲಿ. ವ್ಯಾವಹಾರಿಕವಾಗಿ ಮಾತಾಡುವಾಗ ಇಂಗ್ಲೀಷ್ ಪದಗಳ ಬಳಕೆ ಅನಿವಾರ್ಯವಾಗುತ್ತದೆ. ಕೆಲ ಸಲ ಕನ್ನಡಕ್ಕಿಂತ ಇಂಗ್ಲೀಷ್ ಪದಗಳು ಆ ಪರಿಸ್ಥಿತಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇದು ಈಗಿನ ದಿನಗಳಲ್ಲಿ ತಪ್ಪಲ್ಲ. ಆದರೆ ಇದನ್ನೆ ನೆಪ ಮಾಡಿಕೊಂಡು, ಇನ್ನೂ ಬಳಕೆಯಲ್ಲಿರುವ ಸಾಮಾನ್ಯ ಕನ್ನಡ ಪದಗಳಿಗೂ ಕತ್ತರಿ ಹಾಕಿ, ಅನಗತ್ಯವಾಗಿ ಇಂಗ್ಲೀಷನ್ನು ತುರುಕುವುದು ಏಕೋ?

Friday 13 June, 2008

Stereotypes in Indian cinemas

I am no expert in cinemas, so some of my comments may be off mark in some places. But what I have observed is what I have written. Nowadays, all Hindi movies must have somebody named Rahul. Even Karan, Prem also figure in almost all Hindi films. Earlier it was Vijay, Arjun. And heroines have to be Pooja, Neha, Riya, Tia, Nisha, Shriya, all two syllable names only. Whatever happened to those beautiful, bit longish names? Even ads and serials have Rahuls and Poojas in them. Rich men are always Saxenas, Malhotras, Mehrotras, Guptas. A rich man has to be in a suit and tie even at midnight.

In earlier Hindi films, the hero had a friend who invariably had to be a Muslim. And he was made to utter 'Allah' every two minutes. If it was a patriotic film, the Muslim friend would be the first one to die for his country. If the setting was a city, then there would be a Christian friend too.

Look at the party scenes. Except the hero, heroine, her father, maybe some villains, rest all would be standing stiff and expressionless, irrespective of whether it is a song, dialogue or fight sequence. This is not the case on English movies where everyone in a group scene would be emoting and doing something that is related to that scene.

Another predictable item in earlier movies was the status. If the hero was poor, heroine would be rich, stinking rich. The arrogant and haughty heroine would be taught a lesson by the hero and she would later fall in love with him. If the heroine is good, then her father would be the arrogant person, who would insult and humiliate the poor hero in parties and social occasions.

The rich heroine would always be motherless. The poor hero would always be fatherless. His widowed mother, always in plain, white saree, would say "If only your father was there" every five minutes and break into tears.

The newer films are all globalised. Hero, heroine is working or has business abroad. Now movies about the poor class, even middle class are very rare. Almost all movies have super rich, globe trotting characters.

ನಮ್ಮ ಕನ್ನಡ ಚಿತ್ರರಂಗದಲ್ಲೂ ಇಂಥ ಅನೇಕ stereotypeಗಳಿವೆ. ಅದರಲ್ಲೂ ಹಳ್ಳಿ ಚಿತ್ರಗಳೆಂದರೆ ಮುಗೀತು, ಅದೇ ಏಕತಾನತೆಯ ದೃಶ್ಯಗಳು. ಹಳ್ಳಿ ಎಂದರೆ ಅದು ಮಂಡ್ಯ, ಮೈಸೂರು ಕಡೆ ಹಳ್ಳಿಗಳೇ ಆಗಬೇಕು. ಅಲ್ಲಿ ಒಂದು ನದಿ ಇರಲೇಬೇಕು. ಅದು ಕಾವೇರಿಯೇ ಆಗಿರಬೇಕು,ಮತ್ತು ಅದಕ್ಕೊಂದು ಚಿಕ್ಕ ಜಲಪಾತ ಇರಲೇಬೇಕು. ಕಾಲ ಯಾವುದೇ ಇರಲಿ, ಸಮಸ್ಯೆಗಳೆಲ್ಲ ಅರಳಿಕಟ್ಟೆ ಪಂಚಾಯ್ತಿಯಲ್ಲೇ ತೀರ್ಮಾನ ಆಗಬೇಕು. ಪಂಚಾಯ್ತಿ ಮುಖ್ಯಸ್ಥನ ಬಾಯಲ್ಲಿ "ನಮ್ ಸುತ್ತ ಮುತ್ತ ಹತ್ತೂರಲ್ಲಿ..." ಎನ್ನುವ ಡಯಲಾಗ್ ಆಗಾಗ ಬರುತ್ತಿರುತ್ತದೆ. ಹಳ್ಳಿಯಲ್ಲಿ ಎಲ್ಲರೂ ರೈತರೆ. ಹಳ್ಳಿಗಳ ಇತರ ವೃತ್ತಿಗಳು ನಮ್ಮ ಚಿತ್ರಗಳಲ್ಲಿ ತುಂಬಾ ಅಪರೂಪವಾಗಿ ಬಂದಿವೆ.

ನಮ್ಮ ಹಳ್ಳಿಗಳಲ್ಲಿ ಎಷ್ಟು ವೈವಿಧ್ಯ ಇದೆ. ಮಲೆನಾಡಿನ ಹಳ್ಳಿ ಒಂಥರ, ಕರಾವಳಿ ಇನ್ನೊಂದು ಥರ. ಅಲ್ಲೇ ಮತ್ತೊಂದು ವಿಧ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಪುತ್ತೂರು, ಸುಳ್ಯ, ಒಂದಕ್ಕೊಂದು ವಿಭಿನ್ನ. ಬಯಲು ಸೀಮೆ, ಧಾರವಾಡ, ಬೆಳಗಾವಿ, ಬಿಜಾಪುರ, ಬಳ್ಳಾರಿ, ಗುಲಬರ್ಗ, ಊರಿಂದ ಊರಿಗೆ ವ್ಯತ್ಯಾಸಗಳು ಕಾಣಿಸುತ್ತವೆ. ಇವೆಲ್ಲ ನಮ್ಮ ಚಿತ್ರರಂಗ ತೋರಿಸಿದ್ದು ಅತೀ ಕಡಿಮೆ.

ಊರಿಗೊಬ್ಬ ಗೌಡ ಇರಬೇಕು. ಹಳ್ಳಿ ಗೌಡನ ಪಾತ್ರ ಪೂರ್ತಿ ಕಪ್ಪು ಇಲ್ಲ ಪೂರ್ತಿ ಬಿಳಿ, shades of grey ಇಲ್ಲವೇ ಇಲ್ಲ. ಅವನು ಅತೀ ದುಷ್ಟನಾಗಿರುತ್ತಾನೆ, ಇಲ್ಲ ದೇವರನ್ನೂ ಮೀರಿಸುವಷ್ಟು ಒಳ್ಳೆಯವನಾಗಿರುತ್ತಾನೆ. ಒಳ್ಳೆ ಗೌಡ ಆಗಿದ್ದರೆ ಅವನ ಮಕ್ಕಳೋ, ತಮ್ಮನೋ ಖಳನಾಗಿರುತ್ತಾನೆ. ಇವರಿಗೆ ನಾಯಕ ಅಥವಾ ನಾಯಕಿಯ ಮೇಲೆ, ಇಲ್ಲ ಅವರ ಮನೆಯವರ ಮೇಲೆ ಸುಳ್ಳು ಆಪಾದನೆ ಹೊರಿಸುವುದೇ ಕೆಲಸ.

ನಾಯಕಿ ಹಳ್ಳಿಯ ಮುಗ್ಧ ಹುಡುಗಿಯಾಗಿರುತ್ತಾಳೆ, ಇಲ್ಲ, ಅಮೇರಿಕಾದಲ್ಲಿ ಬೆಳೆದ ಧಿಮಾಕಿನ ಹೆಣ್ಣಾಗಿರುತ್ತಾಳೆ. ಕಾಲೇಜಿನಲ್ಲಿ ಹುಡುಗಿಯರೆಲ್ಲ ಅರ್ಧಂಬರ್ದ ಬಟ್ಟೆ ತೊಟ್ಟರೆ ನಾಯಕನ ತಂಗಿ ಲಂಗ ದಾವಣಿಯಲ್ಲಿ ಬರುತ್ತಾಳೆ. ನಮ್ಮ ಚಿತ್ರಗಳಲ್ಲಿ ಅಣ್ಣ ತಂಗಿ ಸಂಬಂಧಗಳಿಗೆ ಹೋಲಿಸಿದರೆ, ಅಕ್ಕ ತಮ್ಮ, ಅಕ್ಕ ತಂಗಿ, ಅಣ್ಣ ತಮ್ಮ, ಈ ಸಂಬಂಧಗಳು ಕಡಿಮೆ. ನಾಯಕನಿಗೆ ತಂಗಿ ಇರಲೇಬೇಕು, ನಾಯಕಿಗೆ ಅಣ್ಣ ಇರಲೇಬೇಕು.

ಇತರ ಭಾಷೆ ಚಿತ್ರಗಳಲೂ ಇಂಥಾ stereotypeಗಳು ಬೇಕಾದಷ್ಟು ಇದ್ದೇ ಇರುತ್ತವೆ. ನನಗೆ ಗೊತ್ತಿಲ್ಲದಿರುವುದರಿಂದ ಬರೆದಿಲ್ಲ ಅಷ್ಟೆ.

Wednesday 11 June, 2008

ಆಟೋ ದೇವರುಗಳು

’ಮುಕಬಿಂಕ’. ಇದೇನಿದು? ಹೋಗಲಿ, ’ಶ್ರೀ ಮುಕಬಿಂಕ’ ಅಂದರೆ ಗೊತ್ತಾಗುತ್ತದೆಯೆ? ಇದೊಂದು ದೇವರ ಹೆಸರು. ಇನ್ನೂ ಗೊತ್ತಾಗಲಿಲ್ಲವೆ? ಮುಂದೆ ಓದಿ...

ನಾಗವಾರದಲ್ಲಿ ನೋಡಿದ ಒಂದು ನೀರಿನ ಟ್ಯಾಂಕರ್ ಮೇಲೆ "ಶ್ರೀ ಮುಕಬಿಂಕ" ಅಂತ ಬರೆದಿತ್ತು. ಅರೆ, ಇದು ಯಾವ ದೇವರು ಎಂದು ಯೋಚಿಸುತ್ತಿರುವಾಗಲೆ, ಪಕ್ಕದಲ್ಲಿ ಇಂಗ್ಲೀಷಿನಲ್ಲಿ ಸರಿಯಾಗಿ "Shri Mookambika" ಎಂದಿತ್ತು. ಇಂಗ್ಲೀಷಿನಲ್ಲಿ ಸರಿಯಾಗಿದ್ದ ಮೂಕಾಂಬಿಕ, ಕನ್ನಡದಲ್ಲಿ ಮುಕಬಿಂಕ ಆಗಿದ್ದಳು.

ನಾನು ವಿಚಿತ್ರ ವಿಚಿತ್ರ ದೇವರುಗಳನ್ನು ಆಟೋ, ಲಾರಿ, ಟ್ಯಾಂಕರ್, ಟ್ರ್ಯಾಕ್ಟರ್, ಕಾರ್ ಗಳ ಮೇಲೆ ನೋಡಿದ್ದರೂ ಇದರಷ್ಟು ನಗು ತರಿಸಿರಲಿಲ್ಲ. ಈ ಆಟೋ ದೇವರುಗಳ ಒಂದು ಪಟ್ಟಿ - ಪಟ್ಟಾಲಮ್ಮ, ಅಟ್ಟಿಲಕ್ಕಮ್ಮ (ಹಟ್ಟಿ ಲಕ್ಷ್ಮಮ್ಮ ಇರಬಹುದೆ?), ಛಾಯಾಪುತ್ರ, ಕೋಲಾರಮ್ಮ. ಇನ್ನು ಕೆಲವು ರಾಘವೇಂದ್ರ, ಗಣೇಶ, ಜೈ ಹನುಮಾನ್, ವೆಂಕಟೇಶ್ವರ, ಏಳು ಮಲೆ, ಮಲೆ ಮಹದೇಶ್ವರ, ಹೀಗೆ...

ಆಶೀರ್ವಾದಗಳೂ ಅನೇಕ ಕಡೆ ಸಿಗುತವೆ - ತಂದೆ ತಾಯಿ ಆಶೀರ್ವಾದ, ಅಣ್ಣನ ಆಶೀರ್ವಾದ, ಅಕ್ಕನ ಕೃಪೆ, ಮಾವನ ಕೊಡುಗೆ, ಮುಂತಾಗಿ.

Tuesday 10 June, 2008

ನನ್ನ ಮೊದಲ ಪ್ರಯತ್ನ

ಬ್ಲಾಗ್ ಲೋಕದಲ್ಲಿ ನನ್ನ ಮೊದಲ ಹೆಜ್ಜೆಗಳು. ಇದರಲ್ಲಿ ನನ್ನ ಎಲ್ಲಾ "ಮಹಾನ್", "ಅದ್ಭುತ" ಅಲೋಚನೆಗಳು (ಹಾಗಂತ ನಾನೊಬ್ಬನೆ ಅಂದುಕೊಂಡಿರೋದು!), ಕನ್ನಡ ಮತ್ತು ಇಂಗ್ಲೀಷಿನಲ್ಲಿ. ಇದರಲ್ಲಿ ಯಾವುದೇ ನಿರ್ದಿಷ್ಟ ವಿಷಯವಿಲ್ಲ, ಎಲ್ಲಾ ತರಹದ ತರಕಾರಿಗಳೂ ಸೇರಿಸುತ್ತೇನೆ ಈ ನನ್ನ 'ಚಿತ್ರಾನ್ನದಲ್ಲಿ’ ನಲ್ಲಿ.
ನಿಮಗೆ ಅನಿಸಿದ್ದು, ಇಷ್ಟವಾದದ್ದು, ಇಷ್ಟವಾಗದೆ ಇದ್ದದ್ದು, ಎಲ್ಲಾ ಪತ್ರಿಸಿ.
ದೀಪಸ್ಮಿತ

My First Post

Hi All,
This is my first try, first step into blogosphere. I always read other's posts, but never attempted to post my own views. I did not want to be left out of this great community of bloggers. My posts will be a mish mash of everything - serious stuff, light stuff, trivia, general knowledge, movies, books, photography, my views on certain things - in both Kannada and English.

I am not here to correct anything or anyone. My views on anything are my own, and I don't have that false impression of changing the world with my "ground breaking", "earth shattering" thoughts on everything under the sun.
Hope you will enjoy reading my blogs and give valuable feedbacks.

Deepasmitha