Friday 14 June, 2013

ಮುಂಗಾರು ಮಳೆಯೆ, ಏನು ನಿನ್ನ ಹನಿಗಳ ಲೀಲೆ...

ಮುಂಗಾರಿನ ಆಗಮನವಾಗಿದೆ. ಭಾರತದ ಮಟ್ಟಿಗೆ ಮುಂಗಾರು ಎನ್ನುವುದು ಅತೀ ಮಹತ್ವದ ವಿದ್ಯಮಾನ. ನಮ್ಮ ದೇಶದ ಆರ್ಥಿಕತೆಗೆ, ಸಮಾಜಕ್ಕೆ, ಕಲೆ, ಸಾಹಿತ್ಯ, ಸಂಗೀತ, ಚಲನಚಿತ್ರ, ಹೀಗೆ ಎಲ್ಲದರಲ್ಲೂ ಮುಂಗಾರು ಎನ್ನುವುದು ಸಂಭ್ರಮ. ಕೃಷಿ ಚಟುವಟಿಕೆ ಸುತ್ತುವುದೇ ಮುಂಗಾರಿನ ಸುತ್ತ. ಏನು ಈ ಮುಂಗಾರು? ಯಾಕೆ ಅದು ಭಾರತೀಯರಿಗೆ ಅಷ್ಟು ದೊಡ್ಡ ಸಂಗತಿ?
Monsoon ಪದದ ಮೂಲ ಅರಬ್ಬಿಯ 'ಮಾಸಿಮ್' ಅಥವಾ 'ಮೋಸಮ್', ಅಂದರೆ ಋತು ಎಂದರ್ಥ. ಮುಂಗಾರು ಎನ್ನುವುದು ದೊಡ್ಡ ಪ್ರಮಾಣದಲ್ಲಿ ಬೀಸುವ ಸಮುದ್ರ ಗಾಳಿ (gigantic sea breeze). ಹಗಲಿನಲ್ಲಿ ಬಿಸಿಯಾದ ಭೂಮಿಯ ಮೇಲಿನ ಗಾಳಿ ಹಗುರಾಗಿ ಮೇಲೇಳಿದಂತ, ಕಡಿಮೆ ಒತ್ತಡ ಸೃಷ್ಟಿಯಾಗುತ್ತದೆ. ಆ ಕಡಿಮೆ ಒತ್ತಡದ ಪ್ರದೇಶಕ್ಕೆ ತಣ್ಣಗಿನ, ಹೆಚ್ಚು ಒತ್ತಡದ ಸಮುದ್ರದ ಮೇಲಿನ ಗಾಳಿ ನುಗ್ಗುತ್ತದೆ. ಈ ಗಾಳಿಗೆ ಸಾಗರ ಮರುತ (sea breeze) ಎನ್ನುತ್ತಾರೆ. ಇದು ಸಾಮಾನ್ಯವಾಗಿ ಪ್ರತಿದಿನವೂ ನಡೆಯುವ ಸಂಗತಿ.
ಮುಂಗಾರು ಭಾರತ ಮಾತ್ರವಲ್ಲದೆ ಭೂಮಿಯ ಎಲ್ಲ ಕಡೆ ಬೀಸುತ್ತದೆ. ಉತ್ತರ ಅಮೆರಿಕಾ ಮುಂಗಾರು, ಪಶ್ಚಿಮ ಆಫ್ರಿಕಾ ಮುಂಗಾರು, ಏಶಿಯಾ ಆಸ್ಟ್ರೇಲಿಯ ಮುಂಗಾರು ಮುಖ್ಯ ಮಾರುತಗಳು. ಏಶಿಯಾ ಮುಂಗಾರಿನಲ್ಲಿ ಎರಡು ಭಾಗಗಳು-ದಕ್ಷಿಣ ಏಶಿಯಾ ಮುಂಗಾರು (ಭಾರತ ಮತ್ತು ಸುತ್ತಲಿನ ಪ್ರದೇಶ), ಮತ್ತು ಪೂರ್ವ ಏಶಿಯಾ ಮುಂಗಾರು (ಚೈನಾ, ಕೋರಿಯ, ಜಪಾನ್). ಇವೆಲ್ಲದರಲ್ಲೂ, ಭಾರತದ ನೈಋತ್ಯ ಮುಂಗಾರು ಅತಿ ಕ್ಲಿಷ್ಟ ಹವಾಮಾನ ವ್ಯವಸ್ಥೆ (most complex weather system) ಎನಿಸಿಕೊಂಡಿದೆ.
ಮೊದಲೆಲ್ಲ ಸಮುದ್ರಯಾನ ಮಾಡುವ ನಾವಿಕರು ಇದನ್ನು ಗುರುತಿಸುತ್ತಿದ್ದರು. ರೋಮನ್ನರು ಈ ಗಾಳಿಯ ಸಹಾಯದಿಂದ ಭಾರತಕ್ಕೆ ಬಂದು ವ್ಯಾಪಾರ ಮಾಡುತ್ತಿದ್ದರು. ವಾಸ್ಕೋ ಡ ಗಾಮ ಮುಂಗಾರು ಮಾರುತದ ಜ್ಞಾನ ಹೊಂದಿದ್ದು ಭಾರತಕ್ಕೆ ಅದರಿಂದಲೇ ಭೇಟಿ ಮಾಡಿದ್ದು. ಇದರ ವ್ಯವಸ್ಥಿತವಾಗಿ ಅಧ್ಯಯನ ಸುಮಾರು ಮುನ್ನೂರು ವರ್ಷಗಳ ಹಿಂದೆ ಪ್ರಾರಂಭವಾಯಿತು. 1686 ರಲ್ಲಿ ಲಂಡನ್ ರಾಯಲ್ ಸೊಸೈಟಿಯ ಕಾರ್ಯದರ್ಶಿ ಎಡ್ಮಂಡ್ ಹ್ಯಾಲಿ (ಹ್ಯಾಲಿ ಧೂಮಕೇತು ಕಂಡುಹಿಡಿದವರು) ಮುಂಗಾರನ್ನು ಅಭ್ಯಸಿಸಿ “A historical account of the trade-winds and monsoons observable in the seas between and near the tropics with an attempt to assign the physical cause of the said winds” ಎಂಬ ಸಂಶೋಧನಾ ಲೇಖನ ಪ್ರಕಟಿಸಿದರು. ಇದರಲ್ಲಿ ಮುಂಗಾರಿನ ಮುಖ್ಯ ಕಾರಣ ಭೂಮಿ ಮತ್ತು ಸಮುದ್ರದ ಮೇಲಿನ ಶಾಖದ ವ್ಯತ್ಯಾಸ ಎಂದು ಮೊಟ್ಟಮೊದಲು ಪ್ರತಿಪಾದಿಸಿದರು.
ಮೇಲೆ ಹೇಳಿದಂತೆ ಭಾರತ ಮುಂಗಾರು ಕ್ಲಿಷ್ಟ ಹವಾಮಾನ ವ್ಯವಸ್ಥೆ. ಇದಕ್ಕೆ ಕಾರಣ ಬರೀ ಗಾಳಿ ಬಿಸಿಯಾಗಿ ಮೇಲೇರುವುದೊಂದೇ ಅಲ್ಲ. ಭೂಮಿಯ ಮೇಲಿನ ಇತರ ಪ್ರದೇಶದ ಹವಾಮಾನವೂ ನಮ್ಮ ಮುಂಗಾರಿನ ಮೇಲೆ ಪರಿಣಾಮ ಬೀರುತ್ತವೆ. ಶಾಂತ ಸಾಗರದಲ್ಲಿ ಹುಟ್ಟುವ ಎಲ್ ನಿನೊ ಮತ್ತು ದಕ್ಷಿಣ ಆವರ್ತನ (El Nino and Southern Oscillations-ENSO) ನಮ್ಮ ಮುಂಗಾರಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಪೆಸಿಫಿಕ್ ಸಮುದ್ರದಲ್ಲಿ ಎಲ್ ನಿನೊ ಇರುವ ವರ್ಷದಲ್ಲಿ ಮುಂಗಾರು ಕ್ಷೀಣವಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಲಾ ನಿನೊ (La Nino) ಎಂಬ ಹವಾಮಾನ ಕೂಡ ಇರುತ್ತದೆ. ಮುಂಗಾರು ವಿಜ್ಞಾನದ ಪಿತಾಮಹ ಎನಿಸಿದ ಸರ್ ಗಿಲ್ಬರ್ಟ್ ವಾಕರ್ (Sir Gilbert Walker) ಅವರು ಮುಂಗಾರನ್ನು ಆಳವಾಗಿ ಅಭ್ಯಸಿಸಿದವರು. ಈಜಿಪ್ಟಿನ ನೈಲ್ ನದಿಯ ಪ್ರವಾಹಕ್ಕೂ ಭಾರತದ ಮುಂಗಾರಿಗೂ ಸಂಬಂಧವಿದೆ ಎಂದು ಪ್ರತಿಪಾದಿಸಿದರು. ದಕ್ಷಿಣ ಆವರ್ತನ ಕಂಡು ಹಿಡಿದವರೂ ಇವರೆ.
ಭಾರತದ ಮುಂಗಾರು ಅಷ್ಟು ಮಹತ್ವ ಪಡೆಯಲು ಅದರ ವಿಶಿಷ್ಟ ಭೌಗೋಳಿಕ ರಚನೆಯೇ ಕಾರಣ. ಒಂದು ಕಡೆ ನೆಲ. ಅಲ್ಲಿ ಹೆಚ್ಚು ಬಿಸಿಯಾಗಿರುವ ಥಾರ್ ಮರುಭೂಮಿ. ಮತ್ತೊಂದು ಕಡೆ ಮಹಾ ಗೋಡೆಯಂತಹ ಹಿಮಾಲಯ. ಉಳಿದ ಕಡೆ ಸುತ್ತಲೂ ಸಮುದ್ರ. ಬೇಸಿಗೆಯಲ್ಲಿ ಭಾರತ ಭೂಖಂಡ ಅತಿಯಾಗಿ ಬಿಸಿಯಾಗಿ, ಗಾಳಿ ಮೇಲೇರುತ್ತದೆ. ಇದಕ್ಕೆ ರಾಜಸ್ಥಾನದ ಥಾರ್ ಮರುಭೂಮಿ, ಕಲ್ಲುಬಂಡೆಗಳ ದಖ್ಖನ್ ಪ್ರಸ್ಥಭೂಮಿ (Deccan plateau) ಕೂಡಾ ದೊಡ್ಡ ಕಾರಣ. ಈ ಗಾಳಿಯು ಇನ್ನಷ್ಟು ಮೇಲೇಳುವಂತೆ ಮಾಡುವುದು ಪಶ್ಚಿಮ ಮತ್ತು ಪೂರ್ವ ಘಟ್ಟಗಳು. ಇದು ಒಮ್ಮೆಲೆ ಆಗುವ ವಿದ್ಯಮಾನವಲ್ಲ. ಸುಮಾರು ಸಂಪೂರ್ಣ ಬೇಸಿಗೆ ಕಾಲ ಇದು ನಡೆಯುತ್ತದೆ. ಸಾಮಾನ್ಯವಾಗಿ ಮೇ ತಿಂಗಳು ಅತಿ ಹೆಚ್ಚು ಉಷ್ಣಾಂಶದ ತಿಂಗಳು. ಉಷ್ಣಾಂಶದ buildup ಆಗಿ, ದೇಶದ ನೆಲದ ಮೇಲೆ ವಾಯುಭಾರ ಕಡಿಮೆಯಾಗಿರುತ್ತದೆ. ಹೆಚ್ಚು ಎತ್ತರದಿಂದ ಕಡಿಮೆ ಎತ್ತರಕ್ಕೆ ಹರಿಯುವುದು ನೀರಿನ ಗುಣವಾದರೆ, ಹೆಚ್ಚು ಒತ್ತಡದಿಂದ ಕಡಿಮೆ ಒತ್ತಡದ ಪ್ರದೇಶಕ್ಕೆ ಹರಿಯುವುದು ಗಾಳಿಯ ಗುಣ. ತಣ್ಣಗಿನ, ಹೆಚ್ಚು ಭಾರದ ಸಮುದ್ರದ ಮೇಲಿನ ಗಾಳಿ ಭೂಮಿಯ, ಅಂದರೆ ಭಾರತ ಭೂಖಂಡದ ಕಡೆ ನುಗ್ಗಲು ಶುರುವಾಗುತ್ತದೆ. ಇದು ಸಾಮಾನ್ಯವಾಗಿ ಜೂನ್ ಇಂದ ಪ್ರಾರಂಭವಾಗಿ ಒಂದು, ಒಂದೂವರೆ ತಿಂಗಳಲ್ಲಿ ಇಡೀ ದೇಶವನ್ನು ವ್ಯಾಪಿಸುತ್ತದೆ. ದೈನಂದಿಕ ಸಾಗರ ಮಾರುತ ಬರೀ ಗಾಳಿ ಬೀಸಿದರೆ, ಈ ನೈಋತ್ಯ ಮಾರುತ, ಅಂದರೆ ಮಾನ್ಸೂನ್, ಆವಿಯಾದ ಸಮುದ್ರ ನೀರನ್ನೂ ಹೊತ್ತು ತಂದು ಭೂಮಿಯ ಮೇಲೆ ಸುರಿಸುತ್ತದೆ. ಇದೇ ಮುಂಗಾರು ಮಳೆ. ಹೀಗೆ ಸುರಿಯುವ ಮಳೆ ಇನ್ನಷ್ಟು ಶಾಖವನ್ನು (latent heat) ಬಿಡುಗಡೆಗೊಳಿಸುತ್ತದೆ. ಇದರಿಂದ ಬಿಸಿಯಾದ ಗಾಳಿ ಮತ್ತೆ ಮೇಲೆದ್ದು ಸಮುದ್ರದಿಂದ ನೀರಾವಿ ತುಂಬಿದ ಗಾಳಿಯನ್ನು ಸೆಳೆಯುತ್ತದೆ. ಹೀಗೆ ಮುಂಗಾರು ನೆಲದ ಮೇಲೆ ಮಳೆಯನ್ನು ಸುರಿಸುತ್ತ ಮುಂದೆ ಮುಂದೆ ಸಾಗುತ್ತ ಇಡೀ ದೇಶವನ್ನು ವ್ಯಾಪಿಸುತ್ತದೆ. ಇದು ಸಾಮಾನ್ಯವಾಗಿ ಪ್ರತಿ ವರ್ಷವೂ ಅದೇ ದಿಕ್ಕಿನಲ್ಲಿ ಸಾಗುತ್ತದೆ.

ಭಾರತದಲ್ಲಿ ನೈಋತ್ಯ ಮುಂಗಾರು (southwest monsoon) ಮತ್ತು ಈಶಾನ್ಯ ಮುಂಗಾರು (northeast monsoon) ಎಂಬ ಎರಡು ರೀತಿಯ ಮುಂಗಾರುಗಳಿವೆ.

ನೈಋತ್ಯ ಮುಂಗಾರು
ನೈಋತ್ಯ ಮುಂಗಾರು ಜೂನ್ ನಿಂದ ಸಪ್ಟೆಂಬರ್ ವರೆಗೆ ಇರುತ್ತದೆ. ಈ ಸಮಯವನ್ನು ಮಳೆಗಾಲವೆನ್ನುತ್ತಾರೆ. ಇದನ್ನು summer monsoon ಎಂದೂ ಕರೆಯಲಾಗುತ್ತದೆ. ಇದರಲ್ಲಿ ಎರಡು ಭಾಗ ಅಥವಾ ತೋಳುಗಳಿವೆ-ಅರಬ್ಬಿ ಸಮುದ್ರ ತೋಳು, ಮತ್ತು ಬಂಗಾಲ ಕೊಲ್ಲಿ ತೋಳು.
ಅರಬ್ಬಿ ಸಮುದ್ರ ತೋಳು ಸುಮಾರು ಜೂನ್ ಒಂದರಂದು ಭಾರತ ಮುಖ್ಯಭೂಮಿಯನ್ನು ಕೇರಳದ ಮೂಲಕ ಪ್ರವೇಶಿಸುತ್ತದೆ. ಮುಂದೆ ಅದು ಪಶ್ಚಿಮ ಘಟ್ಟದ ಮೇಲೆ ಸಾಗುತ್ತ ಮಲೆನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕೊಂಕಣ ಕರಾವಳಿಯ ಮೇಲೆ ಮಳೆ ಸುರಿಸುತ್ತ ಸಾಗುತ್ತದೆ. ಈ ಸಮಯದಲ್ಲಿ ಘಟ್ಟದ ಪೂರ್ವಭಾಗದಲ್ಲಿ ಅಷ್ಟೇನು ಮಳೆಯಾಗುವುದಿಲ್ಲ, ಕಾರಣ ಘಟ್ಟಗಳೇ ಹೆಚ್ಚಿನ ಪ್ರಮಾಣದ ಮಳೆಯನ್ನು ತನ್ನಲ್ಲಿ ಸುರಿಸಿಕೊಳ್ಳುವುದರಿಂದ. ಈ rain shadow region ನಲ್ಲಿ ಮಲೆನಾಡಿಗೆ ಹೋಲಿಸಿದರೆ ಮಳೆ ಕಡಿಮೆ.
ಬಂಗಾಲ ಕೊಲ್ಲಿ ತೋಳು ಕೂಡ ಸರಿಸುಮಾರಿಗೆ ಅದೇ ಸಮಯಕ್ಕೆ ಪ್ರಾರಂಭವಾಗಿ ಅಂಡಮಾನ್ ನಲ್ಲಿ ಮಳೆ ಸುರಿಸುತ್ತದೆ. ಇದು ಭಾರತದ ಪೂರ್ವಭಾಗಗಳ ಕಡೆಗೆ ಸಾಗುತ್ತದೆ. ಅಲ್ಲಿ ತಡೆಗೋಡೆಯಾಗಿರುವ ಹಿಮಾಲಯ, ಮುಂಗಾರನ್ನು ಪಶಿಮದ ಕಡೆಗೆ ತಿರುಗಿಸುತ್ತದೆ. ಈ ತೋಳಿನ ಕಾರಣ ಮೇಘಾಲಯದ ಮಾಸಿನ್ರಾಮ್ (Mawsynram) ನಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಮಳೆಯಾಗುತ್ತದೆ. ಇದು ಈಗ ಜಗತ್ತಿನ ಅತಿ ಹೆಚ್ಚು ಒದ್ದೆ ಪ್ರದೇಶ (wettest place on earth) ಎನಿಸಿಕೊಂಡಿದೆ. ಅನೇಕ ವರ್ಷಗಳಿಂದ ಈ ದಾಖಲೆಯನ್ನು ಹೊಂದಿದ್ದ ಅಲ್ಲೇ ಪಕ್ಕದಲ್ಲಿರುವ ಚೆರ್ರಾಪುಂಜಿಯಿಂದ ಕಿತ್ತುಕೊಂಡಿದೆ. (ಎರಡನೆ ಅತಿ ಹೆಚ್ಚು ಮಳೆ ಬೀಳುವ ದಾಖಲೆ ಈಗ ಕರ್ನಾಟಕದ ಆಗುಂಬೆಗಿಲ್ಲ, ಅದು ಪಕ್ಕದಲ್ಲಿರುವ ಹುಲಿಕಲ್ಲಿಗೆ ಸೇರಿದೆ). ಪಶ್ಚಿಮದ ಕಡೆ ತಿರುಗಿದ ಮುಂಗಾರು, ಗಂಗಾ ಬಯಲಿನ ಮೇಲೆ ಮಳೆ ಸುರಿಸುತ್ತ ಮುಂದೆ ಹೋಗುತ್ತದೆ. ಹಿಮಾಲಯದ ಕಾರಣ ಮುಂಗಾರಿನ ಒಂದು ಹನಿಯೂ ಭಾರತವನ್ನು ಬಿಟ್ಟು ಟಿಬೆಟ್, ಚೀನಾ ಕಡೆಗೆ ಹೋಗುವುದಿಲ್ಲ. ಹಿಮಾಲಯ ಪರ್ವತ ಶ್ರೇಣಿ ಮುಂಗಾರು ಮಾರುತಕ್ಕೆ ಒಂದು ರೀತಿಯ ಅಣೆಕಟ್ಟಿನಂತೆ ವರ್ತಿಸಿ, ಭಾರತದಲ್ಲೇ ಎಲ್ಲಾ ಮಳೆಯೂ ಬೀಳುವಂತೆ ಮಾಡುತ್ತದೆ. ಉತ್ತರದಲ್ಲಿ ಈ ಎರಡೂ ತೋಳುಗಳು ಸಂಧಿಸುತ್ತವೆ.
ಈಶಾನ್ಯ ಮುಂಗಾರು (ಹಿಂಗಾರು)
ಇದು ಸಪ್ಟೆಂಬರ್ ನಂತರ ಪ್ರಾರಂಭವಾಗುತ್ತದೆ. ಇದಕ್ಕೆ winter monsoon, retreating monsoon (ಹಿಂಗಾರು) ಎಂದು ಕರೆಯಲಾಗುತ್ತದೆ. ಇದರ ಕಾರಣ ಮತ್ತು ಹರಿಯುವ ದಿಕ್ಕು ನೈಋತ್ಯ ಮುಂಗಾರಿನ ವಿರುದ್ಧವಾದುದು. ಸಪ್ಟೆಂಬರ್ ನಂತರ ಸೂರ್ಯ ದಕ್ಷಿಣದಲ್ಲಿರುವ ಕಾರಣ ಉತ್ತರ ಗೋಳಾರ್ಧದಲ್ಲಿ ಚಳಿಗಾಲ ಪ್ರಾರಂಭವಾಗುತ್ತದೆ. ನೆಲವು ಎಷ್ಟು ಬೇಗ ಬಿಸಿಯಾಗುತ್ತದೆಯೋ, ಅಷ್ಟೆ ವೇಗವಾಗಿ ನೀರಿಗಿಂತ ಬೇಗ ತಣ್ಣಗಾಗುತ್ತದೆ. ಅಂದರೆ ಈಗ ನೆಲದ ಮೇಲಿನ ಗಾಳಿ ಹೆಚ್ಚು ತಣ್ಣಗೆ, ಭಾರವಾಗಿರುತ್ತದೆ, ಸಮುದ್ರದ ಮೇಲಿನ ಗಾಳಿಗಿಂತ. ಮುಂಗಾರು ದಕ್ಷಿಣದಿಂದ ಉತ್ತರ ಪ್ರಯಾಣ ಮಾಡಿದರೆ, ಹಿಂಗಾರು ಉತ್ತರದಿಂದ ದಕ್ಷಿಣ, ನೆಲದಿಂದ ಸಮುದ್ರದ ಕಡೆಗೆ ಪ್ರಯಾಣ ಮಾಡುತ್ತದೆ. ಬಂಗಾಲ ಕೊಲ್ಲಿಯ ಮೇಲೆ ಬೀಸುವ ಈ ಹಿಂಗಾರು ಮಾರುತ ತೇವಾಂಶವನ್ನು ಹೀರಿ ಮಳೆ ಸುರಿಸುತ್ತದೆ. ಇದರಿಂದಾಗಿ ತಮಿಳುನಾಡಿನಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ. ಒಡಿಶಾ, ಆಂಧ್ರ, ಕರ್ನಾಟಕದ ಪೂರ್ವ ಭಾಗ, ತಮಿಳುನಾಡಿನ ಹೆಚ್ಚಿನ ಭಾಗದಲ್ಲಿ ಹಿಂಗಾರು ಮಳೆಯಾಗುತ್ತದೆ. ಮುಂಗಾರನ್ನು ಹೋಲಿಸಿದರೆ, ಹಿಂಗಾರಿನ ಮಳೆ ಪ್ರಮಾಣ, ಆರ್ಭಟ ಕಡಿಮೆ.
ಒಟ್ಟಿನಲ್ಲಿ, ನಮ್ಮ ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ಕೊಡುವುದು ಈ ಮುಂಗಾರು ಮಳೆ. ನಮ್ಮ ಕೃಷಿ, ಅದರ ಮೇಲೆ ಸಂಪೂರ್ಣ ಅವಲಂಬನೆ ಹೊಂದಿದ ನಮ್ಮ ಆರ್ಥಿಕ ಸ್ಥಿತಿ, ಇವಕ್ಕೆಲ್ಲ ಈ ಮುಂಗಾರು ಮಳೆಯೇ ದೊಡ್ಡ ಆಧಾರ. ಭಾರತೀಯ ಜೀವ ಶೈಲಿ ಸುತ್ತುವುದೇ ಈ ಮಳೆಯ ಸುತ್ತ. ಅದೆಷ್ಟು ಕಾವ್ಯ, ಸಾಹಿತ್ಯ, ಕಾದಂಬರಿ, ಚಲನಚಿತ್ರಗಳಿಗೆ ಈ ಮಳೆ ಸ್ಫೂರ್ತಿ. ರಾಜಸ್ಥಾನಿ, ಮೊಘಲ್ ಶೈಲಿಯ ತೈಲ ಚಿತ್ರಗಳಲ್ಲಿ ಮಳೆ, ಮೋಡ, ಮಳೆಗಾಲ ಇವೇ ಮುಖ್ಯವಾಗಿವೆ. ಮೊಘಲ್ ಮತ್ತು ರಾಜಸ್ಥಾನದ ರಾಜರು ಮಳೆಯನ್ನು ಅನುಭವಿಸಲೆಂದೇ ಮಳೆ ಮಂಟಪ (monsoon pavilion) ಕಟ್ಟಿಸಿ ಮಳೆ ಬರುವುದನ್ನು ನೋಡುತ್ತ ಆನಂದಿಸುತ್ತಿದ್ದರಂತೆ. ಒಣ, ಮರುಭೂಮಿಯ ತರಹದ ಆ ಪ್ರದೇಶದಲ್ಲಿ ಮಳೆಯೆನ್ನುವುದು ದೊಡ್ಡ ಸಂಭ್ರಮವಾಗುವುದು ಆಶ್ಚರ್ಯವೇನಲ್ಲ.


ಕಾಳಿದಾಸನು ತನ್ನ ಮೇಘದೂತದಲ್ಲಿ ಮೋಡವು ಯಾವ ದಿಕ್ಕಿನಲ್ಲಿ ಚಲಿಸುತ್ತದೆ, ಎಲ್ಲಿ ನಿಲ್ಲುತ್ತದೆ, ಮತ್ತೆ ಯಾವಾಗ ಮುಂದೆ ಹೋಗುತ್ತದೆ ಎಂದು ಸ್ಪಷ್ಟವಾಗಿ ವರ್ಣಿಸಿದ್ದಾನೆ. ಆಧುನಿಕ ಉಪಕರಣಗಳಿಲ್ಲದ ಆ ದಿನಗಳಲ್ಲಿ ಇದು ಹೇಗೆ ಸಾಧ್ಯವಿತ್ತು ಎನ್ನುವುದಕ್ಕೆ ಉತ್ತರವಿಲ್ಲ. ಅನೇಕ ವರ್ಷಗಳಿಂದ ಕರಾರುವಾಕ್ಕಾಗಿ ಅದೇ ದಿನ ಪ್ರಾರಂಭವಾಗಿ, ಅದೇ ದಿಕ್ಕಿನಲ್ಲಿ ಚಲಿಸುತ್ತ, ಸರಿಯಾದ ದಿನಾಂಕದಂದು ಆಯಾ ಪ್ರದೇಶದಲ್ಲಿ ಮಳೆ ಸುರಿಸುತ್ತಿದ್ದ ಮುಂಗಾರು ಈಗೀಗ ಕೈಕೊಡಲು ಶುರುವಾಗಿದೆ. ಇದಕ್ಕೆ ಕಡಿಮೆಯಾದ ಕಾಡು, ವಾಹನ, ಕಾರ್ಖಾನೆಗಳಿಂದ ಉತ್ಪತ್ತಿಯಾದ ಇಂಗಾಲ ಅನಿಲದಿಂದ ಬಿಸಿಯಾಗುತ್ತಿರುವ ಭೂ ವಾತಾವರಣ, ಎಲ್ಲ ದೊಡ್ಡ ರೀತಿಯಲ್ಲಿ ಕಾರಣವಾಗುತ್ತಿವೆ. ಹೀಗೆ ಮುಂದುವರೆದರೆ ಮುಂಗಾರು ಒಂದು ಗತಕಾಲದ ವೈಭವವಾಗುವ ಅಪಾಯ ದೂರವಿಲ್ಲ.

Tuesday 5 February, 2013

"ಮೇಷ್ಟ್ರಾ?? ಆರಾಮ್ ಕೆಲ್ಸ ಬಿಡಿ"


"ಓ, ನೀವು ಕಾಲೇಜಿನಲ್ಲಿ ಕೆಲ್ಸ ಮಾಡೋದಾ? ಆರಾಮ್ ಕೆಲ್ಸ ಬಿಡಿ"

"ಮೇಷ್ಟ್ರಾ?? ನಿಮಗೇನು ಬಿಡಿ, ಬೇಕಾದಷ್ಟು ರಜೆಗಳು, ಎಲ್ಲಾ ಸರಕಾರಿ ರಜೆಗಳೂ ಸಿಗುತ್ತವೆ. ಪರೀಕ್ಷೆ ಮುಗಿದ ಮೇಲೆ ವೆಕೇಶನ್ ಬೇರೆ"

" ಶಾಲೆ, ಕಾಲೇಜ್ ಕೆಲ್ಸ ಅದೇನು ಮಹಾ? ಒಂದೆರಡು ಗಂಟೆ ಹುಡುಗರ ಮುಂದೆ ಒದರಿದರೆ ಮುಗೀತು, ಆಮೇಲೆ ಸ್ಟಾಫ್ ರೂಮಿಗೆ ಬಂದು ಹರಟೆ ಹೊಡೆಯುತ್ತ ಕೂರಬಹುದು"

"ಪಾಠ ಹೇಳೋ ಕೆಲಸಾನ? ಹೇಳಿದ್ದೇ ಹೇಳೋ ಕಿಸಬಾಯಿದಾಸನ ಥರ ಪ್ರತೀ ವರ್ಷ ಅದನ್ನೆ ಹೇಳಿದರಾಯಿತು. ಒಂದು ನೋಟ್ಸ್ ಇಟ್ಟುಕೊಂಡರೆ ಮುಗೀತು, ಅದನ್ನೆ ಓದುತ್ತ ಹೋದರಾಯಿತು. ನಿಮ್ ಕಲ್ಸ ಎಷ್ಟು ಸುಲಭ"

ಇದು ಶಿಕ್ಷಕ ವೃತ್ತಿಯಲ್ಲಿರುವವರು ಸಾಮಾನ್ಯವಾಗಿ ಕೇಳುವ ಮಾತುಗಳು. ನಮ್ಮಲ್ಲಿ ಅನೇಕರಿಗೆ ಈಗಲೂ ಶಿಕ್ಷಕ ವೃತ್ತಿಯ ಬಗ್ಗೆ ಹಗುರ ಭಾವನೆಯಿದೆ. ಅದು ತುಂಬ ಸುಲಭದ ಕೆಲಸ, ಟೆನ್ಶನ್ ಇಲ್ಲದ ಆರಾಮದಾಯಕ ವೃತ್ತಿ, ಬೇಕಾದಷ್ಟು ರಜೆ, ಸೌಲಭ್ಯ ಪಡೆಯುತ್ತ ಕಾಲಹರಣ ಮಾಡುತ್ತ ಇರಬಹುದು, ಇಂಥ ಅನೇಕ ಕಲ್ಪನೆಗಳಿವೆ.

ನಮ್ಮ ದೇಶದಲ್ಲಿ ಮೊದಲಿಂದಲೂ ಬೇರೆ ಬೇರೆ ವೃತ್ತಿಗಳ ಬಗ್ಗೆ ಪೂರ್ವಾಗ್ರಹಗಳಿವೆ. ಇಂಥ ಕೆಲಸ ಹೆಚ್ಚು ಆದಾಯ ತರುವಂಥದ್ದು, ಈ ಕೆಲಸ ಮಾಡಿದರೆ ಸಮಾಜದಲ್ಲಿ ಹೆಚ್ಚು ಪ್ರತಿಷ್ಠೆ, ಆ ಕೆಲಸ ಮಾಡುವವರು ಮಾತ್ರ ಜಗತ್ತನ್ನು ತಲೆಯ ಮೇಲೆ ಹೊತ್ತಿರುವವರು, ಆ ಕೆಲಸಕ್ಕೆ ಬುದ್ಧಿಯೇ ಬೇಕಾಗಿಲ್ಲ, ಈ ಕೆಲಸ ಬಹಳ ಸುಲಭ, ಆ ವೃತ್ತಿಗೆ ಯಾವ ಶ್ರಮವೂ ಬೇಕಿಲ್ಲ, ಹೀಗೆ. ಉದಾಹರಣೆಗೆ ಇಂಜಿನಿಯರ್ ಕೆಲಸ. ಕೆಲ ವರ್ಷಗಳ ಹಿಂದೆ (ಈಗಲೂ) ಇಂಜಿನಿಯರಿಂಗ್ ಮಾಡಿದರೇನೆ ಬದುಕು ಸಾರ್ಥಕ ಎಂಬ ಮನೋಭಾವನೆಯಿತ್ತು (ಇದೆ). ಆ ವೃತ್ತಿ ತರುವ ಪ್ರತಿಷ್ಠೆ, ಹಣ ಮಾತ್ರ ಮುಖ್ಯ. ಸಾಫ್ಟ್ ವೇರ್ ಉದ್ಯೋಗ ಸೃಷ್ಟಿಯಾದ ಮೇಲಂತೂ ಒಂದು ದೊಡ್ಡ ಪ್ರವಾಹವೇ ಶುರುವಾಯಿತು. ಎಸ್.ಎಸ್.ಎಲ್.ಸಿ ಮಾಡಿರಲಿ, ಡಾಕ್ಟರ್ ಆಗಿರಲಿ, ಎಲ್ಲರೂ ಸಾಫ್ಟ್ ವೇರ್ ಕ್ಷೇತ್ರಕ್ಕೆ ಓಡಿದವರೇ. ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡದವನು ದಂಡಪಿಂಡ ಎಂಬಂತಹ ಮನೋಭಾವ ಎದ್ದು ನಿಂತಿತು. ನಮ್ಮಲ್ಲಿಯ ಕೆಲ ಸಾಫ್ಟ್ ವೇರ್ ಕಂಪನಿ ಮುಖ್ಯಸ್ಥರು ಕೂಡ ಜಗತ್ತು ನಡೆಯುವುದೇ ನಮ್ಮಿಂದ ಎಂಬಂತೆ ವರ್ತಿಸತೊಡಗಿದರು. ನಾವು ಕೇಳಿದ್ದು ಕೊಡದಿದ್ದರೆ ಈ ಊರು ಬಿಟ್ಟು ಬೇರೆ ಕಡೆ ನಮ್ಮ ಕಂಪನಿ ಸ್ಥಾಪಿಸುತ್ತೇವೆ ಎಂದು ಸರಕಾರಕ್ಕೇ ಧಮಕಿ ಹಾಕಿ blackmail ಮಾಡುವಷ್ಟು ದುರಹಂಕಾರ ಬೆಳೆಸಿಕೊಂಡರು. ಇವರಿಗೆಲ್ಲ ಕುಮ್ಮಕ್ಕು ಕೊಡುವ, IT BT ದೊರೆಗಳು ಹೇಳಿದ್ದೆಲ್ಲ ವೇದವಾಕ್ಯ ಎಂದು ನಂಬಿದ, ನಂಬಿಸುವ, ಕೆಲ ಇಂಗ್ಲೀಷ್ ಪತ್ರಿಕೆಗಳು ಈ ದುರಹಂಕಾರಿ IT BT ಮುಖ್ಯಸ್ಥರ ಮುಖವಾಣಿ (mouthpiece) ಆದವು.

ಇದು ಆಧುನಿಕ ವೃತ್ತಿಗಳ ಬಗ್ಗೆ ಆದರೆ ಸಾಂಪ್ರದಾಯಿಕ ವೃತ್ತಿಗಳೇನೂ ಪೂರ್ವಾಗ್ರಹಗಳಿಂದ ಮುಕ್ತವಾಗಿಲ್ಲ. ನಮ್ಮ ಕಥೆ ಕಾದಂಬರಿಗಳು, ಸಾಹಿತ್ಯ, ಕವನ, ಸಿನೆಮಾ, ರಾಜಕೀಯದವರು, ಬುದ್ಧಿಜೀವಿಗಳು, ಎಲ್ಲ ಕೃಷಿಯನ್ನು ವಿಪರೀತ ಎನಿಸುವಷ್ಟು ವರ್ಣನೆ ಮಾಡಿವೆ. ರೈತರು ಮಾತ್ರ ಕಷ್ಟಪಟ್ಟು ದುಡಿಯುವವರು, ಅವರು ಮಾತ್ರ ಶ್ರಮಜೀವಿಗಳು, ಇತರರೆಲ್ಲರೂ ಅವರ ಹೊಟ್ಟೆಮೇಲೆ ಹೊಡೆದು ಶೋಷಣೆ ಮಾಡುವವರು ಎಂಬಂತಹ ಚಿತ್ರಣವನ್ನೇ ಕೊಡುತ್ತಾ ಬಂದಿದ್ದಾರೆ. ರೈತನಿರಲಿ, ಚಪ್ಪಲಿ ಹೊಲಿಯುವವನಿರಲಿ, ಕಾರ್ ಡ್ರೈವರ್ ಇರಲಿ, ದೊಡ್ದ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಇರಲಿ, ಎಲ್ಲರೂ ದೇಶಕ್ಕೆ ದುಡಿದೇ ದುಡಿಯುತ್ತಾರೆ, ಪ್ರತಿಯೊಬ್ಬರ ಶ್ರಮವೂ ಅಗತ್ಯ. ಸೈನಿಕರು ಮಾತ್ರ ದೇಶಪ್ರೇಮಿಗಳಲ್ಲ. ದಾದಿ, ವೈದ್ಯ, ಶಿಕ್ಷಕ ವೃತ್ತಿಗಳು ಮಾತ್ರ noble profession ಆಗಬೇಕಿಲ್ಲ, software ಉದ್ಯೋಗಿಗಳಿಗೆ ಮಾತ್ರ stress ಇರುತ್ತದೆ ಎಂದೇನಿಲ್ಲ. Police ಕೆಲಸದಲ್ಲಿರುವವರಿಗೆ ಕೇಳಿ stress ಎಂದರೇನೆಂದು. ಇತ್ತೀಚೆಗೆ ಕಾನ್ಸ್ಟೇಬಲ್ ಒಬ್ಬ ಹಿರಿಯಧಿಕಾರಿಯನ್ನು ರಜೆ ಕೊಟ್ಟಿಲ್ಲ ಎಂದು ಕೊಂದಿದ್ದು ನೆನಪಿರಬಹುದು. ದಿನಕ್ಕೆ ಕನಿಷ್ಟ 14-15 ಗಂತೆ ಕೆಲಸ ಮಾಡುತ್ತಾರೆ, ಅದೂ ಸಾರ್ವಜನಿಕರಿಂದ, ಹಿರಿಯ ಅಧಿಕಾರಿಗಳಿಂದ, ರಾಜಕಾರಣಿಗಳಿಂದ ನಿರಂತರ ಕಿರಿಕಿರಿ ಅನುಭವಿಸುತ್ತ. ನಾವು ಒಮ್ಮೆಯಾದರೂ ಯೋಚಿಸಿದ್ದೇವೆಯೇ? Corporate ಉದ್ಯೋಗಿಗಳಿಗೆ ಸ್ವಲ್ಪ ಒತ್ತಡ ಇದ್ದರೂ ದೊಡ್ಡ ಸಮಸ್ಯೆ ಎಂಬಂತೆ ವರ್ತಿಸುವ ಕೆಲ ಆಂಗ್ಲ ಪತ್ರಿಕೆಗಳು ಇವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿವೆಯೇ?

ಇರಲಿ, ಶಿಕ್ಷಕ ವೃತ್ತಿಯ ಬಗ್ಗೆ ಮಾತಾಡೋಣ. ನಾನಿಲ್ಲಿ ಹೇಳುತ್ತಿರುವುದು ಕಾಲೇಜ್ ಶಿಕ್ಷಣ, ಅದರಲ್ಲೂ ಇಂಜಿನಿಯರಿಂಗ್ ಶಿಕ್ಷಕ ವೃತ್ತಿಯ ಬಗ್ಗೆ ಆದರೂ, ಡಿಗ್ರಿ ಕಾಲೇಜು, ಶಾಲಾ ಶಿಕ್ಷಕ ವೃತ್ತಿಯಲ್ಲಿಯೂ ಇವುಗಳಲ್ಲಿ ಅನೇಕ ಸಾಮ್ಯತೆಗಳನ್ನು ನೋಡಬಹುದು.

ಇಪ್ಪತ್ತು ಮೂವತ್ತು ವರ್ಷ ಹಿಂದೆ ಹೇಗಿತ್ತೋ ಗೊತ್ತಿಲ್ಲ, ಆದರೆ ಈಗ ಶಿಕ್ಷಕ ವೃತ್ತಿ ತುಂಬಾ competetive ಆಗಿದೆ. ಎರಡು ಮೂರು ಗಂಟೆ ಕ್ಲಾಸ್ ತೆಗೆದುಕೊಂಡು ಆಮೇಲೆ ಸ್ಟಾಫ್ ರೂಮಿನಲ್ಲಿ ಹರಟೆ ಹೊಡೆಯುವ ಕಾಲ ಇದಲ್ಲ. ದಿನಕ್ಕೆ ಎರಡೇ ಗಂಟೆ ಕ್ಲಾಸ್ ಇರಬಹುದು ನಿಜ. ಆದರೆ ಒಬ್ಬ ಶಿಕ್ಷಕನ ಕೆಲಸ ಬರೀ ಪಾಠ ಮಾಡುವುದಕ್ಕೆ ಸೀಮಿತವಾಗಿಲ್ಲ. College management ಗಳು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ಕೊಡುತ್ತಲೇ ಇರುತ್ತಾರೆ. ನೂರೆಂಟು ಅನೇಕ ಸಣ್ಣ ಸಣ್ಣ ಕೆಲಸಗಳು ಇದ್ದೇ ಇರುತ್ತವೆ. Test, assignment, correction, attendance, mentoring, ಆ ಕಮಿಟಿ, ಈ ಕಮಿಟಿ, ಹೀಗೆ ಪ್ರತೀ ಗಂಟೆಯೂ ಒಂದಲ್ಲ ಒಂದು ಚಟುವಟಿಕೆ ಶಿಕ್ಷಕರನ್ನು ಬಿಸಿಯಾಗಿಟ್ಟಿರುತ್ತವೆ. Engineering semester ಮುಗಿಯುವ ಹೊತ್ತಿಗೆ ಕೆಲಸದೊತ್ತಡ ವಿಪರೀತವಿರುತ್ತದೆ.

ಕ್ಲಾಸ್ ಇದ್ದಾಗ ಒಂದು ದಿನ ರಜೆ ತೆಗೆದುಕೊಳ್ಳುವುದು ಎಷ್ಟು ಕಷ್ಟ ಎಂದು ಅನುಭವಿಸಿದವರಿಗೇ ಗೊತ್ತು. College management ಗಳು ದಿನ ದಿನ ಸೃಷ್ಟಿಸುವ ಹೊಸ ಹೊಸ, ಸ್ವಲ್ಪವೂ ಕೆಲಸಕ್ಕೆ ಬಾರದ ಅರ್ಥಹೀನ rules ಗಳನ್ನು ಪಾಲಿಸುವ ಹಣೆಬರಹ ಅಧ್ಯಾಪಕವರ್ಗಕ್ಕೇ ಯಾವಾಗಲೂ. ಎಷ್ಟೋ ರೂಲ್ ಗಳಿಂದ ಸಂಸ್ಥೆಗಾಗಲೀ, ವಿದ್ಯಾರ್ಥಿಗಳಿಗಾಗಲೀ, ಅಧ್ಯಾಪರಿಗಾಗಲೀ ಪ್ರಯೋಜನವೇ ಇರುವುದಿಲ್ಲ. ನಿಜವಾದ ಸಮಸ್ಯೆಗಳನ್ನು ಪರಿಹರಿಸುವುದರ ಬಗ್ಗೆ ಗಮನ ಕೊಡದ ಆಡಳಿತವರ್ಗ, ಇಂಥ ಅಪ್ರಯೋಜಕ ರೂಲ್ ಗಳನ್ನು ಮಾಡಿ ಸಿಬ್ಬಂದಿ ಮೇಲೆ ಹೇರಲು ಆತುರ ತೋರಿಸುತ್ತವೆ.

ಶಿಕ್ಷಕರಿಗೆ ಎಲ್ಲಾ ಸರಕಾರಿ ರಜೆಗಳು ಸಿಗುತ್ತವೆ ಎನ್ನುವುದೇನೋ ನಿಜ. ಆದರೂ ಇದು management ಕೈಯ್ಯಲ್ಲಿದೆ ಎನ್ನುವುದು ಮರೆಯುವಂತಿಲ್ಲ. ಕೆಲ ಕಾಲೇಜಿನಲ್ಲಿ ರಜೆ ಕೊಟ್ಟಹಾಗೆ ಮಾಡಿ, ಮುಂದಿನ ಎರಡು ಶನಿವಾರಗಳು ಪೂರ್ತಿ ದಿನ ಕೆಲಸಮಾಡಿಸುವುದಿದೆ. ಇನ್ನು ಕೆಲ ಕಾಲೇಜಿನಲ್ಲ ಕೆಲ ರಜೆಗಳನ್ನು ಕೊಡುವುದೇ ಇಲ್ಲ. ಎಲ್ಲಾ ಸರಕಾರಿ ರಜೆಗಳು ಸಿಗುತ್ತವೆ ಎನ್ನುವವರು ಮರೆಯುವ ಒಂದು ವಿಷಯ ಎಂದರೆ software ಕ್ಷೇತ್ರದಲ್ಲಿರುವವರಿಗೆ ಪ್ರತಿ ಶನಿವಾರ ರಜೆ ಸಿಗುವುದರ ಬಗ್ಗೆ. ಸರಕಾರಿ ರಜೆಗಳು ವರ್ಷಕ್ಕೆ ಸುಮಾರು 23 ಇರಬಹುದು, ಅದರಲ್ಲೂ ಕೆಲವು ಭಾನುವಾರ ಬಂದರೆ ಹೋಯಿತು. ಆದರೆ ಸಾಫ್ಟ್ ವೇರ್ ನಲ್ಲಿ 52 ದಿನ ರಜೆ ಹೆಚ್ಚು ಸಿಗುತ್ತದೆ, ಇದರ ಬಗ್ಗೆ ಯಾರೂ ತಕರಾರು ಎತ್ತುವುದಿಲ್ಲ. ಸರಕಾರಿ ಉದ್ಯೋಗಿಗಳಿಗೆ, ಶಿಕ್ಷಕರಿಗೆ ರಜೆ ಸಿಕ್ಕಿದರೆ ಹೊಟ್ಟೆ ಉರಿದುಕೊಳ್ಳುವವರೇ ಎಲ್ಲರೂ.

Vacation ಎನ್ನುವುದು ಇನ್ನೊಂದು ಹೊಟ್ಟೆ ಉರಿದುಕೊಳ್ಳುವ ವಿಷಯ. ಅನೇಕರಿಗೆ ಗೊತ್ತಿಲ್ಲ, vacation ಎನ್ನುವುದು ಸಿಗುವುದು ಅಷ್ಟು ಸುಲಭವಲ್ಲ. ಅನೇಕ ಕಾಲೇಜ್ ಗಳಲ್ಲಿ vacation ರಜ ಕೊಡುವುದಿಲ್ಲ, ಕೊಟ್ಟರೂ ಮೂರ್ನಾಲ್ಕು ದಿನ, ಹೆಚ್ಚೆಂದರೆ ಒಂದು ವಾರ. ಈ ದಿನಗಳಲ್ಲಿಯೂ valuation, invigilation, meeting ಎಂದು ಕಾಲೇಜಿಗೆ ಕರೆಸಿಕೊಳ್ಳುತ್ತಾರೆ.

Software ನಲ್ಲಿರುವವರು ಮನೆಗೆ ಬಂದಮೇಲೂ ಕೆಲಸ ಮಾಡುತ್ತಾರೆ ಎನ್ನುವುದು ದೊಡ್ಡ ಸುದ್ದಿ. ಇದು ಅವರಿಗೆ ಮಾತ್ರ ಸೀಮಿತವಾಗಿಲ್ಲ. ಇತರ ಅನೇಕ ಕೆಲಸದವರೂ ಮನೆಗೆ ಕೆಲಸ ತರುತ್ತಾರೆ. ಶಿಕ್ಷಕರು notes ಮಾಡುವುದು, ಓದುವುದು, test papers correction ಮಾಡುವುದು ಹೀಗೆ ಅನೇಕರು ಮನೆಗೂ ತರುತ್ತಾರೆ ಕಾಲೇಜ್ ಕೆಲಸವನ್ನು. ಈಗ ಪಾಠ ಮಾಡುವುದಕ್ಕೂ Word, Powerpoint, Flash ಮುಂತಾದ ಆಧುನಿಕ ಸೌಲಭ್ಯಗಳನ್ನು ಬಳಸುವುದು ಸಾಮಾನ್ಯವಾಗಿರುವುದರಿಂದ ಮನೆಯಲ್ಲಿ ಇವುಗಳಲ್ಲಿ ಕೆಲಸಮಾಡುವುದು ಕೂಡ ಸಾಮಾನ್ಯವಾಗಿದೆ.

ಎಲ್ಲಾ ವೃತ್ತಿಗಳಲ್ಲಿರುವಂತೆ ಅಧ್ಯಾಪನ ವೃತ್ತಿಯಲ್ಲಿಯೂ ಏರಿಳಿತ ಸಹಜ. ಒಳ್ಳೆಯದು ಇದೆ, ಕೆಟ್ಟದ್ದೂ ಇದೆ. ತುಂಬ ಕಷ್ಟದ ಕೆಲಸ ಅಲ್ಲ ನಿಜ. ಆದರೆ ಅನೇಕರು ತಿಳಿದಂತೆ ಸುಲಭದ, ಕಾಲಹರಣದ ಕೆಲಸವಂತೂ ಅಲ್ಲ. ಹಿಂದೆ, ಬೇರೆಲ್ಲೂ ಕೆಲಸ ಸಿಗದವರು ಶಿಕ್ಷಕರಾಗುತ್ತಾರೆ ಎಂಬ ನಂಬಿಕೆಯಿತ್ತು. ಈಗ ಹಾಗಲ್ಲ. ಈ ಕ್ಷೇತ್ರದಲ್ಲಿಯೂ ಬೆಳೆಯಬಹುದು, ಸಾಧನೆ ಮಾಡಬಹುದು ಎಂದು ಅನೇಕರು ಸ್ವಯಂಪ್ರೇರಿತರಾಗಿ ಬರುತ್ತಿದ್ದಾರೆ. Corporate ಕೆಲಸ ಬಿಟ್ಟು ಇಂಜಿನಿಯರಿಂಗ್ ಕಾಲೇಜ್ professor ಆಗಿ ಅನೇಕರು ಬಂದಿದ್ದಾರೆ, ಬರುತ್ತಿದ್ದಾರೆ. ಸಂಶೋಧನೆ, ತಾಂತ್ರಿಕ ಲೇಖನ ಪ್ರಕಟನೆ (paper presentation), ತಾಂತ್ರಿಕ ಸಭೆ (conference)ಗೆ ಹೋಗುವುದು, ಹೀಗೆ ಉತ್ಸಾಹದಿಂದ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹ. ಆದರೂ ಇದೊಂದು career ಅಲ್ಲ ಎಂಬ ತಪ್ಪು ಕಲ್ಪನೆ ಹೋಗಲು ಇನ್ನೂ ಸಮಯ ಬೇಕು. ಶಿಕ್ಷಕ ವೃತ್ತಿ ಬೋರು, exciting ಅಲ್ಲ ಎಂಬ ಮನೋಭಾವನೆ ಇನ್ನೂ ಹೋಗಬೇಕಿದೆ. ಕೇವಲ corporate, software ಮುಂತಾದ ಕೆಲಸಗಳು exciting ಎಂಬ ಕುರುಡು ನಂಬಿಕೆ ಬಿಡಬೇಕು.