Monday 5 July, 2010

ಮೆದುಳಿಗೆ ಸ್ವಲ್ಪ ಆಹಾರ ...

ಊಟ ಆಯಿತಾ? ಆಗದೆ ಇದ್ದರೆ ಮಾಡಿಕೊಂಡೆ ಓದಲು ಶುರುಮಾಡಿ, ದೀರ್ಘವಾಗಿದೆ ಈ ಲೇಖನ, ಓದುತ್ತಾ ಹಸಿವಾಗಬಹುದು.


ಯಾಕಂತೀರೋ??
ನಮ್ಮ ಆಹಾರ ಪದ್ಧತಿ ಬಗ್ಗೆ ನನಗೆ ಮೊದಲಿಂದಲೂ ಕುತೂಹಲ. ನಾವು ಈಗ ಉಪಯೋಗಿಸುವ ಆಹಾರದ ಇತಿಹಾಸ ಏನು? ದೋಸೆ, ಇಡ್ಲಿ, ಚಪಾತಿ, ರೊಟ್ಟಿ, ಉಪ್ಪಿಟ್ಟು, ಅವಲಕ್ಕಿ, ಆ ಬಾತ್, ಈ ಬಾತ್....ಇವೆಲ್ಲ ಎಂದಿನಿಂದ ಇವೆ? ನಮ್ಮ ಹಿಂದಿನವರು ಇವೆಲ್ಲವನ್ನು ತಿಂದವರೇ ಏನು?
  • ನೂರು ವರ್ಷದ ಹಿಂದೆ ಹೇಗಿತ್ತು?
  • ಕೃಷ್ಣದೇವರಾಯ ಬೆಳಗಿನ ಉಪಾಹಾರಕ್ಕೆ ಏನು ತಿನ್ನುತ್ತಿದ್ದ?
  • ಅಶೋಕನ ಕಾಲದಲ್ಲಿ ಊಟತಿಂಡಿ ಏನಿತ್ತು?
  • ಕುರುಕ್ಷೇತ್ರ ನಡೆಯುವಾಗ ಸೈನಿಕರು ಯಾವ ಆಹಾರ ಸೇವಿಸುತ್ತಿದ್ದರು?
  • ರಾಮಾಯಣ ಕಾಲದಲ್ಲಿ ಜನರು ಯಾವ ತಿಂಡಿ ಬೆಳಿಗ್ಗೆ ತಿಂದು ತಮ್ಮ ಕೆಲಸಕ್ಕೆ ಹೊರಡುತ್ತಿದ್ದರು?
  • ಇನ್ನೂ ಹಿಂದೆ ವೇದ ಕಾಲಕ್ಕೆ, ಹರಪ್ಪ ಮೊಹೆಂಜೊದಾರೋ ಜನರು ಹೇಗಿದ್ದರು? ಅವರು ಸಂಜೆ ಛಳಿಗೆ ಏನು ಬಿಸಿಬಿಸಿ ಪಾನೀಯ ಕುಡಿಯುತ್ತಿದ್ದರು?

ಹೀಗೆ ಪ್ರಶ್ನೆ ಕೇಳುತ್ತ ಹೋದರೆ ಆಶ್ಚರ್ಯವಾಗುತ್ತದೆ ಅಲ್ಲವೆ? ದೇವ ದೇವತೆಗಳು, ರಾಜಮಹಾರಾಜರು, ಋಷಿಮುನಿಗಳ ವಿಷಯ ಬಿಡಿ, ನಮ್ಮ ನಿಮ್ಮಂತಹ ಸಾಮಾನ್ಯ ಜನರ ಆಹಾರ ಪದ್ಧತಿ ಹೇಗಿತ್ತು ಎಂದು ಪ್ರಶ್ನೆಗಳು ಏಳುತ್ತವೆ. ನಮ್ಮ ಪುರಾಣ, ಇತಿಹಾಸಗಳು ಅಂದು ನಡೆದ ಯುದ್ಧಗಳು, ರಾಜ್ಯಾಡಳಿತಗಳು, ಕಟ್ಟಿದ ದೇವಸ್ಥಾನ, ಕೋಟೆ, ಅರಮನೆಗಳು, ಮಾಡಿದ ಯಜ್ಞ ಯಾಗಾದಿಗಳು, ದಾನಗಳ ಬಗ್ಗೆ ಹೇಳುತ್ತವೆಯೇ ಹೊರತು, ಜನಸಾಮಾನ್ಯರ ದಿನನಿತ್ಯದ ಜೀವನದ ಬಗ್ಗೆ ಅಷ್ಟಾಗಿ ಎಲ್ಲೂ ಹೇಳುವುದಿಲ್ಲ. ಆಗಿನ ಜನರು ಏನು ಊಟ ತಿಂಡಿ, ಪಾನೀಯ ಸೇವಿಸುತ್ತಿದ್ದರು? ನಮ್ಮ ಈಗಿನ ಆಹಾರಗಳು ಯಾವಾಗಿನಿಂದ ಪ್ರಾರಂಭವಾದವು? ಹಣ್ಣುಹಂಪಲು ಮತ್ತು ಮಾಂಸಾಹಾರದ ವಿಷಯ ಬಿಡಿ. ಮನುಷ್ಯ ಮೊದಲು ಬೇಟೆಯಾಡಿಯೇ ಜೀವನ ನಡೆಸಿದ್ದು. ಸಸ್ಯಾಹಾರ ಯಾವಾಗ ಪ್ರಾರಂಭವಾಯಿತು?

ಭೂಮಿಯ ಮೇಲೆ ಕೋಟ್ಯಂತರ ಸಸ್ಯಗಳಿವೆ. ಅದರಲ್ಲಿ ಕೆಲವನ್ನು ಮಾತ್ರ ಆಹಾರಕ್ಕೆ ಬಳಸಬಹುದು ಎಂದು ಹೇಗೆ ತಿಳಿದರು? ಕರಿಬೇವಿನ ಎಲೆಗಳನ್ನು ಸಾರಿಗೆ ಹಾಕುತ್ತೇವೆ. ಅದರ ಪಕ್ಕದಲ್ಲೇ ಬೆಳೆದ ಗುಲಾಬಿ ಗಿಡದ್ದೊ, ಪಾರ್ಥೇನಿಯಮ್ ಗಿಡದ್ದೋ, ಹುಲ್ಲಿನ ಎಲೆಗಳನ್ನು ಸಾರು, ಸಾಂಬಾರ್, ಪಲ್ಯಕ್ಕೆ ಹಾಕಲು ಯಾರು ಯಾಕೆ ಹೋಗಲಿಲ್ಲ? ವಿಚಿತ್ರ ಎನಿಸುತ್ತಲ್ಲವೇ?

ಅಡುಗೆಮನೆ ನಿಜವಾದ ಅರ್ಥದಲ್ಲಿ ಒಂದು ಪ್ರಯೋಗಾಲಯ. ಪ್ರಯೋಗಶಾಲೆಯಲ್ಲಿ ವಿಧವಿಧವಾದ ರಾಸಾಯನಿಕಗಳನ್ನು ಬೆರೆಸಿ, ಶಾಖ ನೀಡಿ, ಇಲ್ಲ ತಣ್ಣಗೆ ಮಾಡಿ, ಹೀಗೆ ಬೇರೆ ಬೇರೆ ವಿಧದ ಭೌತಿಕ, ರಾಸಾಯನಿಕ ಬದಲಾವಣೆಗಳನ್ನು ಮಾಡಿ ಹೊಸ ಪದಾರ್ಥ ಸೃಷ್ಟಿಸುತ್ತಾರೆ. ಅಡಿಗೆ ಮನೆಯಲ್ಲಿ ನಡೆಯುವುದು ಇದೇ ತಾನೆ? ಅಷ್ಟಕ್ಕೂ ಆಹಾರ ಎಂದರೆ ಒಂದಿಷ್ಟು ರಾಸಾಯನಿಕಗಳ ಮಿಶ್ರಣ ಅಷ್ಟೇ. ನಮ್ಮ ನಾಲಿಗೆ ಮೇಲೆ, ದೇಹ ಸೇರಿದ ಮೇಲೆ ಪರಿಣಾಮ (ಅಂದರೆ ಆರೋಗ್ಯ) ಇದರ ಮೇಲೆ ಆ ಪದಾರ್ಥ (ಆಹಾರ) ಪ್ರಾಮುಖ್ಯತೆ ಪಡೆಯುತ್ತದೆ.

ರಾಸಾಯನಿಕಗಳು organic ಮತ್ತು inorganic ಎಂದು ವಿಂಗಡಿಸಬಹುದು. Organicನಲ್ಲಿ ಇಂಗಾಲ (carbon), ಜಲಜನಕ (hydrogen), ಆಮ್ಲಜನಕ (oxygen) ಇರಲೇಬೇಕು. ಎಲ್ಲಾ ಜೀವಿಗಳ ದೇಹದಲ್ಲಿರುವುದು ಈ organic ರಾಸಾಯನಿಕಗಳೇ. ನಾವು ತಿನ್ನುವ ಯಾವುದೇ ಆಹಾರ organic ಪದಾರ್ಥಗಳ ಕಂತೆ. ಆದರೆ ನಮ್ಮ ಆಹಾರದಲ್ಲಿ ಬಳಸುವ ಎರಡೇ inorganic ವಸ್ತುಗಳೆಂದರೆ ಉಪ್ಪು (sodium chloride) ಮತ್ತು ನೀರು (H2O). ಇವೆರಡರಲ್ಲೂ ಇಂಗಾಲ ಇಲ್ಲ. ಇವೆರಡೇ ಪ್ರಾಣಿಜನ್ಯ ಮತ್ತು ಸಸ್ಯಜನ್ಯ ವಸ್ತುಗಳಲ್ಲ. ಇವು ಬಿಟ್ಟರೆ ನಮ್ಮ ಯಾವುದೇ ಆಹಾರ ತೆಗೆದುಕೊಳ್ಳಿ, ಅವು ಪ್ರಾಣಿ ಇಲ್ಲವೇ ಸಸ್ಯಜನ್ಯವಾಗಿರುತ್ತವೆ (ಅಂದರೆ organic)

ಅಹಾರದ ಇತಿಹಾಸ
ದೋಸೆ ಹೇಗೆ ಸೃಷ್ಟಿಯಾಯಿತು? ಅದಕ್ಕೆ ಇಂತಾದ್ದೇ ಚಟ್ನಿ ಇದ್ದರೆ ಚೆನ್ನ ಎಂದು ಮೊದಲು ಕಂಡುಹಿಡಿದವರಾರು? ಹುಲ್ಲಿನ ಜಾತಿಗೆ ಸೇರಿದ ಭತ್ತದ ಗಿಡದ ಅಕ್ಕಿಯೆಂಬ ಬಿಳಿ ಬೀಜವನ್ನು ಬೇಯಿಸಿ ಅನ್ನವನ್ನು ಮಾಡಬಹುದು ಎಂದು ಹೇಗೆ ತಿಳಿದರು? ಅಕ್ಕಿಯನ್ನು ಮಾಡುವುದು ಮಾತ್ರವಲ್ಲ, ಅದಕ್ಕೆ ಸಾಂಬಾರ್/ಹುಳಿ/ಸಾರು/ಪಲ್ಯ/ಚಟ್ನಿ/ತೊವೆ(ವ್ವೆ)/ತಂಬುಳಿ ಬೇಕು ಎಂದು ಹೊಳೆದಿದ್ದು ಹೇಗೆ? ಪೂರಿಯನ್ನು ಹೀಗೇ ಮಾಡಬೇಕು ಎಂದು ಯಾರು ತಿಳಿದರು ಮೊದಲು? ಹೋಳಿಗೆಗೆ ಇಂತಿಂಥ ವಸ್ತುಗಳನ್ನು ಹಾಕಿದರೆ ತುಂಬ ರುಚಿ ಅನ್ನಿಸಿದ್ದು ಹೇಗೆ? ಹೀಗೆ ಪ್ರಶ್ನೆ ಕೇಳುತ್ತಾ ಹೋದರೆ ವಿಚಿತ್ರ ಅನಿಸುತ್ತಲ್ಲವೇ? ಪ್ರಾಣಿಗಳನ್ನು ನೋಡಿ ಕಲಿತರು ಎನ್ನಲು ಯಾವ ಪ್ರಾಣಿಯೂ ಅಕ್ಕಿ, ಗೋಧಿ ಬೆಳೆದು ಅಡಿಗೆ ಮಾಡಿದ ಸುದ್ದಿ ನಾನಂತೂ ಕೇಳಿಲ್ಲ.

ಎಲ್ಲಾ ವೈಜ್ಞಾನಿಕ ಸಂಶೋಧನೆಗಳಂತೆ ಇವೂ ಕೂಡಾ ದಿಢೀರ್ ಅಂತ ಸೃಷ್ಟಿಯಾದದ್ದಲ್ಲ. ಪ್ರತಿಯೊಂದು ಜನಾಂಗವೂ, ತಲೆಮಾರುಗಳೂ, ತಾವು ಹಿಂದಿನವರಿಂದ ಕಲಿತ ವಿಷಯಕ್ಕೆ ತಮ್ಮದೇ ಅನುಭವ, ಜ್ಞಾನವನ್ನು ಸೇರಿಸುತ್ತಾ ಹೋಗಿದ್ದರಿಂದ ಅದು ಇಲ್ಲಿಯವರೆಗೆ ಹೀಗೆ ಬಂದಿದೆ. ಮತ್ತು ಹಾಗೆಯೇ ಮುಂದುವರೆಯುತ್ತದೆ. ಇನ್ನೂ ನೂರು ವರ್ಷ ಮುಂದೆ ಹೋದರೆ ಆಗಿನ ಆಹಾರ ಪದ್ಧತಿ ಈಗಿನದಕ್ಕಿಂತ ಸಂಪೂರ್ಣ ಭಿನ್ನವಾಗಿರಬಹುದು. ನಾವು ಊಹಿಸಲು ಸಾಧ್ಯವಿಲ್ಲದ ಆಹಾರವನ್ನು ಆ ತಲೆಮಾರಿನ ಜನ ಸೇವಿಸಬಹುದು.

ಆಹಾರ ಪದ್ಧತಿ ಆಯಾ ಕಾಲ, ಪ್ರದೇಶ, ಹವಾಗುಣ, ಜಾತಿ, ಧರ್ಮ, ವೃತ್ತಿ....ಹೀಗೆ ಅನೇಕ ಕಾರಣಗಳ ಮೇಲೆ ಅವಲಂಬಿತವಾಗಿರುತ್ತದೆ. ನಾವು ನಮ್ಮ ದೇಶದಲ್ಲಿ ತಿನ್ನುವ ಬೆಳಗಿನ ತಿಂಡಿಯೇ ಬೇರೆ, ಇತರ ದೇಶದಲ್ಲಿನ ಬೆಳಗಿನ ತಿಂಡಿಯೇ ಬೇರೆ. ದೇಶ ಹೋಗಲಿ, ನಮ್ಮಲ್ಲೇ ನೂರಾರು ವಿಧ. ಕರ್ನಾಟಕದಂತಹ ಏಕ ಭಾಷೆಯ ರಾಜ್ಯದಲ್ಲೇ ಎಷ್ಟೊಂದು ವೈವಿಧ್ಯ, ಇನ್ನು ಇಡೀ ದೇಶದ ಬಗ್ಗೆ ಮಾತಾಡುವುದೇ ಕಷ್ಟ. ಜೋಳದ ರೊಟ್ಟಿ, ಗೋಧಿ ರೊಟ್ಟಿ, ಚಪಾತಿ ಒಂದು ಕಡೆ, ಅಕ್ಕಿ ರೊಟ್ಟಿ, ದೋಸೆ, ನೀರ್ ದೋಸೆ (ತೆಳ್ಳೆವು), ಇಡ್ಲಿ, ಬನ್ಸ್, ಉಪ್ಪಿಟ್ಟು, ಅವಲಕ್ಕಿ ಇನ್ನೊಂದು ಕಡೆ, ಪಲಾವ್, ರೈಸ್ ಬಾತ್, ಟೊಮೆಟೊ ಬಾತ್, ಬಿಸಿಬೇಳೆ ಬಾತ್, ಆ ಬಾತ್, ಈ ಬಾತ್ ಎಂದು ಮತ್ತೊಂದು ಕಡೆ... ದಕ್ಷಿಣ ಕರ್ನಾಟಕದಲ್ಲಿ ಅನ್ನದ itemನ ಬೆಳಗಿನ ತಿಂಡಿ ಜಾಸ್ತಿ. ಆದರೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಬೆಳಗೆ ಅನ್ನದ ತಿಂಡಿಗಳು (ಬಾತ್ ಗಳು, ಪಲಾವ್...) ಇಲ್ಲ. ಈಗ ಶುರುವಾಗಿರಬಹುದು.

ದೋಸೆಗಳಲ್ಲಿ ರಾಗಿ ದೋಸೆ, ಗೋಧಿ ದೋಸೆ, ಬರಿ ಅಕ್ಕಿ ದೋಸೆ, ನೀರ್ ದೋಸೆ, ಕಲ್ಲಂಗಡಿ ಸಿಪ್ಪೆ ದೋಸೆ, ಈರುಳ್ಳಿ ದೋಸೆ, ಖಾರಾ ದೋಸೆ, ಸಿಹಿಸಿಹಿಯಾದ ಸೌತೆಕಾಯಿ ದೋಸೆ, ಎಲ್ಲರ ಮೆಚ್ಚಿನ ಮಸಾಲೆ ದೋಸೆ,....ಅಬ್ಬ ದೊಡ್ದ ಪಟ್ಟಿಯೇ. ದೋಸೆ, ಇಡ್ಲಿ, ಕಡುಬು ಹೆಚ್ಚಾಗಿ ಮಲೆನಾಡು, ಕರಾವಳಿಯ speciality. ಈಗ ಬಿಡಿ, ಎಲ್ಲಾ ಪ್ರದೇಶದವರೂ ಎಲ್ಲಾ ತರಹದ ತಿಂಡಿ ಮಾಡುತ್ತಾರೆ. ಇನ್ನು ಬೇರೆ ತಿಂಡಿಗಳ ಒಂದೊಂದು ಪ್ರಬೇಧಗಳ ಬಗ್ಗೆ ಬರೆಯುತ್ತಾ ಹೋದರೆ ಎಷ್ಟು ಪುಟಗಳೂ ಸಾಲುವುದಿಲ್ಲ.

ಗೋಧಿ, ಜೋಳ, ರಾಗಿ ಇನ್ನೂ ಅನೇಕ ಧಾನ್ಯಗಳ ರೊಟ್ಟಿಯದೇ ದೊಡ್ಡ ಸಂಸಾರ. ರೊಟ್ಟಿ (bread) ಕ್ರಿಸ್ತನ ಕಾಲದ ಪ್ರಮುಖ ಆಹಾರ ಎಂದು ಬೈಬಲ್ ನಲ್ಲಿ ಉಲ್ಲೇಖವಿದೆ. ಸಿಹಿ ತಿಂಡಿಗಳಾದ ಜಿಲೇಬಿ, ಕಡುಬು, ಪಾಯಸ, ಹಲ್ವಾ, ಹೋಳಿಗೆ, ಕಜ್ಜಾಯ, ಜಾಮೂನ್...ಇವೆಲ್ಲ ಎಂದಿನಿಂದ ಶುರುವಾಯಿತು?

ಒಂದಂತೂ ನಿಜ, ಇಲ್ಲಿ ತಿಳಿಸಿರುವ ಅನೇಕ ತಿಂಡಿಗಳು ಬೇರೆ ಬೇರೆ ಪ್ರದೇಶದ ಜನರ ಸಂಪರ್ಕದೊಂದಿಗೆ ಇಲ್ಲಿ ಬಂದವು. ಜಿಲೇಬಿ, ಜಾಮೂನ್ ಮುಂತಾದವು ಉತ್ತರ ಭಾರತದಿಂದ ಬಂದಿದ್ದು. ರಸಗುಲ್ಲ, ಚಂಪಾಕಲಿ, ಚಂ ಚಂ ನಂತಹವು ಬಂಗಾಲಿನಿಂದ. ಹೋಳಿಗೆ ಕರ್ನಾಟಕದ ವಿಶೇಷ. ಪಾಯಸದಲ್ಲೇ ನೂರಾರು ವಿಧ. ಪಾಯಸ ಮತ್ತು ಅದರಲ್ಲಿ ಹಾಕುವ ವಸ್ತುಗಳು - ಸಕ್ಕರೆ, ಕಲ್ಲು ಸಕ್ಕರೆ, ತುಪ್ಪ, ಹಾಲು ಮುಂತಾದವುಗಳ ಬಗ್ಗೆ ಪುರಂದರದಾಸರ ಗೀತೆಗಳಲ್ಲಿ ವರ್ಣನೆಯಿದೆ, ಅಂದರೆ ಆಗಿನ ಕಾಲಕ್ಕೂ ಪಾಯಸದಂತಹ ಸಿಹಿತಿಂಡಿಯ ಅರಿವಿತ್ತು ಎಂದು ಗೊತ್ತಾಗುತ್ತದೆ.


ಪಾಯಸದ ಮೊದಲ ಉಲ್ಲೇಖ ರಾಮಾಯಣದಲ್ಲಿ ಬರುತ್ತದೆ. ದಶರಥನು ಪುತ್ರಕಾಮೇಷ್ಟಿ ಯಾಗ ಮಾಡಿದಾಗ ಯಜ್ಞಪುರುಶನು ಕುಂಡದಿಂದ ಹೊರಬಂದು ಪಾಯಸದ ಕುಡಿಕೆ ಕೊಡುತ್ತಾನೆ. ಇದನ್ನು ದಶರಥನು ತನ್ನ ಮೂವರು ಪತ್ನಿಯರಿಗೆ ಹಂಚಿ, ನಾಲ್ಕು ಮಕ್ಕಳನ್ನು ಪಡೆದು, ಅವರು ದೊಡ್ಡವರಾಗಿ, ಕುರ್ಚಿ(ಸಿಂಹಾಸನ)ಗಾಗಿ ಒಬ್ಬ ಮಗನನ್ನು ಓಡಿಸಿ......ಹೋಗಲಿ ಬಿಡಿ ಅದೊಂದು ದೊಡ್ಡ ರಾಮಾಯಣ.

ಜಿಲೇಬಿಯ ಬಗ್ಗೆ ಮೊಟ್ಟಮೊದಲ ಉಲ್ಲೇಖ 13 ಶತಮಾನದ ಮಹಮ್ಮದ್ ಬಿನ್ ಹಸನ್ ಅಲ್-ಬಾಗ್ದಾದಿ ಎಂಬವನ ಕೃತಿಯಲ್ಲಿ ಬರುತ್ತದೆ. ಇಜಿಪ್ಟಿನ ಯಹೂದಿಗಳು ಇನ್ನೂ ಮುಂಚೆ ಜಿಲೇಬಿ ಸೇವಿಸಿರಬಹುದು ಎಂದೂ ಅನುಮಾನಗಳಿವೆ.

ಕಾಫಿ, ಚಹಾ
ಎಷ್ಟೋ ವರ್ಷಗಳಿಂದ ಇಡೀ ಜಗತ್ತನ್ನು ಆವರಿಸಿರುವ, ಅಂದರೆ common ಆಹಾರ ವಸ್ತುಗಳೆಂದರೆ ಕಾಫೀ ಮತ್ತು ಚಹಾ ಮಾತ್ರ ಇರಬೇಕು. ಜಗತ್ತಿನ ಯಾವುದೇ ದೇಶಕ್ಕೆ ಹೋದರೂ, ಅಲ್ಲಿಯ ಹಳ್ಳಿಮೂಲೆಗೂ ಹೋದರೂ ಇವೆರಡರ ಬಗ್ಗೆ ತಿಳಿಯದವರು ಸಿಗಲಿಕ್ಕಿಲ್ಲ. ಬೇರೆ ಯಾವುದೇ ಪಾನೀಯಗಳು ಇರಬಹುದು, ಆದರೆ ಚಹಾ ಕಾಫಿಗಳಿಗಿರುವ ಜನಪ್ರಿಯತೆ ಕಡಿಮೆಯಾಗುವುದಿಲ್ಲ, ಮತ್ತು ಇವು ಯಾವುದೇ ಒಂದು ಪ್ರದೇಶ, ದೇಶಕ್ಕೆ ಸೀಮಿತವಲ್ಲ. ನಮ್ಮ ಹಿಂದಿನವರು, ಅಂದರೆ ಚಾ ಕಾಫಿಯ ಹಿಂದಿನ ಜನಾಂಗ, ಬಿಸಿಬಿಸಿ ಪಾನೀಯ ಏನು ಕುಡಿಯುತ್ತಿದ್ದರು? ಕಷಾಯ ಎಂದು ಊಹಿಸಬಹುದು. ನಮ್ಮಲ್ಲಿ ಬೇರೆ ಬೇರೆ ಕಷಾಯಗಳು ಈಗಲೂ ಇವೆ. ಮಲೆನಾಡಿನ ಮನೆಗಳಿಗೆ ಹೋದರೆ, ಚಾ ಕಾಫಿ ಇಷ್ಟವಿಲ್ಲದವರಿಗೆ ಕಷಾಯವನ್ನು ಕೊಡುವುದು ಈಗಲೂ ಇದೆ.

ಅಷ್ಟಕ್ಕೂ ಈ ಚಹಾ ಕಾಫಿಗಳು ಕೂಡಾ ಕಷಾಯಗಳು ತಾನೆ? ಚಹಾ ಯಾವುದೋ ಒಂದು ಗಿಡದ ಎಲೆಗಳನ್ನು ಒಣಗಿಸಿ, ಪುಡಿ ಮಾಡಿದ ಕಷಾಯವಾದರೆ, ಕಾಫಿ, ಇನ್ಯಾವುದೋ ಗಿಡದ ಒಣಗಿದ ಬೀಜಗಳ ಕಷಾಯ, ಅಷ್ಟೆ. ಚಹಾ ಮತ್ತು ಕಾಫಿಯ ಇತಿಹಾಸ ಎಲ್ಲರಿಗೂ ಗೊತ್ತಿರುವುದೇ, ಅಂದರೆ ಇಂಥ ಕಾಲದಲ್ಲೇ ಇವು ಉಪಯೋಗಿಸಲು ಪ್ರಾರಂಭವಾಯಿತು ಎಂದು ಊಹಿಸಬಹುದು. ಚಹಾದ ಮೂಲ ಚೀನಾ. ಕುದಿಯುತ್ತಿರುವ ನೀರಿಗೆ ಚಹಾದ ಎಲೆಗಳು ಅಕಸ್ಮಾತಾಗಿ ಬಿದ್ದಾಗ, ಆ ನೀರಿನಲ್ಲಿ ಏನೋ ವಿಶೇಷ ರುಚಿಯಿರುವುದು ಗೊತ್ತಾಯಿತು. ಇದನ್ನು ಕುಡಿದರೆ ಹೊಸ ಚೈತನ್ಯ ಮೂಡುವುದಲ್ಲದೆ ನಿದ್ದೆಯನ್ನು ದೂರವಿಡಬಹುದು ಎಂದು ಬೌದ್ಧ ಸನ್ಯಾಸಿಗಳು ತಿಳಿದು ಧ್ಯಾನಕ್ಕೆ ಮುಂಚೆ ಚಹಾವನ್ನು ಕುಡಿಯಲಾರಂಬಿಸಿದರು.

ಕಾಫಿಯ ಮೂಲ ಮಧ್ಯಪೂರ್ವ ಪ್ರದೇಶ. ಕುರಿ ಕಾಯುವ ಹುಡುಗ ಕುರಿಗಳು ಯಾವುದೋ ಒಂದು ಗಿಡದ ಹಣ್ಣುಗಳನ್ನು ತಿಂದು ಉತ್ಸಾಹದಿಂದ ಹಾರಿಕುಣಿಯುವುದನ್ನು ಗಮನಿಸಿ ತಾನೂ ಕೂಡ ಅವನ್ನು ತಿಂದು ಅದೇ ಅನುಭವ ಪಡೆದ. ಮುಂದೆ ಆ ಕಾಯಿಗಳು ಏನೇನೋ ಬದಲಾವಣೆ ಹೊಂದುತ್ತ ಇಂದಿನ ಕಾಫಿಯವರೆಗೆ ಬಂದು ನಿಂತಿದೆ. ಅರಬ್ ದೇಶದಲ್ಲಿ ಕಾಫಿ ಎಷ್ಟು ಅಮೂಲ್ಯವಾಗಿತ್ತೆಂದರೆ ಆ ಬೀಜಗಳನ್ನು ಹೊರಗೆ ತೆಗೆದುಕೊಂಡುಹೋಗುವಂತಿರಲಿಲ್ಲ. ಆದರೂ ಬಾಬಾಬುಡನ್ ಎಂಬ ಸೂಫಿ ಸಂತ ಏಳು ಬೀಜಗಳನ್ನು ತನ್ನ ಬಟ್ಟೆಯಲ್ಲಿ ಕದ್ದು ತಂದು ಭಾರತಕ್ಕೆ ಬಂದು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿ (ಈಗಿನ ಬಾಬಾಬುಡನ್ ಗಿರಿ) ನೆಟ್ಟನೆಂಬ ಪ್ರತೀತಿ. ಹೀಗಾಗಿ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಕಾಫಿಯ ಆಗಮನವಾಯಿತು.

16 ನೆ ಶತಮಾನದಲ್ಲಿ ಮುಘಲ್ ದೊರೆಗಳು ಸರದಿ ಸಾಲಿನಲ್ಲಿ ಅಶ್ವಾರೋಹಿಗಳನ್ನು ನಿಲ್ಲಿಸಿ ಹಿಂದುಖುಷ್ ಪರ್ವತದಿಂದ ಮಂಜುಗಡ್ಡೆಯನ್ನು ತರಿಸುತ್ತಿದ್ದರಂತೆ, ತಮ್ಮ ಶರಬತ್ತನ್ನು ತಣ್ಣಗಿರಿಸಲು. 62 AD ಇಸವಿಯಲ್ಲಿ ರೋಮ್ ದೊರೆ ನೀರೊ ಅಪೆನಿಯನ್ ಪರ್ವತದಿಂದ ಹಿಮ ತರಿಸಿ ಜೇನಿನೊಡನೆ ಬೆರೆಸಿ ಸೇವಿಸುತ್ತಿದ್ದನಂತೆ.

ಕಾಲ ಬದಲಾದಂತೆ ಇತರ ಜನಾಂಗದೊಡನೆ ಸಂಪರ್ಕ ಬೆಳೆದಂತೆ ಆಹಾರ ಪದ್ಧತಿ ಬದಲಾಗುತ್ತ ಹೋಗುತ್ತದೆ. ಉತ್ತರಭಾರತದ ಅನೇಕ ಆಹಾರವಸ್ತುಗಳು ನಮ್ಮಲ್ಲಿ ಮಾಮೂಲಾಗಿವೆ ಈಗ. ಕೆಲವೇ ವರ್ಷಗಳ ಹಿಂದೆ ಹೆಸರೇ ಗೊತ್ತಿಲ್ಲದ ಪಾನಿ ಪುರಿ, ಭೇಲ್ ಪುರಿ, ಗೋಬಿ ಮಂಚೂರಿ, ಈಗ ಅವನ್ನು ತಿನ್ನದೆ ಕೆಲವರಿಗೆ ಅವರ ಭಾನುವಾರ ಮುಗಿಯುವುದೇ ಇಲ್ಲ. ಹಾಗೆಯೇ ನಮ್ಮ ಮಸಾಲೆ ದೋಸೆ ಉತ್ತರದಲ್ಲೂ ಒಂದು exotic, special ತಿಂಡಿ. ಪಾಕಿಸ್ತಾನದಲ್ಲಿ ಮಸಾಲೆ ದೋಸೆ ಈಗ ತುಂಬಾ ಜನಪ್ರಿಯ ಅಂತೆ. ಕೇವಲ ಸಸ್ಯಾಹಾರದ ಹೋಟೆಲ್ ಗಳಿಗೂ ಜನರು ಮುಗಿಬೀಳುತ್ತಿದ್ದಾರಂತೆ ಅಲ್ಲಿ. ವಿದೇಶದ ಎಷ್ಟೋ ತಿಂಡಿಗಳಾದ pizza, pasta, chinese foodಗಳು ನಮಗೆ ವಿಶೇಷ, exotic ಎನಿಸಬಹುದು. ಆದರೆ ಅವು ಆಯಾ ದೇಶದ ಸಾಂಪ್ರದಾಯಿಕ ಆಹಾರಗಳೇ ಎಂದು ಮರೆಯಬಾರದು. ಈಗ ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ವಿಚಿತ್ರ ಹೆಸರು ಹೊತ್ತು ದುಬಾರಿ ಬಿಲ್ ನೊಂದಿಗೆ ಬರಬಹುದು, ಅಷ್ಟೇ.

ಆಹಾರದ ಸಂಸ್ಕೃತಿ
ನಮ್ಮಲ್ಲಿ ಒಂದು ವಿಚಿತ್ರ ನಂಬಿಕೆ ಇದೆ. ನಮ್ಮ ಸಂಸ್ಕೃತಿಯೇ ಶ್ರೇಷ್ಟ, ನಮ್ಮ ಆಹಾರ ಪದ್ಧತಿಯೇ ವೈಜ್ಞಾನಿಕ, ಆರೋಗ್ಯದಾಯಕ ಎಂದು. ಇದನ್ನು ನಾನು ವಿರೋಧಿಸುವುದಿಲ್ಲ. ಆದರೆ ನಮ್ಮದಲ್ಲದ್ದು ಅಂದ ಮಾತ್ರಕ್ಕೆ ಎಲ್ಲ ಕೆಟ್ಟದ್ದು, ಅವೈಜ್ಞಾನಿಕ, ಅನಾರೋಗ್ಯಕರ ಎಂದು ತೀರ್ಮಾನಿಸಿಬಿಡುವುದು ತಪ್ಪು. ನೆಲದ ಮೇಲೆ ಕುಳಿತು ಉಣ್ಣಬೇಕು, ಕೈಯಲ್ಲಿ ತಿನ್ನಬೇಕು ಎನ್ನುತ್ತದೆ ನಮ್ಮ ಸಂಸ್ಕೃತಿ. ಆರೋಗ್ಯದ ದೃಷ್ಟಿಯಿಂದ ಇದು ಸರಿಯಿರಬಹುದು. ಆದರೆ ಹೀಗೆ ಮಾಡದೇ ಇದ್ದರೆ (ಟೇಬಲ್ ಊಟ, ಚಮಚ ಫೋರ್ಕ್ ಉಪಯೋಗಿಸುವುದು) ಅನಾರೋಗ್ಯಕರ ಎಂದು ಹೇಗೆ ಹೇಳುವುದು. ಈ ವಾದ ಮುಂದುವರೆಸುವುದಿದ್ದರೆ, ಕೈಯ್ಯಲ್ಲಿ ಒಮ್ಮೆಯೂ ಊಟ ಮಾಡದ, ಯಾವಾಗಲೂ ಟೇಬಲ್ ಊಟ ತಿಂಡಿ ಮಾಡುವ ವಿದೇಶಿಯರು ಮಧ್ಯ ವಯಸ್ಸಿಗೆ ಬರುವ ಮುನ್ನವೇ ಮೇಲೆ ಹೋಗಬೇಕಾಗಿತ್ತು ಅಲ್ಲವೇ?

ಅಮೇರಿಕಾದಲ್ಲಿ ಬೈಕ್ ಓಡಿಸುವುದು ಯುವಕರಲ್ಲ, ರಿಟೈರ್ ಆಗಿ ಕೂತು ಬೋರಾಗಿರುವ ಮುದುಕರು. ಎಪ್ಪತ್ತು ಎಂಬತ್ತು ವರ್ಷದ ಮುದುಕರು ಕೂಡಾ parasailing, river raftingನಂತಹ ಚಟುವಟಿಕೆ ಮಾಡುತ್ತಾರೆ. ಆದರೆ ನಮ್ಮಲ್ಲಿ? ವೈಜ್ಞಾನಿಕ, ಆರೋಗ್ಯಕರ ಜೀವನಶೈಲಿ ಎಂದು ಹೆಮ್ಮೆಯಿಂದ ಹೇಳಿಕೂಳ್ಳುವ ನಮ್ಮಲ್ಲಿ ನಲವತ್ತು ವಯಸ್ಸಿಗೇ ಸೊಂಟನೋವು, ಬೆನ್ನು ನೋವು ಎಂದು ಗೊಣಗಲು ಶುರುಮಾಡುತ್ತೇವೆ.

ವಿದೇಶೀ ಆಹಾರ ಎಲ್ಲ ಜಂಕ್ ಫುಡ್ ಎಂದು ಸಾರಾಸಗಟಾಗಿ ಹೇಳಿ, ಅದರಲ್ಲಿ ಎಣ್ಣೆ, ಕೊಬ್ಬು ಅಷ್ಟಿದೆ ಎನ್ನುವ ನಾವು ನಮ್ಮದೇ ಹಪ್ಪಳ, ಸಂಡಿಗೆ, ಚಕ್ಕುಲಿ, ಕೋಡುಬಳೆ, ತುಪ್ಪ ಜಿನುಗುವ ಮೈಸೂರು ಪಾಕ್ ಮುಂತಾದ ತಿಂಡಿಗಳ ಬಗ್ಗೆ ಹಾಗೆ ಹೇಳುವುದೇ ಇಲ್ಲ. ಎಷ್ಟೋ ವರ್ಷದಿಂದ ನಮ್ಮ ಅಜ್ಜ ಮುತ್ತಜ್ಜಂದಿರು ತಿನ್ನುತ್ತಿದ್ದರು ಎಂಬ ಒಂದೇ ಕಾರಣಕ್ಕೆ ಇವೆಲ್ಲ ವೈಜ್ಞಾನಿಕ, ಆರೋಗ್ಯಕರವಾಗಿ ಬಿಡುತ್ತದೆಯೇ? ನಮ್ಮ ಜೀವನಶೈಲಿ, ಆಹಾರ ಪದ್ಧತಿ, ಆಹಾರದ ಬಗ್ಗೆ ಅವಹೇಳನೆಗಾಗಿ ಬರೆದಿದ್ದಲ್ಲ. ನಮ್ಮ ಆಹಾರ, ಆಚಾರ, ವಿಚಾರ, ಸಂಸ್ಕೃತಿ ಬಗ್ಗೆ ಖಂಡಿತ ಹೆಮ್ಮೆ ಇರಲೇಬೇಕು, ಆದರೆ ನಮ್ಮದಲ್ಲದೆಲ್ಲವೂ ಕನಿಷ್ಟ ಎನ್ನುವ ಮನೋಭಾವ, ಮಡಿವಂತಿಕೆ ಬೇಡ, ಅಲ್ಲವೆ?