Wednesday 21 October, 2009

ಪ್ರಕೃತಿ ಸೌಂದರ್ಯ - ನಮ್ಮ ಸುತ್ತಮುತ್ತಲಿನಲ್ಲೇ ಇದೆ


ಮೇಲಿನ ಚಿತ್ರಗಳನ್ನು ನೋಡಿದರೆ ಎಲ್ಲಿಯದು ಎಂದು ಊಹಿಸಲು ಸಾಧ್ಯವೇ? ಯಾವುದೋ ದಟ್ಟ ಅರಣ್ಯ, ಅಲ್ಲಿಯ ಕೆರೆ ಇಲ್ಲ ನದಿ ಅನಿಸಬಹುದು. ಎಲ್ಲಿಯೂ ಹೋಗಬೇಕಾಗಿಲ್ಲ. ಈ ಚಿತ್ರಗಳು ಬೆಂಗಳೂರಿನದೇ. ಸರ್ಜಾಪುರ ರಸ್ತೆಯ ಒಳ ರಸ್ತೆಯಲ್ಲಿ ಹೋದರೆ ಎಚ್.ಎಸ್.ಆರ್.ಲೇಯೌಟ್ ಬಳಿ ಇರುವ ಹರಳೂರು ಗ್ರಾಮದ ಎರಡು ಬೇರೆ ಕೆರೆಗಳ ಚಿತ್ರಗಳು.

ಇದನ್ನು ಬರೆಯುವ ಕಾರಣ ಏನೆಂದರೆ, ನಾವು ನಿಸರ್ಗವನ್ನು ಹುಡುಕಿಕೊಂಡು ಎಲ್ಲೆಲ್ಲೋ ಹೋಗಬೇಕಾಗಿಲ್ಲ. ನಿಸರ್ಗ, ಪ್ರಕೃತಿ ಸೌಂದರ್ಯ ಎಂದರೆ ಎಲ್ಲೋ ದೂರದ ಕಾಡು ಬೆಟ್ಟ ಜಲಪಾತ ಮಾತ್ರ ಎಂಬ ಭ್ರಮೆ ನಮ್ಮ ಅನೇಕರಲ್ಲಿದೆ, ಅದರಲ್ಲೂ ನಗರವಾಸಿಗಳಲ್ಲಿ. ಹೆಚ್ಚಿನ ಜನರಲ್ಲಿ ಇದೇ ಭಾವನೆ, ಪ್ರಕೃತಿಯನ್ನು ನೋಡುವುದು ಎಂದಕೂಡಲೆ ಯಾವುದೋ resort, package tour, trekking club ನವರು ಕರೆದುಕೊಂಡು ಹೋಗಿ ತೋರಿಸುವ ಗುಡ್ಡ ಬೆಟ್ಟ, ಜಲಪಾತ, ನದಿ, ಕೆರೆ, ತೊರೆ ಎಂಬ ಭಾವನೆ.

ಹೆಚ್ಚಿನವರಿಗೆ ತಾವು ನೋಡಲಿರುವ ಜಾಗಗಳ ಬಗ್ಗೆ ಆಸಕ್ತಿ, ಕುತೂಹಲ ಕೂಡ ಇರುವುದಿಲ್ಲ. Tourನವರು ಹೇಗೂ ತೋರಿಸುತ್ತಾರೆ ಎಂಬ ಉಡಾಫೆ. ಅವರು ಏನನ್ನು ತೋರಿಸುತ್ತಾರೋ, 'ಹಾ ಚೆನ್ನಾಗಿದೆ, ಆ ಫಾಲ್ಸ್ ಚೆನ್ನಾಗಿದೆ, ಈ ದೇವಸ್ಥಾನ ಚೆನ್ನಾಗಿದೆ' ಎಂದು ಉದ್ಗರಿಸಿ, ತಮ್ಮ ಫೋಟೋ ತೆಗೆಸಿಕೊಂಡರೆ ಸಾಕು, ಅದೇ ಸಾರ್ಥಕ.

ನಾನು ಪ್ರವಾಸಿ ಸ್ಥಳಗಳಲ್ಲಿ ನೋಡಿದ್ದೇನೆ, ಅನೇಕ ಪ್ರವಾಸಿಗರಿಗೆ ತಮ್ಮ ಫೋಟೋ ತೆಗೆಸಿಕೊಳ್ಳುವುದರಲ್ಲೇ ಆಸಕ್ತಿ, ಹಿಂದಿರುವ ಪ್ರೇಕ್ಷ್ನಣೀಯ ಜಾಗದ ಫೋಟೋ ಬರದಿದ್ದರೂ ಪರವಾಗಿಲ್ಲ, ತಮ್ಮ ಫೋಟೋ ಬರಬೇಕು. ತಾವು ಇಂಥಾ ಜಾಗಕ್ಕೆ ಹೋಗಿದ್ದೆವು ಎಂಬ ನೆನಪಿಗೆ ತಮ್ಮ ಫೋಟೋ ತೆಗೆಸಿದರೆ ತಪ್ಪೇನಿಲ್ಲ, ಆದರೆ ಎಲ್ಲಾ ಜಾಗಗಳಲ್ಲೂ ಈ ಪ್ರವೃತ್ತಿ ಮುಂದುವರೆಯುತ್ತದೆ. ಅವರ ಯಾವ ಫೋಟೋ ನೋಡಿದರೂ ಕಾಣುವುದು ಅವರ ಮುಖಗಳೇ. ಹೋಗಿದ್ದ ಪ್ರವಾಸಿ ಸ್ಥಳದ ಚಿತ್ರ ಎಲ್ಲೋ ಹಿಂದೆ ಮಸುಕಾಗಿರುತ್ತದೆ.

ಹೋದ ಸ್ಥಳದ ಮಹತ್ವ, ಅಲ್ಲಿ ತಾವು ಇರಬೇಕಾದ ರೀತಿ, ಇವಾವುದರ ಬಗ್ಗೆಯೂ ಆಸಕ್ತಿ ನಮ್ಮಲ್ಲನೇಕರಿಗೆ ಇರುವುದಿಲ್ಲ. ಕಾಡಿನಲ್ಲಿ ಒಂದು ಜಲಪಾತದ ಬಳಿ ಹೋಗಿದ್ದಾಗ, ಒಂದು ಹುಡುಗಿ high heeled shoe ಧರಿಸಿ ಬಂದಿದ್ದು ನೋಡಿ ಆಶ್ಚರ್ಯವಾಗಿತ್ತು. ಇದೇನು ಕಾಲೇಜ್ ಇಲ್ಲ ನಗರದ ರಸ್ತೆಯೇ? ಕಾಡು, ಗುಡ್ಡ ಬೆಟ್ಟದಲ್ಲಿ ಓಡಾಡಬೇಕಾದರೆ ಎಂಥಾ ಬಟ್ಟೆ ಇರಬೇಕು ಎಂಬುದರ ಪ್ರಾಥಮಿಕ ಜ್ಞಾನ ಕೂಡ ಇಲ್ಲದೆ ಬಂದಿದ್ದು ನೋಡಿ ವಿಚಿತ್ರ ಎನಿಸಿತು. ಇದು ಕೇವಲ ಶಾಲಾ ಕಾಲೇಜ್ ವಿದ್ಯಾರ್ಥಿಗಳ ನಡವಳಿಕೆ ಮಾತ್ರ ಎಂದು ಭಾವಿಸಬೇಕಾಗಿಲ್ಲ. ಒಂದು ಬೆಟ್ಟ ಹತ್ತುತ್ತಿದ್ದಾಗ ದಾರಿಯುದ್ದಕ್ಕೂ ಕೆಳಗೆ ಹರಿಯುತ್ತಿದ್ದ ನದಿಯ ಜುಳುಜುಳು ಸಪ್ಪಳ ಸುಂದರವಾಗಿ ಕೇಳಿಸುತ್ತಿತ್ತು. ಎದುರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬ walkman ಹಿಡಿದುಕೊಂಡು ಚಿತ್ರಗೀತೆ ಕೇಳುತ್ತ ಬರುವುದು ನೋಡಿ ಆಶ್ಚರ್ಯವಾಗಿತ್ತು. ಅಲ್ಲ, ಹಾಡು ಸಂಗೀತ ಎಲ್ಲಿಯೂ ಕೇಳಬಹುದು. ಆದರೆ ಈ ಪ್ರಕೃತಿಯ ಅದ್ಭುತ ಸಂಗೀತ ಬೇರೆಲ್ಲಿಯಾದರೂ ಕೇಳಲು ಸಾಧ್ಯವೇ? ನಗರಕ್ಕೆ ಬಂದ ಮೇಲೆ ಈ ಜುಳು ಜುಳು ನಿನಾದ ಮತ್ತೆ ಕೇಳಲು ಆಗುತ್ತದೆಯೇ? ಎಂಥಾ ಮೂರ್ಖರು, ತಾವು ಬಂದ ಜಾಗದ ಸೌಂದರ್ಯವನ್ನು ಅನುಭವಿಸಲೂ ಇವರಿಗೆ ಆಗುತ್ತಿಲ್ಲ ಎಂದು ಬೇಸರವಾಗುತ್ತದೆ. ಇನ್ನು ದೊಡ್ಡದಾಗಿ music ಹಾಕಿಕೊಂಡು ಕಿರುಚುತ್ತ, ಕುಡಿಯುತ್ತ ಮೋಜು ಮಾಡುವುದೇ ಪ್ರವಾಸ ಎಂದು ಭಾವಿಸುವವರ ಬಗ್ಗೆ ಬರೆಯುವುದೇ ಬೇಡ.

ನೂರಾರು ರೂಪಾಯಿ ತೆತ್ತು package tourನಲ್ಲಿ ಹೋಗಿ ನೋಡಿದ ಜಾಗ ಮಾತ್ರ ಪ್ರಕೃತಿ ಎಂಬ ಭ್ರಮೆ ಬೇಡ. ಕಣ್ಣು ತೆರೆದು ನೋಡಿದರೆ, ನಮ್ಮ ಸುತ್ತಮುತ್ತ ಕೂಡ ನಿಸರ್ಗ ಸುಂದರವಾಗೇ ಕಾಣುತ್ತದೆ. ಮೊದಲೇ ತಿಳಿಸಿದಂತೆ ಮೇಲಿರುವ ಚಿತ್ರಗಳು ಬೆಂಗಳೂರು ನಗರದ್ದೇ. ನಾವು ಇಲ್ಲೆ ಹತ್ತಿರದಲ್ಲಿರುವ ಕೆರೆ, ದೊಡ್ಡ ಮರ, ಉದ್ಯಾನವನ, ಊರಿಂದ ತುಸುವೇ ದೂರದ ಚಿಕ್ಕ ಗುಡ್ಡ, ಮನೆಯ ಎದುರಿರುವ ಮರದ ಮೇಲಿನ ಹಕ್ಕಿ ಗೂಡು, ಯಾವುದೇ ಕುಂಡ, flower showದಲ್ಲಿ ಭಾಗವಹಿಸದ ರಸ್ತೆಬದಿ ಹೂವು - ಇಂಥವನ್ನೆಲ್ಲ ಗಮನಿಸುವುದೇ ಇಲ್ಲ.

ಬೇರೆ ಏನೂ ಬೇಡ, ಎಷ್ಟು ಜನ ತಲೆ ಎತ್ತಿ ಆಕಾಶ ನೋಡುತ್ತಾರೆ? ಪ್ರತಿ ಕ್ಷ್ಣಣ ಬದಲಾಗುವ ಮೋಡಗಳು, ದಿನಕಳೆದಂತೆ ಬಣ್ಣ ಬದಲಾಯಿಸುವ ಮೋಡಗಳು ಕೂಡ ನಿಸರ್ಗದ ಭಾಗವಲ್ಲವೇ? ಸಮಯವಿಲ್ಲದವರು ಹೋಗಲಿ, ಬೇಕಾದಷ್ಟು ಸಮಯವಿದ್ದರೂ ನೋಡಿ ಆನಂದಿಸುವವರು ಎಷ್ಟು ಜನ?

ಇವನ್ನೆಲ್ಲ ನೋಡಿ ಸಂತೋಷಪಡಬೇಕಾದರೆ ನಾವು ಬರೀ ಕವಿ, ಸಾಹಿತಿ, ಛಾಯಾಚಿತ್ರಗಾರ ಆಗಬೇಕಾಗಿಲ್ಲ, ನೋಡುವ ಕಣ್ಣು, ಆನಂದಿಸುವ ಮನಸ್ಸಿದ್ದರೆ ಸಾಕಲ್ಲವೇ?