Saturday, 25 April 2009

Saturday, 4 April 2009

ಮನೆ ಹೆಸರುಗಳ ಸುತ್ತ

ವಾಹನಗಳ ಮೇಲೆ ಬರೆದಿರುವ ಚಿತ್ರ ವಿಚಿತ್ರ ಹೆಸರುಗಳ ಬಗ್ಗೆ ಬರೆದಿದ್ದೆ. ಈ ಸಲ ಮನೆ ಹಾಗೂ ಹೋಟೆಲ್ ಹೆಸರುಗಳ ಬಗ್ಗೆ ಬರೆಯೋಣ ಅನ್ನಿಸಿತು.
ಮನೆ. ಇದರ ಕಲ್ಪನೆಯೇ ಸುಂದರ. East or West, home is the best. ಕನ್ನಡದಲ್ಲಿ ಹೇಳುವುದಾದರೆ, 'ಪೂರ್ವ ಅಥವ ಪಶ್ಚಿಮ, ನಮ್ಮ ಮನೆಯೆ ಉತ್ತಮ' ಎನ್ನಬಹುದು. ನಮ್ಮದೆ ಸ್ವಂತ ಮನೆ ಆದಮೇಲೆ ಅದಕ್ಕೊಂದು ಹೆಸರು ಬೇಡವೇ? ನಾನು ನೋಡಿದ, ಕೇಳಿದ ಕೆಲ ಮನೆ ಹೆಸರುಗಳ ಬಗ್ಗೆ ಈ ಲೇಖನ.

ಬಸವೇಶ್ವರನಗರದಲ್ಲಿ ಒಂದು ಮನೆ, "ಅನು ಮಹಾ". ಹಾಗೆಂದರೇನು ಎಂದು ಮನೆಯವರನ್ನೇ ಕೇಳಬೇಕು. ದೇವರ ಹೆಸರ ಮನೆಗಳಿಗೆ ಬರವಿಲ್ಲ. ವೆಂಕಟೇಶ ನಿಲಯ, ಶ್ರೀ ನಿವಾಸ, ರಾಮ ನಿಲಯ, ಮಾರುತಿ ನಿವಾಸ - ಹೀಗೆ ಪಟ್ಟಿ ಬೆಳೆಯುತ್ತದೆ.

ಕೆಲ ಪ್ರಸಿದ್ಧರ ಮನೆಗಳಂದರೆ - ನಟ, ನಿರ್ದೇಶಕ ಸಿ.ಆರ್.ಸಿಂಹರ ಮನೆ ಹೆಸರು 'ಗುಹೆ'. ಸಿಂಹ ಇರಬೇಕಾದ್ದು ಗುಹೆಯಲ್ಲಿ ತಾನೆ? ಅವರ ಸಹೋದರ ಶ್ರೀನಾಥರ ಮೊದಲ ಮನೆ 'ಹೃದಯ'. ಪ್ರಣಯರಾಜನಿಗೆ ತಕ್ಕ ಹೆಸರಾಗಿತ್ತು ಅದು. ಗಿರೀಶ್ ಕಾಸರವಳ್ಳಿ ಇರುವುದು 'ಮನೆ' ಯಲ್ಲಿಯೇ. ಅವರದೇ ಸಿನೆಮಾ 'ಮನೆ' ಯಿಂದ ಪ್ರೇರಿತ ಇರಬಹುದು. ಕುವೆಂಪು ಅವರ ಮೈಸೂರು ಮನೆ 'ಉದಯರವಿ' ಆದರೆ, ಅವರಷ್ಟೇ ಪ್ರತಿಭಾವಂತರಾದ ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಮನೆ ಹೆಸರು 'ನಿರುತ್ತರ'.

villa ಎಂದರೆ ಹಳ್ಳಿ ಮನೆ, ಗದ್ದೆ ತೋಟದ ಮಧ್ಯೆ ಇರುವ ಮನೆ ಎಂದು ಅರ್ಥ. ಆದರೆ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲೂ ಅನೇಕ ವಿಲ್ಲಾಗಳು ಸಿಗುತ್ತವೆ. ಅರಮನೆಯಂತಹ ಬಂಗಲೆಗೆ 'ಕುಟೀರ' ಎಂದು ಹೆಸರಿಡುತ್ತಾರೆ ಅಲ್ಲವೇ, ಹಾಗೆ. ಇದರ ಕನ್ನಡ ಅರ್ಥದ ಜೊತೆ ಓದಿದರೆ ತಮಾಶೆ ಎನಿಸುತ್ತದೆ. ಕಮಲಾನಗರದ ಒಂದು ಮನೆ ಹೆಸರು 'ಸುಖ್ ವಿಲ್ಲಾ'. 'ಆನಂದ್ ವಿಲ್ಲಾ' ಕೂಡ ಎಲ್ಲೋ ನೋಡಿದ್ದೇನೆ. ಪಾಪ, ಮನೆಯ ಪರಿಸ್ಥಿತಿಯನ್ನು ಹೀಗೆ ಜಗಜ್ಜಾಹೀರು ಮಾಡಬೇಕೆನಿಸಿತ್ತೋ ಏನೋ? 'ಶಾಂತಿ ವಿಲ್ಲಾ' ಹೆಸರಿನ ನಾಟಕ ಕೂಡ ಬಂದಿತ್ತು.

ಕೆಲ ಸುಂದರ ಗೃಹನಾಮಗಳು:
ದೇಗುಲ
ದೇವಾಲಯ
ಮಂದಿರ
ಗುಡಿ
ಪ್ರಕೃತಿ
ನಿಸರ್ಗ
ಮನಶ್ಶಾಂತಿ
ಕುಟೀರ
ಇನಿ ದನಿ
ಕಲರವ
ಚಿಲಿ ಪಿಲಿ
ಸಂತಸ
ಚಂದಿರ
ಸಮೃದ್ಧಿ
ನಗು
....ಇದಕ್ಕೆ ಕೊನೆಯಿಲ್ಲ ಬಿಡಿ

ಎಚ್.ಎಸ್.ಆರ್ ಲೇಔಟ್ ಮನೆ ಹೆಸರು 'ನಮ್ಮ ಮನೆ' .
ಕೆಲ ಹೋಟೆಲ್ ಗಳು:ಮಲ್ಲೇಶ್ವರದ ಪ್ರಸಿದ್ಧ 'ಹಳ್ಳಿ ಮನೆ'. ತ್ಯಾಗರಾಜನಗರದ 'ಕೋಳಿ ಮನೆ'. 'ಅಜ್ಜಿ ಮನೆ' ಕೂಡ ಎಲ್ಲೋ ನೋಡಿದ್ದೇನೆ. ಬೆಂಗಳೂರು ಮೈಸೂರು ಹೆದ್ದಾರಿ ಮೇಲೆ 'ಹಂಚಿನ ಮನೆ' ಹೋಟೆಲ್ ಇದೆ.