ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು...
ಕನ್ನಡದ ಎವರ್‍ಗ್ರೀನ್ ಹಾಡುಗಳಲ್ಲಿ ಒಂದಾದ ಇದು ಸುರೇಶ್ ಹೆಬ್ಳೀಕರ್ ನಟಿಸಿ ನಿರ್ದೇಶಿಸಿದ ಸೂಪರ್ ಹಿಟ್ ಸಸ್ಪೆನ್ಸ್ ಚಿತ್ರ 'ಆಲೆಮನೆ'ಯದ್ದು.
ಅದು ಸರಿ, ಆಲೆಮನೆ ಎಂದರೆ ಏನು? ಕಬ್ಬಿನಾಲೆ ಅಥವಾ ಆಲೆಮನೆ ಎಂದರೆ ಕಬ್ಬಿನಿಂದ ಬೆಲ್ಲ ತಯಾರಿಸುವ ಜಾಗ. ಮಲೆನಾಡು ಪ್ರದೇಶಗಳಾದ ಶಿರಸಿ, ಸಾಗರ, ಶಿವಮೊಗ್ಗ ಸುತ್ತಮುತ್ತಲ ಊರುಗಳು, ಮೈಸೂರು, ಮಂಡ್ಯ ಕಡೆ ಇವು ಹೆಚ್ಚಾಗಿ ಕಂಡುಬರುತ್ತವೆ. ಅಂಥ ಒಂದು ಆಲೆಮನೆಯ ಕೆಲ ದೃಶ್ಯಗಳು.
ಇದು ಸೊರಬ ತಾಲೂಕಿನ ಕ್ಯಾಸನೂರಿನ ಬಳಿಯ ಕಬ್ಬಿನಾಲೆ.
ಬೆಲ್ಲದ ಕಬ್ಬಿನ ರಾಶಿ
ಸಂಕ್ರಾಂತಿ ನಂತರ ಕಬ್ಬು ಬೆಳೆಗಾರರು ಸೇರಿ ಕಬ್ಬರೆಯುವ ಯಂತ್ರವನ್ನು ತರಿಸುತ್ತಾರೆ. ಸರತಿಯಂತೆ ತಮ್ಮ ಬೆಳೆಯನ್ನು ತಂದು ಅರೆಯಿಸಿ ಬೆಲ್ಲ ಮಾಡಿಕೊಂಡು ಹೋಗುತ್ತಾರೆ. ಇದು ಸುಮಾರು ಜನವರಿಯಿಂದ ಮಾರ್ಚ್ ವರೆಗೆ ಇದ್ದು, ಆಮೇಲೆ ಬೇರೆ ಪ್ರದೇಶಕ್ಕೆ ಹೊರಡುತ್ತಾರೆ ಕಬ್ಬರೆಯುವವರು.
ಮೊದಲು ಎತ್ತಿನಿಂದ ಕಬ್ಬಿನ ಗಾಣ ತಿರುಗಿಸುತ್ತಿದ್ದರು, ಈಗ ಡೀಸಲ್ ಯಂತ್ರ ಬಂದಿದೆ.
ಅರೆದ ಕಬ್ಬಿನಿಂದ ಹೊರಬರುತ್ತಿರುವ ರಸ (ಕಬ್ಬಿನ ಹಾಲು). ಗಾಣಯಂತ್ರದಿಂದ ಹಾಲು ಹೊರಬಂದು ಪಾತ್ರೆಗೆ ಬೀಳುವಂತೆ ಕೊಳವೆ ಜೋಡಿಸಿರುತ್ತಾರೆ
ಕಬ್ಬಿನರಸವನ್ನು ಸುಮಾರು ಮೂರ್ನಾಲ್ಕು ಗಂಟೆ ಕೊಪ್ಪರಿಗೆಗಳಲ್ಲಿ ಕುದಿಸಲಾಗುತ್ತದೆ
ಕುದಿಸಿದ ಹಾಲಿನಿಂದ ತಯಾರಾದ ಬೆಲ್ಲ. ಮಲೆನಾಡು ಕಡೆ ಹೆಚ್ಚಾಗಿ ಯಾವಾಗಲೂ ದ್ರವರೂಪದಲ್ಲೆ ಇರುವ ಜೋನಿ ಬೆಲ್ಲ ತಯಾರಿಸಲಾಗುತ್ತದೆ. ಮೈಸೂರು, ಮಂಡ್ಯ ಕಡೆ ಗಟ್ಟಿ ಉಂಡೆ ಬೆಲ್ಲ ಅಥವಾ ಬಕೆಟ್ ಬೆಲ್ಲ ತಯಾರಿಸುತ್ತಾರೆ.
ಆಲೆಮನೆಯಲ್ಲಿ ಸಿಗುವ ನೊರೆ ನೊರೆ ಹಾಲಿನ ರುಚಿಯನ್ನು ಸವಿದವರೇ ಗೊತ್ತು ಎಷ್ಟು ರುಚಿ ಎಂದು. ಅಲ್ಲಿನ ಕಬ್ಬನ್ನು ತಿನ್ನುವ ಮಜವೇ ಬೇರೆ.