Friday, 23 April 2010

ನಾಗಮಂಡಲ

ನಾಗಮಂಡಲ ತುಳುನಾಡಿನ ಒಂದು ವಿಶಿಷ್ಟ ಆಚರಣೆ. ನಾಗ ಅಥವಾ ಸರ್ಪಗಳ ಪೂಜೆ ಮಾಡುವ ಈ ವಿಧಾನ ರಾತ್ರಿ ಇಡೀ ನಡೆಯುತ್ತದೆ. ಸರ್ಪದೋಶ ಇರುವವರು, ಹಾವನ್ನು ಕೊಂದ ಪಾಪ ಪರಿಹಾರಕ್ಕೆ ಈ ಸರ್ಪಯಾಗ ಮಾಡಲಾಗುತ್ತದೆ. ಹೆಚ್ಚಾಗಿ ಡಿಸೆಂಬರ್ ಇಂದ ಏಪ್ರಿಲ್ ವರೆಗೆ ಈ ಆಚರಣೆ ನಡೆಯುತ್ತದೆ.


ಇದರಲ್ಲಿ ಮುಖ್ಯವಾಗಿ ಎರಡು ರೀತಿಯ ಪಾತ್ರಧಾರಿಗಳು ಪಾತ್ರವಹಿಸುತ್ತಾರೆ, ಇವರಿಗೆ ವೈದ್ಯರೆನ್ನುತ್ತಾರೆ. ಸರ್ಪರಾಜನನ್ನು ಆವಾಹಿಸಿಕೊಳ್ಳುವವರಿಗೆ ಪಾತ್ರಿ ಎಂದು ಕರೆಯುತ್ತಾರೆ. ಪಾತ್ರಿಯು ಅಡಿಕೆಹೂವನ್ನು (ಇದಕ್ಕೆ ಸಿಂಗಾರದ ಹೂವು ಎಂದು ಕರೆಯುತ್ತಾರೆ) ಆಸ್ವಾದಿಕೊಂಡು ಸರ್ಪರಾಜನನ್ನು ಆವಾಹಿಸಿಕೊಳ್ಳುತ್ತಾನೆ. ಮತ್ತೊಬ್ಬನು ನಾಗಕನ್ನಿಕೆಯಾಗುತ್ತಾನೆ.

ಸರ್ಪರಾಜನಾದ ಪಾತ್ರಿ ಮತ್ತು ನಾಗಕನ್ನಿಕೆ ವಿಶೇಷವಾಗಿ ರಚಿಸಲ್ಪಟ ಮಂಟಪದಲ್ಲಿ ನಾಗಮಂಡಲ (ಐದು ಬಣ್ಣಗಳಲ್ಲಿ (ಪಂಚವರ್ಣಹುಡಿ) ಬಿಡಿಸಿದ ನಾಗಗಳ ರಂಗೋಲಿ) ದ ಸುತ್ತ ನರ್ತಿಸುತ್ತಾರೆ. ಚಂಡೆ, ಮದ್ದಳೆ, ಡಕ್ಕೆ, ನಾಗಸ್ವರ ಮುಂತಾದ ವಾದ್ಯಗಳ ಹಿಮ್ಮೇಳದಲ್ಲಿ ಸಂಗೀತ ಕೂಡ ಇರುತ್ತದೆ. ಈ ನಾಗಮಂಡಲದ ರಚನೆ ಕೂಡ ತುಂಬಾ ವಿಶಿಷ್ಟ ಹಾಗೂ ಕ್ಲಿಷ್ಟಕರ. ನೃತ್ಯದ ನಂತರ ಸರ್ಪರಾಜ ಮತ್ತು ಕನ್ನಿಕೆಯ ಮಿಲನವಾಗುತ್ತದೆ. ಒಂದು ಜೋಡಿ ಗಂಡು ಹೆಣ್ಣಿನ ಮಿಲನದ ನಂತರ ಇನ್ನೊಂದು ಜೋಡಿ ನಾಗಮಂಡಲದ ಸುತ್ತ ನರ್ತಿಸಲು ತೊಡಗುತ್ತದೆ. ಹೀಗೆ ಈ ಆಚರಣ ಇಡೀ ರಾತ್ರಿ ನಡೆಯುತ್ತದೆ.

ಕುಕ್ಕೆ ಸುಬ್ರಹ್ಮಣ್ಯ ನಾಗಮಂಡಲಕ್ಕೆ ತುಂಬಾ ಪ್ರಸಿದ್ಧಿ.

ಇತ್ತೀಚೆಗೆ ಇದು ನಡೆದಿದ್ದು ಬೆಂಗಳೂರು ಜಿಲ್ಲೆ ಆನೆಕಲ್ ತಾಲೂಕಿನ ಕೂಡ್ಲು ಗ್ರಾಮದಲ್ಲಿ. ಇಲ್ಲಿಯ ಮಾರುತಿ ದೇವಾಲಯದಲ್ಲಿ ಹನ್ನೆರಡು ದಿನಗಳವರೆಗೆ ಸಹಸ್ರ ಚಂಡಿಕಾಹೋಮ, ಅತಿರುದ್ರಮಹಾಯಾಗ ಹಾಗೂ ನಾಗಮಂಡಲ ವಿಜೃಂಭಣೆಯಿಂದ ನಡೆಯಿತು.

ನಾಗಮಂಡಲ ಆಚರಣೆಯ ಕೆಲ ದೃಶ್ಯಗಳು.

ಮಂಟಪ

ನಾಗರಾಜನ ಮೂರ್ತಿ

ಸಿಂಗಾರದ ಹೂವುಗಳನ್ನು ಹೊತ್ತ ಪಾತ್ರಿ

ಪಾತ್ರಿ ಹಾಗೂ ನಾಗನ್ನಿಕೆ

ನಾಗರಾಜ, ನಾಗಕನ್ನಿಕೆಯರ ನೃತ್ಯ

ನಾಗ ನಾಗಿಣಿಯರ ಮಿಲನ

ಎಡಗಡೆ ಇರುವುದು ಡಕ್ಕೆ. ಬಲಗಡೆ ಚಂಡೆ ವಾದ್ಯಗಾರರು

ಸರ್ಪರಾಜನಾದ ಪಾತ್ರಿಗೆ ಸಿಂಗಾರಹೂವಿನ ಅರ್ಚನೆ ಮತ್ತು ಅಭಿಷೇಕ

ಕಂಬಕ್ಕೆ ಅಡಿಕೆ ಮತ್ತು ಅಡಿಕೆ ಹೂವಿನ ಅಲಂಕಾರ. ಪಕ್ಕದಲ್ಲಿರುವುದು ಅಡಿಕೆ ಹೂವು (ಸಿಂಗಾರದ ಹೂವು)

ಉಡುಪಿ ಹಾಗೂ ದಕ್ಷಿಣಕನ್ನಡದಲ್ಲಿ ಹೆಚ್ಚಾಗಿ ನಡೆಯುವ ಈ ವಿಶಿಷ್ಟ ಸಂಪ್ರದಾಯ ನೋಡಲು ತುಂಬಾ ರೋಮಾಂಚನಕಾರಿ. ಇದು ಅಷ್ಟೇ ಅತಿ ದುಬಾರಿಯಾದ ಪೂಜಾಕ್ರಮ ಕೂಡಾ. ಒಂದು ನಾಗಮಂಡಲ ನಡೆಸುವುದಕ್ಕೆ ಸುಮಾರು ಇಪ್ಪತ್ತು ಲಕ್ಷವಾದರೂ ಆಗಬಹುದು.