ನನಗೆ ಅಸೂಯೆ ತಾಳಲಾಗುತ್ತಿಲ್ಲ. ಅಲ್ಲ, ನೀವೆ ಹೇಳಿ, ಇಷ್ಟು ವರ್ಷ ನನ್ನ ಜೊತೆ ನಗುನಗುತ್ತ ಮುದ್ದು ಮಾಡುತ್ತ ಲಲ್ಲೆಗರೆಯುತ್ತಿದ್ದ ನನ್ನ ಹೆಂಡತಿ ಈಗ ನನಗೆ ಅಪರಿಚಿತಳಂತೆ ತೋರುತ್ತಿದ್ದಾಳೆ. ಎಲ್ಲ ಅವನು ಬಂದ ಮೇಲೆ. ಹೌದು, ಅವನೇ. ಅವನೇ ನಮ್ಮಿಬ್ಬರ ಮಧ್ಯೆ ಬಂದು ನನ್ನ ನೆಮ್ಮದಿಯನ್ನು ಹಾಳುಮಾಡುತ್ತಿರುವವನು. ನಿಮ್ಮ ಮತ್ತು ನಿಮ್ಮ ಪ್ರೇಮಿ ಅಥವಾ ಹೆಂಡತಿಯ ಮಧ್ಯೆ ಮತ್ತೊಬ್ಬರು ಬಂದರೆ ಹೇಗನಿಸುತ್ತದೆ ನಿಮಗೆ?
ಕೈಹಿಡಿದ ಗಂಡನ ಹೊಟ್ಟೆ ಉರಿಸಲೆಂದೇ ಹೀಗೆ ಮಾಡುತ್ತಿದ್ದಾಳೆಯೆ? ನೋಡಿ, ನೀವೇ ನೋಡಿ, ಅವನನ್ನು ಮಾತಾಡಿಸುವುದೇನು, ಮುದ್ದು ಮಾಡುವುದೇನು, ಛೇ, ಛೇ!!! ನನ್ನ ಇರುವನ್ನೇ ಮರೆತಿದ್ದಾಳಲ್ಲ!
ಹೋಗಲಿ, ಅವನಿಗಾದರೂ ಸ್ವಲ್ಪ ಮಾನ ಮರ್ಯಾದೆ ಬೇಡವೇ? ಗಂಡ ಎನಿಸಿಕೊಂಡಿರುವ ಪ್ರಾಣಿ ಎದುರಿನಲ್ಲಿಯೇ ಅವಳ ಜೊತೆ ನಗುವುದೇನು, ಕೈ ಆಡಿಸುವುದೇನು... ನನ್ನ ಹೆಂಡತಿ ಒಬ್ಬ ಹೆಣ್ಣು, ಅದೂ ಮದುವೆ ಆದವಳು ಎಂದು ಗೊತ್ತಿಲ್ಲವೇ ಅವನಿಗೆ? ಅವಳ ಎದುರೇ ಬೆತ್ತಲೆ ಆಗುತ್ತಾನಲ್ಲ, ಇವನಿಗೆ ನಾಚಿಕೆ ಮಾನ ಮರ್ಯಾದೆ ಇದೆಯೇ, ನೀವೇ ಹೇಳಿ??
ನನಗೆ ಮೈ ಉರಿಯುವುದು ಬರೀ ಇಷ್ಟಕ್ಕೆ ಅಲ್ಲ. ಅವಳು ಅವನನ್ನು ಏನು ಬೇಕಾದರೂ ಮಾಡಿಕೊಳ್ಳಲಿ, ಆದರೆ ನನಗೂ ಅವನ ಸೇವೆ ಮಾಡಲು ಹೇಳುತ್ತಾಳಲ್ಲ ಅದಕ್ಕೇನನ್ನಲಿ ನಾನು? ಎಷ್ಟು ಧೈರ್ಯ, ದುರಹಂಕಾರ ಅವಳಿಗೆ. ನನ್ನ ಪ್ರೇಮವನ್ನು ಕಸಿದುಕೊಂಡಿದ್ದಲ್ಲದೆ, ನನ್ನ ಕೈಯ್ಯಲ್ಲಿ ಸೇವೆ ಮಾಡಿಸಿಕೊಳ್ಳುವ ಚಪಲ ಅವನಿಗೆ. ನನ್ನನ್ನು ಕೆಣಕಲೆಂದೇ ನನ್ನನ್ನು ನೋಡಿ ನಗುತ್ತಾನೆ, ಹಲ್ಲು ಕಿಸಿಯುತ್ತಾನೆ. "ನೋಡು, ನಿನ್ನ ಎದುರಿನಲ್ಲಿಯೇ ನಿನ್ನ ಹೆಂಡತಿಯ ಕೈಯ್ಯಲ್ಲಿ ಸ್ನಾನ ಮಾಡಿಸಿಕೊಳ್ಳುತ್ತೇನೆ. ಅಷ್ಟೇ ಅಲ್ಲ, ನೀನು ಕೂಡಾ ನನ್ನ ಸೇವೆ ಮಾಡುವ ಹಾಗೆ ಮಾಡುತ್ತೇನೆ" ಎಂದು ಸವಾಲು ಹಾಕುತ್ತಾನೆ. ಅಯ್ಯೋ ನಾನೆಲ್ಲಿ ಓಡಿ ಹೋಗಲಿ? ಈ ಅವಮಾನವನ್ನು ಸಹಿಸಲಾರೆ.
ಬೇಕಾದರೆ ನೀವೆ ಕೇಳಿ ನನ್ನ ಹೆಂಡತಿಯ ಮಾತನ್ನು. "ರೀ, ಅದೇನು ಆರಾಮಾಗಿ ಕೂತು ಬಿಟ್ರಿ. ಅವನನ್ನು ನಾನೊಬ್ನೆ ನೋಡಿಕೊಳ್ಳಬೇಕೆ? ನನಗೂ ಸಾಕಾಗುತ್ತೆ, ಸುಸ್ತಾಗುತ್ತೆ. ನೀವ್ ಮಾತ್ರ ಸಂಬಂಧವೇ ಇಲ್ದೇ ಇರೋ ಥರ ನೋಡ್ತಾ ಇದ್ರೆ ಹೇಗೆ? ಅವನು ನನಗೊಬ್ನೇ ಮಗ ಅಲ್ಲ, ನಿಮಗೂ ಕೂಡ ಅನ್ನೋದು ಮರೀಬೇಡಿ. ಬೇಗ, ಮಗು ಅಳ್ತಾ ಇದೆ, ಉಚ್ಚೆ ಹೊಯ್ದಿರಬೇಕು, ಅವನ ಬಟ್ಟೆ ಬದ್ಲಾಯಿಸಿ"
ನೋಡಿದಿರಾ???
Thursday, 7 October 2010
Subscribe to:
Posts (Atom)