"ಓ, ನೀವು ಕಾಲೇಜಿನಲ್ಲಿ ಕೆಲ್ಸ ಮಾಡೋದಾ? ಆರಾಮ್ ಕೆಲ್ಸ ಬಿಡಿ"
"ಮೇಷ್ಟ್ರಾ?? ನಿಮಗೇನು ಬಿಡಿ, ಬೇಕಾದಷ್ಟು ರಜೆಗಳು, ಎಲ್ಲಾ ಸರಕಾರಿ ರಜೆಗಳೂ ಸಿಗುತ್ತವೆ. ಪರೀಕ್ಷೆ ಮುಗಿದ ಮೇಲೆ ವೆಕೇಶನ್ ಬೇರೆ"
" ಶಾಲೆ, ಕಾಲೇಜ್ ಕೆಲ್ಸ ಅದೇನು ಮಹಾ? ಒಂದೆರಡು ಗಂಟೆ ಹುಡುಗರ ಮುಂದೆ ಒದರಿದರೆ ಮುಗೀತು, ಆಮೇಲೆ ಸ್ಟಾಫ್ ರೂಮಿಗೆ ಬಂದು ಹರಟೆ ಹೊಡೆಯುತ್ತ ಕೂರಬಹುದು"
"ಪಾಠ ಹೇಳೋ ಕೆಲಸಾನ? ಹೇಳಿದ್ದೇ ಹೇಳೋ ಕಿಸಬಾಯಿದಾಸನ ಥರ ಪ್ರತೀ ವರ್ಷ ಅದನ್ನೆ ಹೇಳಿದರಾಯಿತು. ಒಂದು ನೋಟ್ಸ್ ಇಟ್ಟುಕೊಂಡರೆ ಮುಗೀತು, ಅದನ್ನೆ ಓದುತ್ತ ಹೋದರಾಯಿತು. ನಿಮ್ ಕಲ್ಸ ಎಷ್ಟು ಸುಲಭ"
ಇದು ಶಿಕ್ಷಕ ವೃತ್ತಿಯಲ್ಲಿರುವವರು ಸಾಮಾನ್ಯವಾಗಿ ಕೇಳುವ ಮಾತುಗಳು. ನಮ್ಮಲ್ಲಿ ಅನೇಕರಿಗೆ ಈಗಲೂ ಶಿಕ್ಷಕ ವೃತ್ತಿಯ ಬಗ್ಗೆ ಹಗುರ ಭಾವನೆಯಿದೆ. ಅದು ತುಂಬ ಸುಲಭದ ಕೆಲಸ, ಟೆನ್ಶನ್ ಇಲ್ಲದ ಆರಾಮದಾಯಕ ವೃತ್ತಿ, ಬೇಕಾದಷ್ಟು ರಜೆ, ಸೌಲಭ್ಯ ಪಡೆಯುತ್ತ ಕಾಲಹರಣ ಮಾಡುತ್ತ ಇರಬಹುದು, ಇಂಥ ಅನೇಕ ಕಲ್ಪನೆಗಳಿವೆ.
ನಮ್ಮ ದೇಶದಲ್ಲಿ ಮೊದಲಿಂದಲೂ ಬೇರೆ ಬೇರೆ ವೃತ್ತಿಗಳ ಬಗ್ಗೆ ಪೂರ್ವಾಗ್ರಹಗಳಿವೆ. ಇಂಥ ಕೆಲಸ ಹೆಚ್ಚು ಆದಾಯ ತರುವಂಥದ್ದು, ಈ ಕೆಲಸ ಮಾಡಿದರೆ ಸಮಾಜದಲ್ಲಿ ಹೆಚ್ಚು ಪ್ರತಿಷ್ಠೆ, ಆ ಕೆಲಸ ಮಾಡುವವರು ಮಾತ್ರ ಜಗತ್ತನ್ನು ತಲೆಯ ಮೇಲೆ ಹೊತ್ತಿರುವವರು, ಆ ಕೆಲಸಕ್ಕೆ ಬುದ್ಧಿಯೇ ಬೇಕಾಗಿಲ್ಲ, ಈ ಕೆಲಸ ಬಹಳ ಸುಲಭ, ಆ ವೃತ್ತಿಗೆ ಯಾವ ಶ್ರಮವೂ ಬೇಕಿಲ್ಲ, ಹೀಗೆ. ಉದಾಹರಣೆಗೆ ಇಂಜಿನಿಯರ್ ಕೆಲಸ. ಕೆಲ ವರ್ಷಗಳ ಹಿಂದೆ (ಈಗಲೂ) ಇಂಜಿನಿಯರಿಂಗ್ ಮಾಡಿದರೇನೆ ಬದುಕು ಸಾರ್ಥಕ ಎಂಬ ಮನೋಭಾವನೆಯಿತ್ತು (ಇದೆ). ಆ ವೃತ್ತಿ ತರುವ ಪ್ರತಿಷ್ಠೆ, ಹಣ ಮಾತ್ರ ಮುಖ್ಯ. ಸಾಫ್ಟ್ ವೇರ್ ಉದ್ಯೋಗ ಸೃಷ್ಟಿಯಾದ ಮೇಲಂತೂ ಒಂದು ದೊಡ್ಡ ಪ್ರವಾಹವೇ ಶುರುವಾಯಿತು. ಎಸ್.ಎಸ್.ಎಲ್.ಸಿ ಮಾಡಿರಲಿ, ಡಾಕ್ಟರ್ ಆಗಿರಲಿ, ಎಲ್ಲರೂ ಸಾಫ್ಟ್ ವೇರ್ ಕ್ಷೇತ್ರಕ್ಕೆ ಓಡಿದವರೇ. ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡದವನು ದಂಡಪಿಂಡ ಎಂಬಂತಹ ಮನೋಭಾವ ಎದ್ದು ನಿಂತಿತು. ನಮ್ಮಲ್ಲಿಯ ಕೆಲ ಸಾಫ್ಟ್ ವೇರ್ ಕಂಪನಿ ಮುಖ್ಯಸ್ಥರು ಕೂಡ ಜಗತ್ತು ನಡೆಯುವುದೇ ನಮ್ಮಿಂದ ಎಂಬಂತೆ ವರ್ತಿಸತೊಡಗಿದರು. ನಾವು ಕೇಳಿದ್ದು ಕೊಡದಿದ್ದರೆ ಈ ಊರು ಬಿಟ್ಟು ಬೇರೆ ಕಡೆ ನಮ್ಮ ಕಂಪನಿ ಸ್ಥಾಪಿಸುತ್ತೇವೆ ಎಂದು ಸರಕಾರಕ್ಕೇ ಧಮಕಿ ಹಾಕಿ blackmail ಮಾಡುವಷ್ಟು ದುರಹಂಕಾರ ಬೆಳೆಸಿಕೊಂಡರು. ಇವರಿಗೆಲ್ಲ ಕುಮ್ಮಕ್ಕು ಕೊಡುವ, IT BT ದೊರೆಗಳು ಹೇಳಿದ್ದೆಲ್ಲ ವೇದವಾಕ್ಯ ಎಂದು ನಂಬಿದ, ನಂಬಿಸುವ, ಕೆಲ ಇಂಗ್ಲೀಷ್ ಪತ್ರಿಕೆಗಳು ಈ ದುರಹಂಕಾರಿ IT BT ಮುಖ್ಯಸ್ಥರ ಮುಖವಾಣಿ (mouthpiece) ಆದವು.
ಇದು ಆಧುನಿಕ ವೃತ್ತಿಗಳ ಬಗ್ಗೆ ಆದರೆ ಸಾಂಪ್ರದಾಯಿಕ ವೃತ್ತಿಗಳೇನೂ ಪೂರ್ವಾಗ್ರಹಗಳಿಂದ ಮುಕ್ತವಾಗಿಲ್ಲ. ನಮ್ಮ ಕಥೆ ಕಾದಂಬರಿಗಳು, ಸಾಹಿತ್ಯ, ಕವನ, ಸಿನೆಮಾ, ರಾಜಕೀಯದವರು, ಬುದ್ಧಿಜೀವಿಗಳು, ಎಲ್ಲ ಕೃಷಿಯನ್ನು ವಿಪರೀತ ಎನಿಸುವಷ್ಟು ವರ್ಣನೆ ಮಾಡಿವೆ. ರೈತರು ಮಾತ್ರ ಕಷ್ಟಪಟ್ಟು ದುಡಿಯುವವರು, ಅವರು ಮಾತ್ರ ಶ್ರಮಜೀವಿಗಳು, ಇತರರೆಲ್ಲರೂ ಅವರ ಹೊಟ್ಟೆಮೇಲೆ ಹೊಡೆದು ಶೋಷಣೆ ಮಾಡುವವರು ಎಂಬಂತಹ ಚಿತ್ರಣವನ್ನೇ ಕೊಡುತ್ತಾ ಬಂದಿದ್ದಾರೆ. ರೈತನಿರಲಿ, ಚಪ್ಪಲಿ ಹೊಲಿಯುವವನಿರಲಿ, ಕಾರ್ ಡ್ರೈವರ್ ಇರಲಿ, ದೊಡ್ದ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಇರಲಿ, ಎಲ್ಲರೂ ದೇಶಕ್ಕೆ ದುಡಿದೇ ದುಡಿಯುತ್ತಾರೆ, ಪ್ರತಿಯೊಬ್ಬರ ಶ್ರಮವೂ ಅಗತ್ಯ. ಸೈನಿಕರು ಮಾತ್ರ ದೇಶಪ್ರೇಮಿಗಳಲ್ಲ. ದಾದಿ, ವೈದ್ಯ, ಶಿಕ್ಷಕ ವೃತ್ತಿಗಳು ಮಾತ್ರ noble profession ಆಗಬೇಕಿಲ್ಲ, software ಉದ್ಯೋಗಿಗಳಿಗೆ ಮಾತ್ರ stress ಇರುತ್ತದೆ ಎಂದೇನಿಲ್ಲ. Police ಕೆಲಸದಲ್ಲಿರುವವರಿಗೆ ಕೇಳಿ stress ಎಂದರೇನೆಂದು. ಇತ್ತೀಚೆಗೆ ಕಾನ್ಸ್ಟೇಬಲ್ ಒಬ್ಬ ಹಿರಿಯಧಿಕಾರಿಯನ್ನು ರಜೆ ಕೊಟ್ಟಿಲ್ಲ ಎಂದು ಕೊಂದಿದ್ದು ನೆನಪಿರಬಹುದು. ದಿನಕ್ಕೆ ಕನಿಷ್ಟ 14-15 ಗಂತೆ ಕೆಲಸ ಮಾಡುತ್ತಾರೆ, ಅದೂ ಸಾರ್ವಜನಿಕರಿಂದ, ಹಿರಿಯ ಅಧಿಕಾರಿಗಳಿಂದ, ರಾಜಕಾರಣಿಗಳಿಂದ ನಿರಂತರ ಕಿರಿಕಿರಿ ಅನುಭವಿಸುತ್ತ. ನಾವು ಒಮ್ಮೆಯಾದರೂ ಯೋಚಿಸಿದ್ದೇವೆಯೇ? Corporate ಉದ್ಯೋಗಿಗಳಿಗೆ ಸ್ವಲ್ಪ ಒತ್ತಡ ಇದ್ದರೂ ದೊಡ್ಡ ಸಮಸ್ಯೆ ಎಂಬಂತೆ ವರ್ತಿಸುವ ಕೆಲ ಆಂಗ್ಲ ಪತ್ರಿಕೆಗಳು ಇವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿವೆಯೇ?
ಇರಲಿ, ಶಿಕ್ಷಕ ವೃತ್ತಿಯ ಬಗ್ಗೆ ಮಾತಾಡೋಣ. ನಾನಿಲ್ಲಿ ಹೇಳುತ್ತಿರುವುದು ಕಾಲೇಜ್ ಶಿಕ್ಷಣ, ಅದರಲ್ಲೂ ಇಂಜಿನಿಯರಿಂಗ್ ಶಿಕ್ಷಕ ವೃತ್ತಿಯ ಬಗ್ಗೆ ಆದರೂ, ಡಿಗ್ರಿ ಕಾಲೇಜು, ಶಾಲಾ ಶಿಕ್ಷಕ ವೃತ್ತಿಯಲ್ಲಿಯೂ ಇವುಗಳಲ್ಲಿ ಅನೇಕ ಸಾಮ್ಯತೆಗಳನ್ನು ನೋಡಬಹುದು.
ಇಪ್ಪತ್ತು ಮೂವತ್ತು ವರ್ಷ ಹಿಂದೆ ಹೇಗಿತ್ತೋ ಗೊತ್ತಿಲ್ಲ, ಆದರೆ ಈಗ ಶಿಕ್ಷಕ ವೃತ್ತಿ ತುಂಬಾ competetive ಆಗಿದೆ. ಎರಡು ಮೂರು ಗಂಟೆ ಕ್ಲಾಸ್ ತೆಗೆದುಕೊಂಡು ಆಮೇಲೆ ಸ್ಟಾಫ್ ರೂಮಿನಲ್ಲಿ ಹರಟೆ ಹೊಡೆಯುವ ಕಾಲ ಇದಲ್ಲ. ದಿನಕ್ಕೆ ಎರಡೇ ಗಂಟೆ ಕ್ಲಾಸ್ ಇರಬಹುದು ನಿಜ. ಆದರೆ ಒಬ್ಬ ಶಿಕ್ಷಕನ ಕೆಲಸ ಬರೀ ಪಾಠ ಮಾಡುವುದಕ್ಕೆ ಸೀಮಿತವಾಗಿಲ್ಲ. College management ಗಳು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ಕೊಡುತ್ತಲೇ ಇರುತ್ತಾರೆ. ನೂರೆಂಟು ಅನೇಕ ಸಣ್ಣ ಸಣ್ಣ ಕೆಲಸಗಳು ಇದ್ದೇ ಇರುತ್ತವೆ. Test, assignment, correction, attendance, mentoring, ಆ ಕಮಿಟಿ, ಈ ಕಮಿಟಿ, ಹೀಗೆ ಪ್ರತೀ ಗಂಟೆಯೂ ಒಂದಲ್ಲ ಒಂದು ಚಟುವಟಿಕೆ ಶಿಕ್ಷಕರನ್ನು ಬಿಸಿಯಾಗಿಟ್ಟಿರುತ್ತವೆ. Engineering semester ಮುಗಿಯುವ ಹೊತ್ತಿಗೆ ಕೆಲಸದೊತ್ತಡ ವಿಪರೀತವಿರುತ್ತದೆ.
ಕ್ಲಾಸ್ ಇದ್ದಾಗ ಒಂದು ದಿನ ರಜೆ ತೆಗೆದುಕೊಳ್ಳುವುದು ಎಷ್ಟು ಕಷ್ಟ ಎಂದು ಅನುಭವಿಸಿದವರಿಗೇ ಗೊತ್ತು. College management ಗಳು ದಿನ ದಿನ ಸೃಷ್ಟಿಸುವ ಹೊಸ ಹೊಸ, ಸ್ವಲ್ಪವೂ ಕೆಲಸಕ್ಕೆ ಬಾರದ ಅರ್ಥಹೀನ rules ಗಳನ್ನು ಪಾಲಿಸುವ ಹಣೆಬರಹ ಅಧ್ಯಾಪಕವರ್ಗಕ್ಕೇ ಯಾವಾಗಲೂ. ಎಷ್ಟೋ ರೂಲ್ ಗಳಿಂದ ಸಂಸ್ಥೆಗಾಗಲೀ, ವಿದ್ಯಾರ್ಥಿಗಳಿಗಾಗಲೀ, ಅಧ್ಯಾಪರಿಗಾಗಲೀ ಪ್ರಯೋಜನವೇ ಇರುವುದಿಲ್ಲ. ನಿಜವಾದ ಸಮಸ್ಯೆಗಳನ್ನು ಪರಿಹರಿಸುವುದರ ಬಗ್ಗೆ ಗಮನ ಕೊಡದ ಆಡಳಿತವರ್ಗ, ಇಂಥ ಅಪ್ರಯೋಜಕ ರೂಲ್ ಗಳನ್ನು ಮಾಡಿ ಸಿಬ್ಬಂದಿ ಮೇಲೆ ಹೇರಲು ಆತುರ ತೋರಿಸುತ್ತವೆ.
ಶಿಕ್ಷಕರಿಗೆ ಎಲ್ಲಾ ಸರಕಾರಿ ರಜೆಗಳು ಸಿಗುತ್ತವೆ ಎನ್ನುವುದೇನೋ ನಿಜ. ಆದರೂ ಇದು management ಕೈಯ್ಯಲ್ಲಿದೆ ಎನ್ನುವುದು ಮರೆಯುವಂತಿಲ್ಲ. ಕೆಲ ಕಾಲೇಜಿನಲ್ಲಿ ರಜೆ ಕೊಟ್ಟಹಾಗೆ ಮಾಡಿ, ಮುಂದಿನ ಎರಡು ಶನಿವಾರಗಳು ಪೂರ್ತಿ ದಿನ ಕೆಲಸಮಾಡಿಸುವುದಿದೆ. ಇನ್ನು ಕೆಲ ಕಾಲೇಜಿನಲ್ಲ ಕೆಲ ರಜೆಗಳನ್ನು ಕೊಡುವುದೇ ಇಲ್ಲ. ಎಲ್ಲಾ ಸರಕಾರಿ ರಜೆಗಳು ಸಿಗುತ್ತವೆ ಎನ್ನುವವರು ಮರೆಯುವ ಒಂದು ವಿಷಯ ಎಂದರೆ software ಕ್ಷೇತ್ರದಲ್ಲಿರುವವರಿಗೆ ಪ್ರತಿ ಶನಿವಾರ ರಜೆ ಸಿಗುವುದರ ಬಗ್ಗೆ. ಸರಕಾರಿ ರಜೆಗಳು ವರ್ಷಕ್ಕೆ ಸುಮಾರು 23 ಇರಬಹುದು, ಅದರಲ್ಲೂ ಕೆಲವು ಭಾನುವಾರ ಬಂದರೆ ಹೋಯಿತು. ಆದರೆ ಸಾಫ್ಟ್ ವೇರ್ ನಲ್ಲಿ 52 ದಿನ ರಜೆ ಹೆಚ್ಚು ಸಿಗುತ್ತದೆ, ಇದರ ಬಗ್ಗೆ ಯಾರೂ ತಕರಾರು ಎತ್ತುವುದಿಲ್ಲ. ಸರಕಾರಿ ಉದ್ಯೋಗಿಗಳಿಗೆ, ಶಿಕ್ಷಕರಿಗೆ ರಜೆ ಸಿಕ್ಕಿದರೆ ಹೊಟ್ಟೆ ಉರಿದುಕೊಳ್ಳುವವರೇ ಎಲ್ಲರೂ.
Vacation ಎನ್ನುವುದು ಇನ್ನೊಂದು ಹೊಟ್ಟೆ ಉರಿದುಕೊಳ್ಳುವ ವಿಷಯ. ಅನೇಕರಿಗೆ ಗೊತ್ತಿಲ್ಲ, vacation ಎನ್ನುವುದು ಸಿಗುವುದು ಅಷ್ಟು ಸುಲಭವಲ್ಲ. ಅನೇಕ ಕಾಲೇಜ್ ಗಳಲ್ಲಿ vacation ರಜ ಕೊಡುವುದಿಲ್ಲ, ಕೊಟ್ಟರೂ ಮೂರ್ನಾಲ್ಕು ದಿನ, ಹೆಚ್ಚೆಂದರೆ ಒಂದು ವಾರ. ಈ ದಿನಗಳಲ್ಲಿಯೂ valuation, invigilation, meeting ಎಂದು ಕಾಲೇಜಿಗೆ ಕರೆಸಿಕೊಳ್ಳುತ್ತಾರೆ.
Software ನಲ್ಲಿರುವವರು ಮನೆಗೆ ಬಂದಮೇಲೂ ಕೆಲಸ ಮಾಡುತ್ತಾರೆ ಎನ್ನುವುದು ದೊಡ್ಡ ಸುದ್ದಿ. ಇದು ಅವರಿಗೆ ಮಾತ್ರ ಸೀಮಿತವಾಗಿಲ್ಲ. ಇತರ ಅನೇಕ ಕೆಲಸದವರೂ ಮನೆಗೆ ಕೆಲಸ ತರುತ್ತಾರೆ. ಶಿಕ್ಷಕರು notes ಮಾಡುವುದು, ಓದುವುದು, test papers correction ಮಾಡುವುದು ಹೀಗೆ ಅನೇಕರು ಮನೆಗೂ ತರುತ್ತಾರೆ ಕಾಲೇಜ್ ಕೆಲಸವನ್ನು. ಈಗ ಪಾಠ ಮಾಡುವುದಕ್ಕೂ Word, Powerpoint, Flash ಮುಂತಾದ ಆಧುನಿಕ ಸೌಲಭ್ಯಗಳನ್ನು ಬಳಸುವುದು ಸಾಮಾನ್ಯವಾಗಿರುವುದರಿಂದ ಮನೆಯಲ್ಲಿ ಇವುಗಳಲ್ಲಿ ಕೆಲಸಮಾಡುವುದು ಕೂಡ ಸಾಮಾನ್ಯವಾಗಿದೆ.
ಎಲ್ಲಾ ವೃತ್ತಿಗಳಲ್ಲಿರುವಂತೆ ಅಧ್ಯಾಪನ ವೃತ್ತಿಯಲ್ಲಿಯೂ ಏರಿಳಿತ ಸಹಜ. ಒಳ್ಳೆಯದು ಇದೆ, ಕೆಟ್ಟದ್ದೂ ಇದೆ. ತುಂಬ ಕಷ್ಟದ ಕೆಲಸ ಅಲ್ಲ ನಿಜ. ಆದರೆ ಅನೇಕರು ತಿಳಿದಂತೆ ಸುಲಭದ, ಕಾಲಹರಣದ ಕೆಲಸವಂತೂ ಅಲ್ಲ. ಹಿಂದೆ, ಬೇರೆಲ್ಲೂ ಕೆಲಸ ಸಿಗದವರು ಶಿಕ್ಷಕರಾಗುತ್ತಾರೆ ಎಂಬ ನಂಬಿಕೆಯಿತ್ತು. ಈಗ ಹಾಗಲ್ಲ. ಈ ಕ್ಷೇತ್ರದಲ್ಲಿಯೂ ಬೆಳೆಯಬಹುದು, ಸಾಧನೆ ಮಾಡಬಹುದು ಎಂದು ಅನೇಕರು ಸ್ವಯಂಪ್ರೇರಿತರಾಗಿ ಬರುತ್ತಿದ್ದಾರೆ. Corporate ಕೆಲಸ ಬಿಟ್ಟು ಇಂಜಿನಿಯರಿಂಗ್ ಕಾಲೇಜ್ professor ಆಗಿ ಅನೇಕರು ಬಂದಿದ್ದಾರೆ, ಬರುತ್ತಿದ್ದಾರೆ. ಸಂಶೋಧನೆ, ತಾಂತ್ರಿಕ ಲೇಖನ ಪ್ರಕಟನೆ (paper presentation), ತಾಂತ್ರಿಕ ಸಭೆ (conference)ಗೆ ಹೋಗುವುದು, ಹೀಗೆ ಉತ್ಸಾಹದಿಂದ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹ. ಆದರೂ ಇದೊಂದು career ಅಲ್ಲ ಎಂಬ ತಪ್ಪು ಕಲ್ಪನೆ ಹೋಗಲು ಇನ್ನೂ ಸಮಯ ಬೇಕು. ಶಿಕ್ಷಕ ವೃತ್ತಿ ಬೋರು, exciting ಅಲ್ಲ ಎಂಬ ಮನೋಭಾವನೆ ಇನ್ನೂ ಹೋಗಬೇಕಿದೆ. ಕೇವಲ corporate, software ಮುಂತಾದ ಕೆಲಸಗಳು exciting ಎಂಬ ಕುರುಡು ನಂಬಿಕೆ ಬಿಡಬೇಕು.