Wednesday, 25 June 2008

ಕನ್ನಡದಲ್ಲಿ ಇಂಗ್ಲೀಷೋ, ಇಂಗ್ಲೀಷಿನಲ್ಲಿ ಕನ್ನಡವೋ?

"one cup ಹಾಲು, half tea spoon sugar, ಇವನ್ನೆಲ್ಲ ಸೇರಿಸಿ mix ಮಾಡ್ಕೊಳ್ ಬೇಕು. Half litre waterನ ten minutes ವರೆಗೆ heat ಮಾಡ್ಬೇಕು. ಎರಡು onion ತೆಗೆದುಕೊಂಡು slice ಮಾಡಿ, one pinch salt ಹಾಕಿ........." ಅಬ್ಬ, ಓದಲೇ ಇಷ್ಟು ಕಿರಿಕಿರಿ ಆದರೆ, ಅದನ್ನ ಕೇಳುವುದು ಹೇಗೆ. ಇದು ನಮ್ಮ ಅನೇಕ ವಾಹಿನಿಗಳಲ್ಲಿ ಬರುವ ಅಡಿಗೆ ಕಾರ್ಯಕ್ರಮಗಳ ಒಂದು ಉದಾಹರಣೆ. ಈಗೀಗ ಸಾಮಾನ್ಯ ಕನ್ನಡ ಪದಗಳೂ ಕಾಣೆಯಾಗುತ್ತಿವೆ. "ಇದು kitchen, ಇದು bedroom, ಎರಡು toilet, bathroomಗಳಿವೆ...." ಹೀಗೆ ಮುಂದುವರೆಯುತ್ತದೆ. "ನಿಮ್ಮ songನ play ಮಾಡ್ತೇವೆ", ಇದು ನಮ್ಮ ಎಫ್.ಎಂ ರೇಡಿಯೊ ಧ್ವನಿ.

ಅನೇಕರಿಗೆ ಸಂಖ್ಯೆ, ಸಮಯ, ವಾರಗಳನ್ನು ಕನ್ನಡದಲ್ಲಿ ಹೇಳಲು ಬರುವುದೇ ಇಲ್ಲ. Monday, Tuesday ಎಂದೇ ಹೇಳಬೇಕು, ಸೋಮವಾರ, ಮಂಗಳವಾರ ಹೇಳಲು ಬರುವುದಿಲ್ಲ. "ನಮ್ ಕಾಲೇಜ್ ಬೆಳಿಗ್ಗೆ eight-thirtyಗೆ start ಆಗಿ two-thirtyಗೆ ಮುಗಿಯುತ್ತೆ". "ಇವತ್ತು lunch, one-thirtyಯಿಂದ twoವರೆಗೆ, ಅಂದ್ರೆ thirty minutes ಇತ್ತು". ಎಂಟುವರೆ, ಎರಡುವರೆ, ಎರಡು ಗಂಟೆ, ಇಂಥಾ ಪದಗಳು ನಮ್ಮ ಅನೇಕರಿಗೆ ಕಷ್ಟ. "ಇದಕ್ಕೆ five hundred rupees ಆಯ್ತು". ಐನೂರು ರೂಪಾಯಿ? ಛೆ, ಛೆ, ಯಾಕೆ ಬೇಕು ಆ ಹಳೆ ಪದಗಳು.

ಮರೆಯಾಗುತ್ತಿರುವ ಇನ್ನೊಂದು ಪದಪುಂಜ "ಹೋದ ಸಲ". "last time ನಾ ಅಲ್ಲಿಗೆ ಹೋದಾಗ...", "last month ಕೂಡ ಹೀಗೆ ಅಗಿತ್ತು...", "last year ನಲ್ಲಿ...". ಹೋದ ಸಲ, ಹೋದ ತಿಂಗಳು, ಹೋದ ವರ್ಷ, ಇವೆಲ್ಲ last yearರೇ ಮಾಯವಾಗಿಬಿಟ್ಟಿವೆ."ಅವನಿಗೆ last week Friday eight-thirtyಗೆ fifty rupees ಕೊಟ್ಟಿದ್ದೆ", ಇದು ಕನ್ನಡದಲ್ಲಿ ಇಂಗ್ಲೀಷೋ, ಇಲ್ಲ ಇಂಗ್ಲೀಷಿನಲ್ಲಿ ಕನ್ನಡವೋ ಗೊತ್ತಾಗುವುದಿಲ್ಲ.

ಬರೀ ನಗರವಾಸಿ, ಆಂಗ್ಲ ಮಾಧ್ಯಮದಿಂದ ಬಂದವರಿಗೆ ಮಾತ್ರ ಈ ಅಭ್ಯಾಸ ಇದೆ ಅಂತ ಅರ್ಥ ಅಲ್ಲ. ಹಳ್ಳಿ, ಸಣ್ಣ ಪಟ್ಟಣಗಳಿಂದ ಬಂದವರೆಂತೂ, ಕನ್ನಡದಲ್ಲೇ ಶಿಕ್ಷಣ ಮಾಡಿದವರು ಎಂದು ಹೇಳಿಕೊಳ್ಳುವವರಲ್ಲೂ ಈ ಚಟವಿದೆ. ನಮ್ಮ ತರಕಾರಿ ಮಾರುವವರನ್ನು ನೋಡಿ. ಎಷ್ಟೋ ಸಲ, ಅವರಿಗಿಂತ ನಮಗೇ ಕನ್ನಡದ ತರಕಾರಿ ಹೆಸರುಗಳು ಚೆನ್ನಾಗಿ ಬರುತ್ತವೇನೋ ಅನ್ನಿಸುತ್ತದೆ. ಬದನೆಕಾಯಿ, ಎಲೆ ಕೋಸು, ಎಲ್ಲ ಮರೆತೇ ಹೋಗುತ್ತಿವೆ brinjal, cabbageಗಳ ಆರ್ಭಟದಲ್ಲಿ.

ಪ್ರಾದೇಶಿಕವಾಗಿ ಕನ್ನಡದಲ್ಲಿ ಭಿನ್ನತೆಗಳಿವೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಹವ್ಯಕ, ಹೀಗೆ ಭಾಷಾ ಪ್ರಭೇದಗಳಿವೆ. ಕೆಲವು ಜಾತಿ ಪಂಗಡಗಳಿಗೆ ’ಅ’ ಮತ್ತು ’ಹ’ ಗಳಿಗೆ ವ್ಯತ್ಯಾಸವಿಲ್ಲ. ನಮ್ಮ ಕಂಗ್ಲಿಷ್ ಜನ, ತಾವು ಎಷ್ಟು ಕೆಟ್ಟದಾಗಿ ಇಂಗ್ಲೀಷ್ ಮತ್ತು ಕನ್ನಡ ಒಟ್ಟಿಗೆ ಎರಡನ್ನೂ ಕೊಲೆ ಮಾಡಿದರೂ, ಈ ಜನರನ್ನು ಗೇಲಿ ಮಾಡುತ್ತಾರೆ. "ಆಲು ಆಣ್ಣು, ಅಕ್ಕಿ ಆರುತಿದೆ, ನಿಮಗೆ ಹಾದರದ ಸ್ವಾಗತ" ಇಂಥಾ ವ್ಯಂಗ್ಯ ಮಾಡುವುದು ಈ sunday, monday ಜನರೇ, ತಾವು ಎಷ್ಟು ಕೆಟ್ಟದಾಗಿ ಮಾತಾಡುತ್ತೇವೆ ಎನ್ನುವ ಪರಿವೆ ಇಲ್ಲದೆ. ಭಾಷೆಯಲ್ಲಿ ಶುದ್ಧ ಪ್ರಯೋಗ ಇರಬೇಕು ನಿಜ. ಭಾಷಾ ಅಪಭ್ರಂಶ ಕೇಳಲು ಕರ್ಕಶ ಖಂಡಿತ, ಆದರೆ ಈ ಕಂಗ್ಲಿಷ್ ಜನರ ಭಾಷೆ ಇನ್ನೂ ಕರ್ಕಶ.

ಭಾಷೆಯ ವಿಷಯದಲ್ಲಿ ಮಡಿವಂತಿಕೆ ಮಾಡಬೇಕಾಗಿಲ್ಲ. ಸಂಪೂರ್ಣ ಶುದ್ಧ ಕನ್ನಡ ಮಾತಾಡಲು ಈಗ ಸಾಧ್ಯವಿಲ್ಲ. ಎಷ್ಟೋ ಆಂಗ್ಲ ಪದಗಳು ಕನ್ನಡದವೇ ಎನ್ನುವಷ್ಟು ಬೆರೆತಿವೆ ನಮ್ಮ ಭಾಷೆಯಲ್ಲಿ. ವ್ಯಾವಹಾರಿಕವಾಗಿ ಮಾತಾಡುವಾಗ ಇಂಗ್ಲೀಷ್ ಪದಗಳ ಬಳಕೆ ಅನಿವಾರ್ಯವಾಗುತ್ತದೆ. ಕೆಲ ಸಲ ಕನ್ನಡಕ್ಕಿಂತ ಇಂಗ್ಲೀಷ್ ಪದಗಳು ಆ ಪರಿಸ್ಥಿತಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇದು ಈಗಿನ ದಿನಗಳಲ್ಲಿ ತಪ್ಪಲ್ಲ. ಆದರೆ ಇದನ್ನೆ ನೆಪ ಮಾಡಿಕೊಂಡು, ಇನ್ನೂ ಬಳಕೆಯಲ್ಲಿರುವ ಸಾಮಾನ್ಯ ಕನ್ನಡ ಪದಗಳಿಗೂ ಕತ್ತರಿ ಹಾಕಿ, ಅನಗತ್ಯವಾಗಿ ಇಂಗ್ಲೀಷನ್ನು ತುರುಕುವುದು ಏಕೋ?

4 comments:

Jayashree said...

idu mugiyada charche antitkolli. ondu sukshma gamanisi. bhasheyanna naavu pritiyinda balasidashtu beleyuttade. English maatadora bagge tale gamana kodbardu. tanaage sari hogtare.

sunaath said...

ದೀಪಸ್ಮಿತ,
ನಮ್ಮ ಕನ್ನಡದಲ್ಲಿ ನಮಗಿನ್ನು ೧೦% ಕನ್ನಡ ಸಿಕ್ಕರೆ ಸಾಕು ಅನ್ನುವಂತಹ ಪರಿಸ್ಥಿತಿ ಬರುತ್ತೆ.

Harisha - ಹರೀಶ said...

ಇವತ್ತು ಮಧ್ಯಾಹ್ನ ಹಾಗೇ ಆಯಿತು.. ಮನೆಯ ಹತ್ತಿರದ ಗಣೇಶ ಜ್ಯೂಸ್ ಸೆಂಟರಿನಲ್ಲಿ ಏನು ಬೇಕು ಎಂದಾಗ ಕಿತ್ತಳೆ ಅಂದೆ. "ಆಂ" ಎಂದ. ನಂತರ orange ಅಂದ ಮೇಲೇ ಆತನಿಗೆ ತಿಳಿದಿದ್ದು...

prasanna said...

ಅಂತಜಾಱಲದ ಪೆಟ್ಟಿಗೆಯಲ್ಲಿ ನಿಮ್ಮ ಕನ್ನಡಾಭಿಮಾನ ಕಂಡು ಖುಷಿಯಾಯ್ತು. ಬ್ಯಾಂಗ್ಲೂರ್ ! ನಲ್ಲಿ ಕನ್ನಡ ಎಂದರೆ ಎನ್ನಡ? ಏನ್ನುವಲ್ಲಿಗೆ ತಲುಪಿದೆ. ಇದರ ಹಬೆ ಇತ್ತ ಸೋಕದಿದ್ದರೆ ಸಾಕಲ್ವಾ?