Friday, 1 July 2011

ತೇರಾನೇರಿ ಅಂಬರದಾಗೆ ನೇಸರ ನಗುತಾನೆ, ಮರಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ...

ಸೂರ್ಯ. ಕಣ್ಣಿಗೆ ಕಾಣುವ ದೇವರು. ಭಾರತೀಯ ಮತ್ತು ಜಗತ್ತಿನ ಅನೇಕ ಸಂಸೃತಿಯಲ್ಲಿ ತುಂಬಾ ಮಹತ್ವ ಪಡೆದ ಆಕಾಶಕಾಯ. ಸೂರ್ಯ, ರವಿ, ಭಾಸ್ಕರ, ದಿನಕರ, ದಿವಾಕರ, ಮಿತ್ರ, ಅರ್ಕ, ಸವಿತಾ(ಸವಿತೃ), ಭಾನು, ಆದಿತ್ಯ, ಹಿರಣ್ಯಗರ್ಭ, ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಗ್ರಹಗಳ ಅಧಿಪತಿ ಸೂರ್ಯ.

ಈಜಿಪ್ತ್ ನಾಗರೀಕತೆಯಲ್ಲಿ ರಾ ಹೆಸರಿನಲ್ಲಿ ಅತಿ ಮುಖ್ಯ ದೇವತೆ ಸೂರ್ಯ.
ದಕ್ಷಿಣ ಅಮೇರಿಕಾ ನಾಗರಿಕತೆಗಳಾದ ಮಾಯಾ ಮತ್ತು ಅಜ್ಟೆಕ್ ಜನಾಂಗಗಳು ಸೂರ್ಯಾರಾಧನೆ ಮಾಡುತ್ತಿದ್ದವು. ಸೂರ್ಯನಿಗೆ ನರಬಲಿ ಕೊಟ್ಟು ತೃಪ್ತಿಪಡಿಸುತ್ತಿದ್ದರು.
ಗ್ರೀಕ್, ರೋಮನ್ನರಿಗೆ ಹೀಲಿಯೋಸ್ ಅಥವಾ ಅಪೋಲೋ ಆಗಿ ಸೂರ್ಯ ಕಾಣಿಸಿಕೊಂಡ.
ಪರ್ಷ್ಯನ್ನರು ಕೂಡ ಸೂರ್ಯನನ್ನು ಮಿತ್ರ ಎಂದು ಕರೆದರು.

ಭಾರತೀಯ ಪುರಾಣಗಳ ಪ್ರಕಾರ ಸೂರ್ಯ ಅದಿತಿಯ ಮಗ. ಅವನ ಪತ್ನಿಯರು ಸಂಧ್ಯಾ(ಸಂಜನಾ, ಸಂಜ್ಞ) ಮತ್ತು ಛಾಯಾ. ಮನು, ಶನಿ, ಯಮ ಮತ್ತು ಯಮಿ ಅವನ ಮಕ್ಕಳು. ಯಮಿಯು ತನ್ನ ಸಹೋದರ ಯಮನನ್ನೇ ಮೋಹಿಸಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಕರಗಿ ನೀರಾಗಿ ಯಮುನಾ ನದಿಯಾಗಿ ಭೂಲೋಕದಲ್ಲಿ ಜನಿಸುತ್ತಾಳೆ.
ತ್ರೇತಾಯುಗದ ಸುಗ್ರೀವ, ದ್ವಾಪರಯುಗದ ಕರ್ಣ ಕೂಡ ಸೂರ್ಯನ ಮಕ್ಕಳು.

ಒಡಿಶಾ ರಾಜ್ಯದ ಕೋನಾರ್ಕ ಸೂರ್ಯ ದೇವಾಲಯದ ಅತಿ ಪ್ರಸಿದ್ಧ ತಾಣ. ಗಂಗದೊರೆಯಾದ ನರಸಿಂಹದೇವ ಇದನ್ನು ಹದಿಮೂರನೆ ಶತಮಾನದಲ್ಲಿ ಕಟ್ಟಿಸಿದನು. ಇದು ಈಗ ಶಿಥಿಲಾವಸ್ಥೆಯಲ್ಲಿದೆ. ದೇವಾಲಯದ ಒಳಗೆ ಪ್ರವೇಶ ಮುಚ್ಚಿದ್ದು, ಹೊರಗಿನಿಂದ ಮಾತ್ರ ನೋಡಲು ಸಾಧ್ಯ. ಹೊರಗೋಡೆಯ ಮೇಲೆ ಉತ್ಕೃಷ್ಟವಾದ ಕೆತ್ತನೆ ಇವೆ. ಇದನ್ನು ರಥದ ಮಾದರಿಯಲ್ಲಿ ಕಟ್ಟಲಾಗಿದೆ. ಇಪ್ಪತ್ತುನಾಲ್ಕು ಗಾಲಿಗಳಿವೆ (ಇಪ್ಪತ್ತುನಾಲ್ಕು ಗಂಟೆಗಳನ್ನು ಸೂಚಿಸಲು). ರಥದ ಕೀಲಿನ ನೆರಳು ದಿನದ ಸಮಯವನ್ನು ಸೂಚಿಸುತ್ತದೆ. ಏಳು ಕುದುರೆಗಳಿದ್ದವಂತೆ (ಏಳು ವಾರ, ಏಳು ಕಿರಣ) ಮೊದಲು. ಈಗ ಅವು ಸಂಪೂರ್ಣ ನಾಶವಾಗಿವೆ, ಒಂದನ್ನು ಬಿಟ್ಟು.


 ಕೋನಾರ್ಕದ ಸೂರ್ಯ ದೇವಾಲಯದ ಸೂರ್ಯ ರಥದ ಚಕ್ರ
  
ಕೋನಾರ್ಕದ ಸೂರ್ಯ

ಸೂರ್ಯೋದಯ, ಸೂರ್ಯಾಸ್ತ ಯಾವಾಗಲೂ ಸುಂದರ ದೃಶ್ಯಗಳೇ. ಅವುಗಳಲ್ಲಿ ಕೆಲವು ಇಲ್ಲಿ...

ಸೂರ್ಯ ಸಮುದ್ರ, ಗುಡ್ಡ ಬೆಟ್ಟದಿಂದ ಮಾತ್ರ ಮೇಲೇಳುವುದಿಲ್ಲ, ಕಾರ್ಖಾನೆ ಹೊಗೆ ಕೊಳವೆಯಿಂದ ಕೂಡಾ ಮೇಲೇಳುತ್ತಾನೆ ನೋಡಿ