Tuesday 2 June, 2015

ಮುಗ್ಧ ಕಲ್ಪನೆಯೋ, ತಪ್ಪು ಕಲ್ಪನೆಯೋ?

ವೃತ್ತಿಗೂ ಸ್ವಭಾವಕ್ಕೂ ಸಂಬಂಧ ಕಲ್ಪಿಸುವುದು ಬಹುಶಃ ನಾವು ಭಾರತೀಯರೇ ಜಾಸ್ತಿ ಎಂದು ನನ್ನ ಅನಿಸಿಕೆ. ಯಾರು ಯಾವ ಕೆಲಸ ಮಾಡುತ್ತಿದ್ದಾರೆ ಎನ್ನುವುದರ ಮೇಲೆ ಅವರ ಜಾತಕ ಹೇಳಿಬಿಡುವುದರಲ್ಲಿ ನಾವು ನಿಸ್ಸೀಮರು. ಇಂತಿಂಥ ವೃತ್ತಿಯವರು ಹೀಗೇ ಎಂದು generalise ಮಾಡಿಬಿಡುತ್ತೇವೆ ಸುಲಭವಾಗಿ. ಇದು ಎಷ್ಟು ಸರಿ.

ಸಾಂಪ್ರದಾಯಿಕ ವೃತ್ತಿ ಇರಲಿ, ಇಂದಿನ ಆಧುನಿಕ ವೃತ್ತಿಗಳಿರಲಿ, ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ. ಅವುಗಳಿಗೆ ತಮ್ಮದೆ ಕಷ್ಟ ಸುಖ ಇದ್ದೇ ಇರುತ್ತದೆ. ಇಂಥ ಕೆಲಸ ಮಾಡುವವರು ಸುಖಿಗಳು, ಈ ವೃತ್ತಿಯವರು ದಂಡಪಿಂಡಗಳು ಎಂದು ತೀರ್ಮಾನ ಮಾಡುವುದು ಎಷ್ಟು ಸರಿಯೋ ಗೊತ್ತಿಲ್ಲ.

ಕೆಲ ಸ್ಯಾಂಪಲ್ಲುಗಳು-
* ಅವನು ಸರಕಾರಿ ಕೆಲಸದವನೆ? ಅವನು ಲಂಚಕೋರ
* ಸರಕಾರಿ ಕೆಲಸವೇ? ಕೆಲಸವೇ ಮಾಡುವುದಿಲ್ಲ. ಮನೇಲೂ ನಿದ್ದೆ, ಆಫೀಸಿನಲ್ಲೂ ನಿದ್ದೆ
* ಪೋಲೀಸರೇ? ಅವರೆಲ್ಲ ಭ್ರಷ್ಟರು, ದೊಡ್ಡ ಹೊಟ್ಟೆಯವರು, ಲಂಚಕೋರರು, ಜನಸಾಮಾನ್ಯರಿಗೆ ಹಿಂಸೆ ಕೊಡುವುದೇ ಸಂತೋಷ ಅವರಿಗೆ
* ಶಾಲೆ/ಕಾಲೇಜ್ ಅಧ್ಯಾಪಕನೇ? ಎರಡು ಗಂಟೆ ಪಾಠ ಮಾಡಿದರೆ ಮುಗೀತು, ಅವರಿಗೆ ಬೇರೆ ಕೆಲಸವೇ ಇರೋಲ್ಲ, ಇಡೀ ದಿನ staffroomನಲ್ಲಿ ಹರಟೆ ಹೊಡೆಯುತ್ತ ಕೂರಬಹುದು. ವರ್ಷವಿಡೀ ರಜೆಗಳು, ತಿಂಗಳುಗಟ್ಟಲೆ vacation
* software engineerಏ? ಪಾಪ ಸಿಕ್ಕಾಪಟ್ಟೆ ಒತ್ತಡ, stress ಅವರಿಗೆ. ಮಧ್ಯರಾತ್ರಿಗೇ ಮನೆಗೆ ಬರುವುದು ಅವರು deadline, project ಅದೂ ಇದೂ ಎಂದು
* ರಾಜಕಾರಣಿಯೇ? ಮುಗಿದೇ ಹೋಯಿತು. ಅವನು ಖಂಡಿತ ಮಹಾ ಭ್ರಷ್ಟ, ದೇಶ ಕೊಳ್ಳೆ ಹೊಡೆಯುವುದಕ್ಕೇ ಈ ವೃತ್ತಿಗೆ ಬಂದವನು
* ರೈತನೇ? ಪಾಪ ದೇಶಕ್ಕಾಗಿ ದುಡಿದು ದುಡಿದೂ ಹಣ್ಣಾದವನು. ಅವನು ಮಾತ್ರ ಕಷ್ಟಪಡುವವನು. ಇತರರೆಲ್ಲ ಅವನ ಹೊಟ್ಟೆಮೇಲೆ ಹೊಡೆದು ಶೋಷಣೆ ಮಾಡುವವರು

ಇಂಥ ತಪ್ಪು ಕಲ್ಪನೆಗಳಿಗೆ ಕೊನೆಯೇ ಇಲ್ಲ ಬಿಡಿ. ಕೆಲ ಮಟ್ಟಿಗೆ ಇವೆಲ್ಲವೂ ಸತ್ಯ ಹೌದು. ಆದರೆ ಇಂತಿಂಥ ಕೆಲಸ ಮಾಡುವವರು ಹೀಗೇ ಇರುತ್ತಾರೆ ಎಂದು ಸಾರಾಸಗಟಾಗಿ ತೀರ್ಮಾನಿಸಿ ಬಿಡುವುದು ಎಷ್ಟು ಸರಿ?
ಬರೀ ವೃತ್ತಿ ಸಂಬಂಧೀ misconceptionಗಳು ಮಾತ್ರವಲ್ಲ, ಪ್ರದೇಶ ಸಂಬಂಧೀ ತಪ್ಪು ಕಲ್ಪನೆಗಳು ಅನೇಕ ಇವೆ.
* ಉತ್ತರಭಾರತದ ವಿದ್ಯಾರ್ಥಿಗಳೆಲ್ಲ ಶ್ರೀಮಂತರು, donation ಕೊಟ್ಟು ಕಾಲೇಜ್ ಸೇರುವುದರಿಂದ ಅವರಿಗೆ ದುಡ್ಡಿನ ಮಹತ್ವ ಗೊತ್ತಿಲ್ಲ. ಅವರು ಓದುವುದಿಲ್ಲ
           ಇದು ತಪ್ಪು ಕಲ್ಪನೆ ಎಂಬುದು ನನ್ನ ಸ್ವಂತ ಅನುಭವ. ನಿಜ ಹೇಳಬೇಕೆಂದರೆ ನಮ್ಮ ಸ್ಥಳೀಯ ವಿದ್ಯಾರ್ಥಿಗಳಿಗಿಂತ ಹೆಚ್ಚು ಶ್ರದ್ಧೆಯಿಂದ ಓದುವವರು ಉತ್ತರದ ವಿದ್ಯಾರ್ಥಿಗಳೇ. ಶ್ರೀಮಂತರಿಗೆಲ್ಲ ಹಣದ ಮಹತ್ವ ಗೊತ್ತಿಲ್ಲ, ಅವರೆಲ್ಲ ಪುಂಡು ಪೋಕರಿತನ ಮಾಡುತ್ತ ಸಮಯ, ದುಡ್ಡು ಹಾಳು ಮಾಡುವವರು ಎನ್ನುವುದು ದೊಡ್ಡ misconception. ಬಡತನದ ಹಿನ್ನಲೆಯಿರುವವರೆಲ್ಲ ತುಂಬ ಮುಗ್ಧರು, ಶ್ರದ್ಧೆಯಿಂದ ಅಭ್ಯಾಸ ಮಾಡುವವರು ಎಂಬ ನಮ್ಮ ಕಥೆ, ಕಾದಂಬರಿ, ಸಿನೆಮಾದವರು ಹೇಳಿ ಹೇಳಿ ದೊಡ್ಡ ತಪ್ಪು ಕಲ್ಪನೆ ಸೃಷ್ಟಿಸಿದ್ದಾರೆ. ಇದು ಯಾವಾಗಲೂ ನಿಜವಲ್ಲ.

ನೂರೆಂಟು ಜಾತಿ ಧರ್ಮವಿರುವ ನಮ್ಮ ದೇಶದಲ್ಲಿ ಜಾತಿ ವಿಷಯದಲಿ ತಪ್ಪು ಕಲ್ಪನೆಗಳಿಗೆ ಬರವೆ?
* ಮೇಲ್ವರ್ಗದವರು, ಅದರಲ್ಲೂ ಬ್ರಾಹ್ಮಣರು ಶೋಷಕರು. ದಲಿತರನ್ನು ಶೋಷಣೆ ಮಾಡುವುದೇ ಅವರ ಕೆಲಸ
* ಹಿಂದುಳಿದವರೆಲ್ಲ, ಅದರಲ್ಲೂ ದಲಿತರು ಎಲ್ಲರೂ ಅತೀ ಕಷ್ಟದಲ್ಲಿರುವವರು. ಯಾವಾಗಲೂ ತುಳಿತಕ್ಕೊಳಗಾದವರು. ಅವರು ಮುಗ್ಧರು, ಒಳ್ಳೆಯವರು, ಬರೀ ನೋವು ಅನುಭವಿಸುವವರು.
* ಮೇಲ್ವರ್ಗದವರೆಲ್ಲ ಶ್ರೀಮಂತರು, ಹಿಂದುಳಿದವರೆಲ್ಲ ಬಡವರು
* ನಗರದ ಜನರೆಲ್ಲ ಮೋಸ ಮಾಡುವವರು, ಹಳ್ಳಿ ಜನರೆಲ್ಲ ಮುಗ್ಧರು
* ಹೊಲಗದ್ದೆಗಳಲ್ಲಿ ಕೆಲಸ ಮಾಡುವವರೇ ಕಷ್ಟ ಪಡುವವರು, corporate, ನಗರದ ವೃತ್ತಿಯವರು ಕಷ್ಟಪಡುವುದೇ ಇಲ್ಲ, ಬೆವರು ಸುರಿದರೆ ಮಾತ್ರ ಕಷ್ಟಪಟ್ಟಂತೆ


ಆದರೆ ಒಂದು ವಿಷಯದಲ್ಲಿ ಮಾತ್ರ ವಿಶ್ವಾದ್ಯಂತ ಇರುವ ದೊಡ್ಡ misconception ಎಂದರೆ ಗಂಡಸರೆಲ್ಲ ಬಲಾತ್ಕಾರ ಮಾಡುವವರು, ಹೆಂಗಸರೆಲ್ಲ ಬಲಾತ್ಕಾರಕ್ಕೆ ಒಳಗಾಗುವ ಜೀವಿಗಳು. ನಮ್ಮಲ್ಲಿ ವರದಕ್ಷಿಣೆ ಕಾಯ್ದೆಯ ದುರುಪಯೋಗ ಎಷ್ಟು ಜಾಸ್ತಿ ಇದೆಯೋ, ಅಮೇರಿಕಾದಂತಹ ದೇಶದಲ್ಲಿ sexual harassment ಕಾಯ್ದೆಯ ದುರುಪಯೋಗ ಅಷ್ಟೇ ಇದೆ

2 comments:

sunaath said...

ದೀಪಸ್ಮಿತರೆ,
ನೀವು ಹೇಳುವುದು ಸಂಪೂರ್ಣ ಸತ್ಯ. ಈ ತರಹದ ಸಾಧಾರಣೀಕರಣವನ್ನು ಮಾಡಬಾರದು. ಆದರೆ ನಮ್ಮ ಅನುಕೂಲಕ್ಕಾಗಿ ನಾವು ಹೀಗೆ ಮಾಡುತ್ತಲೇ ಇರುತ್ತೇವೆ. ಇನ್ನೊಂದು ಕಲ್ಪನೆಯ ಬಗೆಗೆ ಹೇಳುತ್ತೇನೆ. "ಬಿಹಾರೀ ವಿದ್ಯಾರ್ಥಿಗಳು ಉಳಿದ ವಿದ್ಯಾರ್ಥಿಗಳಿಗಿಂತ ಹೆಚ್ಚಿಗೆ ಪುಂಡರು’ ಎಂದು ನನ್ನ ಪರಿಚಯದ ಪ್ರೊಫೆಸರ್ ಒಬ್ಬರು ಹೇಳುತ್ತಿರುತ್ತಾರೆ. ಇದೂ ಸಹ ಒಂದು misconception ಆಗಿರಬಹುದೆ? ಇದರ ಬಗೆಗೆ ನಿಮಗೆ ಏನಾದರೂ ವೈಯಕ್ತಿಕ ಅನುಭವ ಇದೆಯೆ?

ದೀಪಸ್ಮಿತಾ said...

ನಮಸ್ಕಾರ ಸುನಾಥ್ ಸರ್. ನಮ್ಮಲ್ಲಿ ಸಾಮಾನ್ಯವಾಗಿ ಬಿಹಾರಿ ವಿದ್ಯಾರ್ಥಿಗಳು ಪುಂಡರು ಎಂಬ ನಂಬಿಕೆಯಿದೆ. ಅವರಲ್ಲಿ ಅನೇಕರು ಸ್ವಲ್ಪ ಒರಟರು ನಿಜ. ಆದರೆ ಎಲ್ಲರೂ ಆಗಬೇಕಿಲ್ಲ. ಶ್ರದ್ಧೆಯಿಂದ ಓದುವವರು ಇದ್ದಾರೆ. IAS, IPS ಓದುವುದು ಬಿಹಾರಿಗಳೇ ಹೆಚ್ಚು