Wednesday, 3 June 2009

ಕನ್ನಡ ಚಿತ್ರಗಳಲ್ಲಿಯ ಕನ್ನಡೇತರ ಗೀತೆಗಳು

ನಮ್ಮ ಕನ್ನಡ ಚಿತ್ರಗಳಲ್ಲಿ ಎಷ್ಟೊಂದು ಮಧುರ ಗೀತೆಗಳು ಬಂದಿವೆ, ಮತ್ತು ಬರುತ್ತಿವೆ. ಸ್ವಲ್ಪಕಾಲ ಮಾಧುರ್ಯ ಕಡಿಮೆಯಾಗಿದ್ದು ನಿಜ. ಮೊದಮೊದಲು ನಮ್ಮ ಕನ್ನಡಿಗರೇ ಕನ್ನಡ ಚಿತ್ರ, ಚಿತ್ರಗೀತೆಗಳೆಂದರೆ ಮೂಗುಮುರಿಯುತ್ತಿದ್ದ ಕಾಲವಿತ್ತು. ಈಗ ಅನೇಕ FM ಚಾನೆಲ್‍ಗಳು ಬಂದು ಮತ್ತೆ ಕನ್ನಡ ಗೀತೆಗಳನ್ನು ಜನಪ್ರಿಯಗೊಳಿಸುತ್ತಿವೆ.

ಇರಲಿ, ನನ್ನ ವಿಷಯ ಅದಲ್ಲ. ನನಗೆ ನಮ್ಮ ಕನ್ನಡ ಚಿತ್ರಗೀತೆಗಳಲ್ಲಿ ಬಳಸಿದ್ದ ಅನ್ಯ ಭಾಷೆ ಹಾಡುಗಳ ಬಗ್ಗೆ ಕುತೂಹಲ. ಅವುಗಳ ಒಂದು ಪಟ್ಟಿ, ನನಗೆ ತಿಳಿದ ಕೆಲ ಹಾಡುಗಳು...

ಸಂಸ್ಕೃತ ಶ್ಲೋಕಗಳು ಸುಮಾರು ಸಿನೆಮಾಗಳಲ್ಲಿ ಬಳಕೆಯಾಗಿವೆ. "ಕವಿರತ್ನ ಕಾಳಿದಾಸ" ಯಾರಿಗೆ ನೆನಪಿಲ್ಲ? ವಿಷ್ಣುವರ್ಧನ್ ಅಭಿನಯದ "ಭಾಗ್ಯಜ್ಯೋತಿ" ಚಿತ್ರದಲ್ಲಿ ಡಾ.ಪಿ.ಬಿ ಶ್ರೀನಿವಾಸ್ ಅವರು ಅದ್ಭುತವಾಗಿ ರಚಿಸಿ ಹಾಡಿದ ’ದಿವ್ಯಗಗನ ವನವಾಸಿನಿ, ಭವ್ಯರುಚಿರಧರಹಾಸಿನಿ, ಪಂಕಜ ನೇತ್ರಿ...’ ತುಂಬಾ ಅಪರೂಪದ ಗೀತೆ. ಇದರ ಸ್ತ್ರೀ ಧ್ವನಿ ಯಾರದ್ದು ಅಂತ ನನಗೆ ಗೊತ್ತಿಲ್ಲ. ಈ ಸುಂದರ ಗೀತೆ ಆಕಾಶವಾಣಿಯಲ್ಲಿ ಕೇಳಿ ತುಂಬಾ ದಿನಗಳಾಗಿವೆ.

’ರಾ ರಾ, ಸರಸಕು ರಾ ರಾ...’. ಇದು ಯಾರು ಬೇಕಾದರೂ ಸುಲಭದಲ್ಲಿ ಹೇಳಬಹುದು ಎಲ್ಲಿಯದು ಎಂದು. "ಆಪ್ತಮಿತ್ರ"ದಲ್ಲಿ ಈ ತೆಲುಗು ಗೀತೆ ಇದ್ದರೂ, ರೇಡಿಯೋದಲ್ಲಿ ಹೆಚ್ಚಾಗಿ ಕೇಳಿಬರುವುದು ಅದರ ಕನ್ನಡ ಅವತರಣಿಕೆ ’ಬಾರಾ, ಸರಸಕೆ ಬಾರ..’
ದ್ವಾರಕೀಶ ವಿಷ್ಣುವರ್ಧನ್ ಜೋಡಿಯ ಹಿಂದಿನ ಚಿತ್ರ "ರಾಯರು ಬಂದರು ಮಾವನ ಮನೆಗೆ"ಯಲ್ಲಿ ಸಂತ ತ್ಯಾಗರಾಜರ ತೆಲುಗು ರಚನೆ ಬಳಕೆಯಾಗಿತ್ತು.

ಕನ್ನಡ ಚಿತ್ರವೊಂದರಲ್ಲಿ ಉರ್ದು ಹಾಡು ಇತ್ತು ಎಂದು ಎಷ್ಟು ಜನರಿಗೆ ಗೊತ್ತು? ’ಖಾನಾ ಪೀನಾ ಮಜಾ ಉಡಾನಾ...’ ಎಂಬ ಉರ್ದು ಹಾಡು "ಶ್ರೀಕೃಷ್ಣದೇವರಾಯ" ಸಿನೆಮಾದಲ್ಲಿ ಇದೆ. ಇದು ಬಹಳ ಜನರಿಗೆ ಗೊತ್ತಿಲ್ಲ. ಐತಿಹಾಸಿಕ ಚಿತ್ರದಲ್ಲಿ ಉರ್ದು ಹಾಡು ಎಲ್ಲಿಂದ ಬಂತು ಅಂತ ಅನುಮಾನ ಬೇಡ. ಕೃಷ್ಣದೇವರಾಯನ ಕಾಲದಲ್ಲಿ ಬಹಮನಿ ರಾಜ್ಯ ಕೂಡ ಇತ್ತಲ್ಲ?

ಹಂಸಲೇಖ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರಪ್ರಶಸ್ತಿ ದೊರಕಿಸಿ ಕೊಟ್ಟ "ಗಾನಯೋಗಿ ಪಂಚಾಕ್ಷರಿ ಗವಾಯಿ" ಸಿನೆಮಾದಲ್ಲಿ ತಾನ್ ಸೇನ್ ರಚಿಸಿದ 'ಗಾನ ವಿದ್ಯಾ ಬಡೀ ಕಠಿಣ ಹೈ...' ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯ ಅವರಿಗೆ ಕನ್ನಡದಲ್ಲಿ ಅತ್ಯುತ್ತಮ ಗಾಯಕ ಪ್ರಶಸ್ತಿ ಕೊಟ್ಟ 'ಉಮಂಡು ಘಮಂಡು...' ಎಂಬ ಎರಡು ಹಿಂದಿ ಗೀತೆಗಳಿವೆ.

ಇಂಗ್ಲೀಶ್ ಹಾಡುಗಳ ಬಗ್ಗೆ ಹೇಳುವುದಾದರೆ, ಡಾ.ರಾಜ್‍ಕುಮಾರ ಹಾಡಿದ ’If you come today, its too early, if you come tomorrow, its too late, you pick the time, tick tick tick...' ., "Operation Diamond Racket" ಚಿತ್ರದ್ದು. ಇದು ಹೆಚ್ಚಾಗಿ ಎಲ್ಲರಿಗೂ ಗೊತ್ತಿರುವ ಹಾಡು. ನನಗೆ ಗೊತ್ತಿರುವ ಹಾಗೆ ಇನ್ನೂ ಒಂದೆರಡು ಚಿತ್ರಗಳಲ್ಲಿ ಇಂಗ್ಲೀಶ್ ಹಾಡುಗಳಿವೆ.

"ಮದರ್" ಎಂಬ ಚಿತ್ರದಲ್ಲಿ ’Somewhere, someone is waiting for me...' ಎಂಬ ಸಂಪೂರ್ಣ ಇಂಗ್ಲೀಶ್ ಗೀತೆ ಇದೆ.

"ಬೆಸುಗೆ" ಸಿನೆಮಾ ನಮ್ಮ ಕನ್ನಡಿಗರಲ್ಲಿ ಯಾರಿಗೆ ಗೊತ್ತಿಲ್ಲ? ’ಬೆಸುಗೆ ಬೆಸುಗೆ’ ಈ ಹಾಡು ತುಂಬ ಜನಪ್ರಿಯ. ಆದರೆ ಇದೇ ಸಿನೆಮಾದಲ್ಲಿ ಸಂಪೂರ್ಣ ಇಂಗ್ಲೀಶಿನಲ್ಲಿ ಒಂದು ಹಾಡಿದೆ. ’Love is a merry melody, life is a haunting rhapsody...' ಇದು ಕೂಡ ಹೆಚ್ಚಿನವರಿಗೆ ಗೊತ್ತಿಲ್ಲ.

ನನಗೆ ಗೊತ್ತಿರುವ ಮಟ್ಟಿಗೆ ಈ ಮೂರು ಸಂಪೂರ್ಣ ಇಂಗ್ಲೀಶ್ ಹಾಡುಗಳು. "ಬಿಳಿ ಹೆಂಡ್ತಿ" ಸಿನೆಮಾದ ’Happiest moments every event, feel the blessings, what an enchantment, ಬಿಳೀ ಹೆಂಡ್ತಿ singing with joy...’. ಇದರಲ್ಲಿ ಬರುವ ’ಬಿಳಿ ಹೆಂಡ್ತಿ’, ’ಅತ್ತೆ, ಮಾವ’ ಮುಂತಾದ ಕನ್ನಡ ಪದಗಳನ್ನು ಬಿಟ್ಟರೆ ಇದು ಕೂಡ ಪೂರ್ತಿ ಇಂಗ್ಲೀಶ್ ಹಾಡು ಎನ್ನಬಹುದು.

ಇನ್ನು ಕಲಬೆರಕೆ ಹಾಡುಗಳಿಗೆ ಬರವೇನಿಲ್ಲ. ಕನ್ನಡ ಇಂಗ್ಲೀಶ್, ಕನ್ನಡ ತಮಿಳು (’H2O'), ಕನ್ನಡ ಮಲಯಾಳಮ್ (’My Autograph'), ಇವು ನನಗೀಗ ನೆನಪಿಗೆ ಬರುತ್ತಿರುವ ಕಲಬೆರಕೆ ಹಾಡುಗಳು.

ಇನ್ನೂ ಈ ಥರದ ವಿಶಿಷ್ಟ ಹಾಡುಗಳು ಕನ್ನಡ ಹಾಡುಗಳ ಕಣಜದಲ್ಲಿರಬಹುದು. ಅವನ್ನು ಜನರಿಗೆ ತಲುಪಿಸುವುದು ಆಕಾಶವಾಣಿಯ, ವಿವಿಧಭಾರತಿಯ ಮತ್ತು ಇತರ ಎಫ್.ಎಂ ವಾಹಿನಿಗಳ ಕರ್ತವ್ಯ. ಅಷ್ಟೆ ಅಲ್ಲ, TV ವಾಹಿನಿಗಳು ಕೂಡ ಬರೀ ಹೊಸ ಹಾಡುಗಳನ್ನು ಮಾತ್ರ ಹಾಕದೆ ಇಂಥಾ ವಿಶಿಷ್ಟ, ವಿಚಿತ್ರ ಗೀತೆಗಳನ್ನು ಜನರಿಗೆ ತಲುಪಿಸಬೇಕು.

7 comments:

shivu.k said...

ಸರ್,

ಕನ್ನಡ ಚಿತ್ರಗೀತೆಗಳಲ್ಲಿ ಅನ್ಯ ಭಾಷೆಯು ಒಳಹೊಕ್ಕಿರುವ ವಿಚಾರ ನಮಗೆ ಗೊತ್ತಿದ್ದರೂ ಗಮನಕ್ಕೆ ಬಂದಿರಲಿಲ್ಲ...ನೀವು ಹಳೆಯ ಹೊಸ ಚಿತ್ರಗೀತೆಗಳಲ್ಲಿ ಅವಗಳನ್ನೆಲ್ಲಾ ಚೆನ್ನಾಗಿ ಅವಲೋಕಿಸಿದ್ದೀರಿ...ಧನ್ಯವಾದಗಳು.

ಶಿವಪ್ರಕಾಶ್ said...

ಹಳೆ ಹಾಡುಗಳು ಮೂಲೆಗುಂಪಾಗದಂತೆ ನೋಡಿಕೊಳ್ಳುವೋದು ನಮ್ಮೆಲ್ಲರ ಕರ್ತವ್ಯ

ರೂpaश्री said...

ಯೋಚನಾರ್ಹ ಲೇಖನ್!
ನನ್ನ ನೆನಪಿಗೆ ಬಂದ ಮತ್ತೊಂದು ಹಾಡು, ’ಶಂಕರ್ ಗುರು’ ಚಿತ್ರದ ’Love me or hate me kiss me or kill me....'

ಅಲ್ಲದೇ ಇತ್ತೀಚಿನ ಕೆಲವು ಚಿತ್ರಗಳ ಕ್ಯಾಪ್ಶನ್(caption) ಕೂಡ ಹೀಗೆಯಿದೆ. ಉದಾ: "ಮುಂಗಾರುಮಳೆ -ಹನಿ ಹನಿ प्रॆमकहानि"
"ಗಾಳಿಪಟ- ಮನದ ಮುಗಿಲಲ್ಲಿ मोहब्बत"

ಸಾಗರದಾಚೆಯ ಇಂಚರ said...

ಕೆಲವೊಮ್ಮೆ ಪ್ರೇಕ್ಷಕರ ರುಚಿಗೆ ಮಂಕು ಬಡಿಯುತ್ತದೆ ಅನಿಸುತ್ತದೆ, ಇಂಥಹುದೇ ಚಲನಚಿತ್ರಗಳು ಯಶಸ್ವೀಯಾಗುತ್ತವೆ. ಮತ್ತದೇ ಹಾಡುಗಳು ಬರುತ್ತವೆ,
ತುಂಬಾ ಚೆನ್ನಾಗಿ ಗಮನಿಸಿದ್ದಿರ

ಜಲನಯನ said...

ಸರ್, ನನ್ನ ಭಾವ ಮಂಥನಕ್ಕೆ ಬಂದು ಯೋಚನೆಗಳನ್ನು ಹಂಚಿಕೊಂಡು ಅಭ್ಪ್ರಾಯ ತಿಳಿಸಿದ್ದೀರ ಧನ್ಯವಾದಗಳು.
ನಿಮ್ಮ ಚಲನಚಿತ್ರಗಳ ಮತ್ತು ಅದರಲ್ಲಿನ ತುಸು off-beat ಎನಿಸುವ ಹಾಡುಗಳಬಗ್ಗೆ ತಿಳಿಸಿದ್ದೀರಿ, ನಿಜ ನಿಮ್ಮ ಅಭಿಪ್ರಾಯ.
ಇವುಗಳ ಬಗ್ಗೆ ವಿಶೇಷ ಸರಣಿಯನ್ನೇ ಪ್ರಾರಂಭಸಬಹುದು...ಅಲ್ಲವೇ..?

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಸಾಮಾನ್ಯವಾಗಿ ಗಮನಿಸದೇ ಇರುವ ಇಂತಹ ಸಂಗತಿಗಳನ್ನು ಹೆಕ್ಕಿ ಕೊಟ್ಟಿರುವಿರಿ. ಚೆನ್ನಾಗಿದೆ.

keshav said...

ಸಂಘರ್ಷ (೧೯೭೭) ಚಿತ್ರದಲ್ಲಿ ಉಷಾ ಉತ್ತುಫ಼್ ಹಾಡಿರುವ ೨ ಇಂಗ್ಲಿಷ್ ಹಾಡುಗಳಿವೆ. ಇವತ್ತು ತಾನೆ ಮ್ಯುಸಿಕಿಂಡಿಯಾಆನ್ಲೈನ್ ನಿಂದ ಡೌನ್ಲೋಡ್ ಮಾಡಿದೆ.

ಕೇಶವ