ರೈತನ ಮಗನಾದ ನಾನು... ಇದು ಎಚ್.ಡಿ.ಕುಮಾರಸ್ವಾಮಿಯವರ ಮಾತಿನ ಒಂದು ತುಣುಕು.
ರೈತರ ಹೆಸರಿನಲ್ಲಿ, ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ... ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಸಂದರ್ಭ.
ಮೈಸೂರಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಕೆಲ ವಿದ್ಯಾರ್ಥಿಗಳು ರಾಹುಲ್ ಗಾಂಧಿಗೆ ಮೀಸಲಾತಿಯ ಬಗ್ಗೆ ಆಕ್ಷೇಪಣೆ ಎತ್ತಿದರು. ಆಗ ರಾಹುಲ್ ಗಾಂಧಿ ಅವರಿಗೆ ಕೆಳಿದರು, "ನೀವು ಹಳ್ಳಿಗಳನ್ನು ಕಂಡಿದ್ದೀರಾ?". ಅವರು ಇಲ್ಲ ಎಂದರು. "ನಾನು ಕಂಡಿದ್ದೇನೆ, ಜನರ ಕಷ್ಟ ಏನೆಂದು ನನಗೆ ಗೊತ್ತು", ಎಂದು ರಾಹುಲ್ ಉತ್ತರಿಸಿದರಂತೆ.
ಯಾವುದೇ ರಾಜಕೀಯ ಮುಖಂಡನ ವರ್ಣನೆಯಲ್ಲಿ "ದೀನ ದಲಿತ, ಅಲ್ಪಸಂಖ್ಯಾತರ, ರೈತರ ನಾಯಕ" ಎಂದಿರಲೇಬೇಕು.
ಮಾಯಾವತಿ ಏನೇ ಮಾಡಲಿ, ಮಾತಾಡಲಿ, ಅಲ್ಲಿ 'ದಲಿತ' ಎಂಬ ಪದ ಬರದಿದ್ದರೆ ಕೇಳಿ.
ಬಂಗಾರಪ್ಪನವರನ್ನು ಎಲ್ಲಾ ರಾಜಕಾರಣಿಗಳೂ, ಪತ್ರಿಕೆಗಳೂ 'ಹಿಂದುಳಿದವರ, ಅಲ್ಪಸಂಖ್ಯಾತರ ನಾಯಕ' ಎಂದು ಹಾಡಿ ಹೊಗಳಿದರು.
ಮೇಲಿನದು ನಮ್ಮ ದೇಶದ ರಾಜಕೀಯ ನಾಯಕರ ಸಾರ್ವಜನಿಕ ಮುಖದ ಕೆಲ ಸ್ಯಾಂಪಲ್. ಎಷ್ಟು ವಿಚಿತ್ರ ನೋಡಿ. ಯಾವ ನಾಯಕನೂ ತಾನು ದೇಶದ ಇಲ್ಲ ರಾಜ್ಯದ ನಾಯಕ ಎಂದು ಹೇಳಿಕೊಳ್ಳುವುದನ್ನು ಇಷ್ಟಪಡುವುದಿಲ್ಲ, ಯಾಕೆ? ಕೇವಲ ಕೆಲ ವರ್ಗ, ಕೋಮು, ಗುಂಪಿನ ಜೊತೆ ಯಾಕೆ ತಮ್ಮನ್ನು ಸೀಮಿತಗೊಳಿಸುತ್ತಾರೆ? ದೇಶ ಎಂದರೆ ದೇಶ, ಅಷ್ಟೇ. ಅಲ್ಲಿರುವವರು ಎಲ್ಲರೂ ಪ್ರಜೆಗಳು. ಅಲ್ಲಿ ಎಲ್ಲರಿಗೂ ಸಮಾನ ಹಕ್ಕು. ಎಲ್ಲರಿಗೂ ಕಷ್ಟ ಸುಖ, ನೋವು ನಲಿವು, ಸಾಧನೆ ವೈಫಲ್ಯ, ಒಳ್ಳೆಯತನ ಕೆಟ್ಟತನ ಇದ್ದೇ ಇರುತ್ತದೆ. ನಮ್ಮ ರಾಜಕೀಯದವರು ಹೀಗೆ ಕೆಲವೇ ಕೆಲ underprivileged ಎನಿಸಿಕೊಂಡ (ಹಾಗಂತ ಪ್ರಚಾರ ಮಾಡಲ್ಪಟ್ಟ) ಗುಂಪಿನ ಜೊತೆ ಮಾತ್ರ ಗುರುತಿಸಿಕೊಳ್ಳಲು ಹಾತೊರೆಯುತ್ತಾರೆ, ಯಾಕೆ? ಮತ ಬ್ಯಾಂಕ್ ರಾಜಕೀಯವೇ???
ಇದೇ ರೀತಿ ಯೋಚಿಸುತ್ತಾ ಹೋದರೆ, ನಾನು ನಮ್ಮ ರಾಜಕೀಯ ಪಕ್ಷಗಳ ದೃಷ್ಟಿಯಲ್ಲಿ ಒಬ್ಬ ಅನಾಮಧೇಯ, non-entity. ಕಾರಣಗಳು ಹೀಗಿವೆ:
* ನಾನು ಧರ್ಮದಲ್ಲಿ 'ಹಿಂದು' ಎನಿಸಿಕೊಂಡ ಧರ್ಮಕ್ಕೆ ಸೇರಿದವನು, ಅಂದರೆ ಅಲ್ಪಸಂಖ್ಯಾತ ಅಲ್ಲ.
* ನಾನು 'ಮೇಲ್ವರ್ಗ' ಎನಿಸಿಕೊಂಡ ಜಾತಿಗೆ ಸೇರಿದವನು. ಹಿಂದುಳಿದ ಅಥವಾ ದಲಿತ ಅಲ್ಲ.
* ನಾನು ಪುರುಷ. ಮಹಿಳೆ ಅಲ್ಲ.
* ನಾನು ನಗರದಲ್ಲಿ ಕೆಲಸದಲ್ಲಿದ್ದೇನೆ. ಅಂದರೆ ಹಳ್ಳಿಯಲ್ಲಿಲ್ಲ.
* ನಾನು ಒಂದು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದೇನೆ. ಅಂದರೆ ರೈತನಲ್ಲ.
* ನಾನು ಮಧ್ಯಮವರ್ಗದವನು, ಅಂದರೆ ಬಡವ, ದೀನನಲ್ಲ (ಸಧ್ಯಕ್ಕಂತೂ)
ನೋಡಿ, ರಾಜಕೀಯ ಪಕ್ಷಗಳು ಅಪ್ಪಿ ಮುದ್ದಾಡುವ ಯಾವ ಗುಣಲಕ್ಷಣಗಳೂ ನನ್ನಲ್ಲಿಲ್ಲ. ಅಂದರೆ ಈ ದೇಶದಲ್ಲಿ ನಾನು ಬದುಕಲಿಕ್ಕೇ ನಾಲಾಯಕ್ ಎಂದಾಯಿತು.
- ಕುಮಾರಸ್ವಾಮಿ ತಾನು 'ರೈತನ ಮಗ' ಎಂದು ಒಂದು ಸುದ್ದಿಘೋಷ್ಠಿಯಲ್ಲಿ ಹೇಳಿದ್ದರು. ಅವರು ಹೋಗಲಿ, ಸ್ವಯಂಘೋಷಿತ ಮಣ್ಣಿನ ಮಗ ದೇವೆಗೌಡರೇ ಮಣ್ಣನ್ನು ಕೈಯ್ಯಲ್ಲಿ ಮುಟ್ಟಿ ಎಷ್ಟು ವರ್ಷವಾಯಿತೋ ಏನೋ?
- ಯಡ್ಡಿಯೂರಪ್ಪನವರು ರೈತರ ಹೆಸರಲ್ಲೇ ಪ್ರಮಾಣವಚನ ಯಾಕೆ ಸ್ವೀಕರಿಸಬೇಕು? ಇತರರು ಯಾರೂ ಮನುಷ್ಯರಲ್ಲವೇ? ಅವರಿಗೆ ಸರಕಾರದ, ಮುಖ್ಯಮಂತ್ರಿಯ ನೆರವು ಅಗತ್ಯವಿಲ್ಲವೇ?
- ತಮಾಷೆ ನೋಡಿ. ಹುಟ್ಟಿದಾಗಿನಿಂದಲೂ ಸದಾ ಕಾಲ ರಕ್ಷಣಾದಳದವರ ಭದ್ರಕೋಟೆಯಲ್ಲೇ ಜೀವಿಸುತ್ತಿರುವ, ಹೊರ ಜಗತ್ತನ್ನು ಸಣ್ಣ ಕಿಂಡಿಯ ಮೂಲಕ ನೋಡುವ ರಾಹುಲ್ ಗಾಂಧಿಯಿಂದ ನಮ್ಮ ಮಧ್ಯಮವರ್ಗದ ಸಾಮಾನ್ಯ ಜನರಿಗೆ ಹಳ್ಳಿಜನರ ಬಗ್ಗೆ ಪಾಠ!!! ಒಂದಷ್ಟು ದಿನ ಕೆಲ ದಲಿತ, ರೈತರ ಮನೆಯಲ್ಲಿ ರೋಟಿ, ದಾಲ್, ಚಹಾ ಸೇವಿಸಿದ ಮಾತ್ರಕ್ಕೆ ಅವರ ಜೀವನಶೈಲಿ ಇವರಿಗೆ ಎಲ್ಲಾ ಗೊತ್ತಾಗಿಬಿಟ್ಟಿತೆ? ಇದು ಹೇಗೆಂದರೆ, ಮೃಗಾಲಯಕ್ಕೆ ಒಮ್ಮೆ ಭೇಟಿ ನೀಡಿದ ವ್ಯಕ್ತಿ ತನಗೆ ಕಾಡಿನ ಬಗ್ಗೆ, ಪ್ರಕೃತಿಯ ಬಗ್ಗೆ, ವನ್ಯಜೀವಿಗಳ ಬಗ್ಗೆ ಎಲ್ಲಾ ತಿಳಿದಿದೆ ಎಂದು ಹೇಳುವಷ್ಟೇ ಹಾಸ್ಯಾಸ್ಪದ ಈ ಉಪದೇಶ.
- ಬಂಗಾರಪ್ಪನವರು ಯಾಕೆ ಕೇವಲ ದಲಿತ, ಹಿಂದುಳಿದವರ ನಾಯಕ ಆಗಬೇಕು? ಅವರು ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಅಂದರೆ ಇಡೀ ರಾಜ್ಯಕ್ಕೆ ನಾಯಕರಾಗಬೇಕಾದವರು. ನಾನು ಹಿಂದುಳಿದ ವರ್ಗದವನು ಅಲ್ಲ ಎಂದಮಾತ್ರಕ್ಕೆ ನನಗೆ ಅವರ ನೆರವು ಅಗತ್ಯವಿರಲಿಲ್ಲವೆಂದೆ?
- ಮಾಯಾವತಿಯ ಮುಂದೆ ನೀವು ಸೂರ್ಯ, ಚಂದ್ರ, ನಕ್ಷತ್ರ, ಮುಂತಾದ ಯಾವುದೇ ವಿಷಯ ಮಾತಾಡಿ. ಅದರಲ್ಲೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಇಂಥ ಪದಗಳನ್ನು ತರದಿದ್ದರೆ ಅವರು ಮಾಯಾವತಿಯೇ ಅಲ್ಲ.
- ಇದೇ ರೀತಿ ಕುಮಾರಸ್ವಾಮಿಯ ಮುಂದೆ ಯಾವುದೇ ವಿಷಯ ಮಾತಾಡಿ. ಹಳ್ಳಿ, ರೈತ, ಮುಂತಾದ ಪದಗಳನ್ನು ಉದುರಿಸುತ್ತ, ಹಳ್ಳಿ ಪಟ್ಟಣದ ಮಧ್ಯೆ ಭೇದಭಾವ ತರದಿದ್ದರೆ ಕೇಳಿ.
- ಉತ್ತರ ಪ್ರದೇಶ ಚುನಾವಣೆ ಗಲಾಟೆಯನ್ನೇ ನೋಡಿ, ಮುಸ್ಲಿಮರನ್ನು ಓಲೈಸಲು ಏನೆಲ್ಲ ಕಸರತ್ತು ನಡೆಯುತ್ತಿದೆ. ಯಾಕೆ, ಬೇರೆ ಯಾರೂ ದೇಶದ ಪ್ರಜೆಗಳಲ್ಲವೆ?
- ದಿಗ್ವಿಜಯ್ ಸಿಂಗ್ ಗೆ ಎಲ್ಲಿ ಬಾಂಬ್ ಸ್ಫೋಟ ಆಗಲಿ, ಅದು ಹಿಂದುಗಳ ಕೈವಾಡವಾಗಿಯೇ ಕಾಣುತ್ತದೆ. ಹಿಂದುಗಳು ವೋಟ್ ಬ್ಯಾಂಕ್ ಅಲ್ಲವಲ್ಲ.
ಯಾಕೆ ಎಲ್ಲರೂ ಒಂದು ವರ್ಗ, ಗುಂಪು, ಜಾತಿ, ಧರ್ಮಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ? ಈ ಗುಂಪುಗಳು ಆರ್ಥಿಕವಾಗಿ ದುರ್ಬಲವಾದ, ಶೋಷಿತವೆನಿಸಿದ, ಸಂಖ್ಯೆಯಲ್ಲಿ ಕಡಿಮೆಯೆನಿಸಿದ, ಒಟ್ಟಿನಲ್ಲಿ underpriviliged ಎನಿಸಿದ ವರ್ಗಗಳು, ಸಾಮಾನ್ಯ ದೃಷ್ಟಿಯಲ್ಲಿ. ಇದು ಕೆಲಮಟ್ಟಿಗೆ ನಿಜವೂ ಹೌದು. ಇವರಿಗೆಲ್ಲ ಸಹಾಯ ಮಾಡುವುದು ಬೇರೆ, ತಾವು ಅವರನ್ನು ಮಾತ್ರ ಪ್ರತಿನಿಧಿಸುತ್ತೇವೆ ಎಂದು ಬಿಂಬಿಸಿಕೊಳ್ಳುವುದು ಬೇರೆ. ಎರಡಕ್ಕೂ ವ್ಯತ್ಯಾಸವಿದೆ. ಈ underpriviliged ಎನಿಸಿಕೊಳ್ಳುವ ವರ್ಗ, ಗುಂಪುಗಳಿಗೆ ಎಷ್ಟು ಬೇಕಾದರೂ ಸಹಾಯಮಾಡಲಿ, ತಪ್ಪಿಲ್ಲ. ಆದರೆ ತಾವು ಅವರ ಪ್ರತಿನಿಧಿ ಮಾತ್ರ ಎಂಬಂತೆ ವರ್ತಿಸುವುದು ಕಿರಿಕಿರಿಯೆನಿಸುತ್ತದೆ. ಹೋಗಲಿ ಅದನ್ನೂ ಸರಿಯಾಗಿ ಮಾಡುತ್ತಾರೆಯೇ ನಮ್ಮ ಪುಢಾರಿಗಳು? ಅದೂ ಇಲ್ಲ. ಹೊರಜಗತ್ತಿಗೆ, ಮಾಧ್ಯಮದ ಮುಂದೆ ದೀನ ದಲಿತ, ಅಲ್ಪಸಂಖ್ಯಾತ, ರೈತ, ಬಡವರ ಬಂಧು ಎಂದು ಪ್ರಚಾರ ಪಡೆಯುವ ಅವರು, ತೆರೆಯ ಹಿಂದೆ ಶ್ರೀಮಂತರ, ಬಂಡವಾಳಶಾಹಿಗಳ ಸಹವಾಸ ಮಾತ್ರ ಮಾಡುತ್ತಾರೆ. ಆಗ, ಯಾವ ದೀನ ದಲಿತ ಬಂದರೂ ಮನೆಯ ಹತ್ತಿರವೂ ಸುಳಿಯಬಿಡುವುದಿಲ್ಲ. ಏನಿದ್ದರೂ ಪ್ರಚಾರ ಮುಖ್ಯ, ನಿಜವಾದ ಕಳಕಳಿಯಲ್ಲ.
ಬೇರೆ ಕಡೆ ಈ ಥರದ ಪಕ್ಷಪಾತ ಧೋರಣೆ ಅತೀ ಕಡಿಮೆ ಎನ್ನಬಹುದು. ಬರಾಕ್ ಒಬಾಮ ಕಪ್ಪು ವರ್ಣೀಯ ವ್ಯಕ್ತಿ. ಇಡೀ ಅಮೆರಿಕಾ ದೇಶದ ಇತಿಹಾಸದಲ್ಲಿಯೇ ಕಪ್ಪು ವ್ಯಕ್ತಿ ಅಷ್ಟು ದೊಡ್ಡ ಹುದ್ದೆಗೆ ಬಂದಿದ್ದು ಇದೇ ಮೊದಲು. ಅವರ ಅಧ್ಯಕ್ಷ ಚುನಾವಣೆಯ ಭಾಷಣ ಕೇಳಿದ್ದೀರಾ? ಅಥವಾ ಈಗಿನ ಅವರ ಭಾಷಣಗಳು, ಹೇಳಿಕೆಗಳು? ಎಲ್ಲಿಯಾದರೂ ತಮ್ಮ ಜನರ ಕಷ್ಟ ನಷ್ಟಗಳ ವರ್ಣನೆ ಮಾಡಿದ್ದು, ಅದೆಲ್ಲವೂ ಬಿಳಿ ಜನರ ದಬ್ಬಾಳಿಕೆಯಿಂದ ನಮ್ಮ ಜನ ಎಷ್ಟು ನೋವಿನಲ್ಲಿ ಇದ್ದೇವೆ ಎಂದು ಎಲ್ಲಿಯೂ ಗೋಳಾಡಿಲ್ಲ, ಮತ್ತು ಇದೇ ನೆಪದಲ್ಲಿ ಬಿಳಿಯರ ತೆಗಳಿಕೆ, ನಮ್ಮ ಜನರ ಹಿಂದುಳಿದಿರುವುಕೆಗೆ ಅವರೇ ಕಾರಣ ಎಂದು ಎದೆ ಬಡಿದುಕೊಂಡು ಬೊಬ್ಬೆ ಹೊಡೆದಿಲ್ಲ. ಯಾವುದರಲ್ಲೂ ಅವರು ತಮ್ಮ ಜನಾಂಗದ (ಕಪ್ಪು ಜನ) ಉದ್ಧಾರದ ಬಗ್ಗೆ ಮಾತ್ರ ಮಾತಾಡುವುದಿಲ್ಲ. ಏನೇ ಹೇಳಿದರೂ ಇಡೀ ದೇಶದ ಬಗ್ಗೆ ಮಾತಾಡುತ್ತಾರೆ. ಏನೇ ಸಮಸ್ಯೆ ಬಂದರೂ, ಸರಕಾರದ ಏನೇ ಯೋಜನೆ ಇದ್ದರೂ ಅದು ದೇಶದ ಎಲ್ಲರಿಗೂ ತಟ್ಟುತ್ತದೆ. ಯಾವುದೋ ಒಂದು ವರ್ಗ ಯಾವುದೋ ಕಾರಣಕ್ಕೆ ಹಿಂದುಳಿದಿದೆ ಎಂದ ಮಾತ್ರಕ್ಕೆ ಸಮಸ್ಯೆಗಳು ಅವರಿಗೆ ಮಾತ್ರ ಬರುತ್ತದೆ ಎಂದಲ್ಲ.
ಹಾಗೆ ನೋಡಿದರೆ ಅಲ್ಲಿ ಈಗಲೂ ಕರಿಜನರ ಬಗ್ಗೆ ಅಸಡ್ಡೆ ಭಾವನೆ ಇದೆ, ಹೊರಗಲ್ಲದಿದ್ದರೂ ಒಳೊಗೊಳಗೆ ಅವರ ಬಗ್ಗೆ ಕೀಳು ಭಾವನೆ ಇದೆ ಬಿಳಿಯರಲ್ಲಿ. ದೈಹಿಕ ಶ್ರಮದಾಯಕ, ಕೊಳಕು ಎನಿಸುವ ಕೆಲಸ ಮಾಡುವುದು ಹೆಚ್ಚಿನವರು ಈ ಕಪ್ಪುಜನರೇ. ಬಡತನ ಅವರಲ್ಲೇ ಹೆಚ್ಚಿದೆ, ಅಪರಾಧಿಗಳೂ ಕೂಡಾ. ಬಿಳಿ ಜನರ ಸರಕಾರೀ ಶೋಷಣೆ ಮಾಡಲು ಒಬಾಮ, ಅಥವಾ ಅಲ್ಲಿಯ ಯಾವ ರಾಜಕಾರಣಿಯೂ ಇದು ಯಾವುದನ್ನೂ ನೆಪ ಮಾಡಿಕೊಂಡಿಲ್ಲ
ನಮ್ಮ ಅಬ್ದುಲ್ ಕಲಾಮ್ ಅವರನ್ನೇ ನೋಡಿ. ರಾಮೇಶ್ವರದ ಹತ್ತಿರದ ಸಣ್ಣ ಹಳ್ಳಿಯಲ್ಲಿ, ದೊಡ್ಡ ಸಂಸಾರದ ಬಡ ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿ, ಅನೇಕ ದೊಡ್ಡ ಹುದ್ದೆ ಹೊಂದಿ, ರಾಷ್ಟ್ರಪತಿ ಕೂಡಾ ಆದವರು. ಈಗಲೂ ಕ್ರಿಯಾಶೀಲ. ಎಂದಾದರೂ ಅವರು ತಮ್ಮ ಮುಸ್ಲಿಮ್ identity ಪ್ರದರ್ಶನ ಮಾಡಿದ್ದಾರಾ? ತಮ್ಮ ಜನರ ಅಲ್ಪಸಂಖ್ಯಾತತನವನ್ನೇ ಬಂಡವಾಳ ಮಾಡಿಕೊಂಡಿದ್ದಾರಾ? ಎಲ್ಲೆಲ್ಲಿಯೂ ಅವರು ಬರೀ ಮುಸ್ಲಿಮರ ವಿಷಯ ಮಾತ್ರ ಮಾತಾಡುವುದಿಲ್ಲ. ಅವರ ಮಾತೇನಿದ್ದರೂ ದೇಶದ ಬಗ್ಗೆ, ವಿಜ್ನಾನದ ಬಗ್ಗೆ, ಶಿಕ್ಷಣದ ಬಗ್ಗೆ. ಒಟ್ಟಿನಲ್ಲಿ, ಇಡೀ ದೇಶದ ಏಳಿಗೆ ಬಗ್ಗೆ. ಈ ಜನಾಂಗ ಶತಮಾನಗಳಿಂದ ಕಷ್ಟದಲ್ಲಿತ್ತು, ಆ ವರ್ಗ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು, ಇವರು ಹಳ್ಳಿಯವರು...ಆದ್ದರಿಂದ ಅವರಿಗೆ ಮಾತ್ರ ಕಷ್ಟವಿರುತ್ತದೆ, ಅವರನ್ನು ಮಾತ್ರ ಉದ್ಧಾರ ಮಾಡಬೇಕು, ಇವರೆಲ್ಲರ ಸಮಸ್ಯೆಗಳಿಗೆ ಇತರ ವರ್ಗ, ಧರ್ಮ, ಜಾತಿಯವರೇ ಕಾರಣ ಎಂಬಂತಹ ಸಂಕುಚಿತ ನಡವಳಿಕೆ ಒಮ್ಮೆಯಾದರೂ ತೋರಿಸಿದ್ದಾರೆಯೆ? ಅದಕ್ಕೇ ಏನೋ, ಅಬ್ದುಲ್ ಕಲಾಮ್ ಹೆಚ್ಚು ಕಡಿಮೆ ಎಲ್ಲರೂ, ಅಂದರೆ, ಜಾತಿ, ಧರ್ಮ, ವರ್ಗ ಬೇದ ಇಲ್ಲದೆ ಎಲ್ಲರೂ ಇಷ್ಟಪಡುವುದು. ಇನ್ನೊಮ್ಮೆ ರಾಷ್ಟ್ರಪತಿಯಾಗಲಿ ಎಂದು ಅನೇಕರ ಆಸೆ. ವಿಪ್ರೋದ ಅಜೀಮ್ ಪ್ರೇಮ್ ಜಿ ಎಂದೂ ತಮ್ಮ ಅಲ್ಪಸಂಖ್ಯಾತತನವನ್ನು ಬಂಡವಾಳ ಮಾಡಿಕೊಳ್ಳಲಿಲ್ಲ.
ಪಾರ್ಸಿಗಳು ನಿಜಕ್ಕೂ ಅಲ್ಪಸಂಖ್ಯಾತರು, ಅವರ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ಕಡಿಮೆಯಾಗುತ್ತಿದೆ. ಜೈನರು, ಸಿಖ್ಖರು, ಬೌದ್ಧರು ಅಲ್ಪಸಂಖ್ಯಾತರೇ. ಯಾವ ರಾಜಕಾರಣಿಯೂ ತಲೆಕೆಡಿಸಿಕೊಂಡಹಾಗಿಲ್ಲ. ಅವರು ಮತ ಬ್ಯಾಂಕ್ ಅಲ್ಲವಲ್ಲ. ನಮ್ಮ ದಲಿತ ಹಿಂದುಳಿದ ಸಂಘಗಳಿಗೆ ಬುದ್ಧ ತುಂಬಾ ಆಪ್ತ. ಹೆಚ್ಚು ಕಡಿಮೆ ಅದೇ ರೀತಿಯ ಜೀವನ, ಸಂದೇಶ ಸಾರಿದ ಮಹಾವೀರನ ಪರಿಚಯವೇ ಇವರಿಗಿಲ್ಲ. ಕಾರಣ ಸುಸ್ಪಷ್ಟ. ಬುದ್ಧನನ್ನು ಹಾಡಿ ಹೊಗಳುವುದು ಒಂದೇ ಕಾರಣಕ್ಕೆ, ಅವರ ಆರಾಧ್ಯ ದೈವ ಡಾ.ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ್ದರು ಎಂಬುದಕ್ಕೆ. ಅವರೇನಾದರು ಜೈನರಾಗಿದ್ದರೆ ಆಗ ಇವರೆಲ್ಲ ಜೈನ ಧರ್ಮವನ್ನು ಅಟ್ಟಕ್ಕೇರಿಸುತ್ತಿದ್ದರು. ಇಲ್ಲಿ ಬುದ್ಧನ ಸಂದೇಶ ಮುಖ್ಯವಲ್ಲ, ಅಂಬೇಡ್ಕರ್ ಏನು ಮಾಡಿದರು ಎಂಬುದು ಮಾತ್ರ. ಒಬ್ಬರಿಗಾದರೂ ಬುದ್ಧನ ಜೀವನ, ಸಂದೇಶ ಗೊತ್ತಿದ್ದರೆ ಕೇಳಿ.
ರಾಜಕಾರಣಿಗಳಾದರೋ ಕುರ್ಚಿಗಾಗಿ ಹೀಗೆ ಮಾಡುತ್ತಾರೆನ್ನಬಹುದು. ಆದರೆ ಬುದ್ಧಿಜೀವಿಗಳೆನ್ನಿಸಿಕೊಂಡವರು ಕೂಡ ಭೇದಭಾವ ಮಾಡಿ ಜಿಗುಪ್ಸೆ ಹುಟ್ಟಿಸುತ್ತಾರೆ. ಕೆಲ ರಾವಣ, ಕೀಚಕ, ಹಾಯ್, ಹಲೋ ವಾರಪತ್ರಿಕೆಗಳಿಗೆ ಹಿಂದುಗಳನ್ನು, ಅದರಲ್ಲೂ ಬ್ರಾಹ್ಮಣರನ್ನು ಟೀಕಿಸುವುದೇ ಪರಮ ಗುರಿ. ಇತರ ಧರ್ಮಗಳಲ್ಲಿ ಏನೇ ಹುಳುಕಿದ್ದರೂ ಕಣ್ಣುಮುಚ್ಚಿ, ಹಿಂದೂ ಧರ್ಮದ ಕೆಲ ಕೆಟ್ಟ ಆಚರಣೆಗಳನ್ನೇ ವೈಭವೀಕರಿಸಿ ತೆಗಳುವುದೇ ಸಾಧನೆಯಾಗಿದೆ. ತಮ್ಮ ಬಡತನ, ಅನಕ್ಷರತೆ, ಅಲ್ಪಸಂಖ್ಯಾತತನ, ಹಿಂದುಳಿದಿರುವಿಕೆ, ಇಂಥ ನಕಾರಾತ್ಮಕಗಳನ್ನೇ ಬಂಡವಾಳ ಮಾಡಿಕೊಳ್ಳುವ, ಅದನ್ನು ಒಂದು badge of honour ಎಂಬಂತೆ ಹೆಮ್ಮೆಯಿಂದ ಹೊತ್ತು ತಿರುಗುವುದು ನಮ್ಮ ದೇಶದಲ್ಲಿ ಮಾತ್ರ ಎಂದು ನನ್ನ ಅನಿಸಿಕೆ. ತಾವು ಹಿಂದುಳಿದವರು, ಬಡತನದಲ್ಲಿ ಬೆಳೆದವರು/ಬಡವರು, ಹೆಚ್ಚು ಓದಿಲ್ಲದವರು, ಹಳ್ಳಿಯಲ್ಲಿ ಹುಟ್ಟಿಬೆಳೆದವರು ಎಂದು ಹೇಳಿಕೊಳ್ಳುವುದೇ ಒಂದು ಫ್ಯಾಶನ್ ಆಗಿಹೋಗಿದೆ. ನಮ್ಮ ಹುಟ್ಟು ನಮ್ಮ ಕೈಯಲ್ಲಿಲ್ಲ. ಅದಕ್ಕಾಗಿ ಬೇಸರ ಪಡಬೇಕಿಲ್ಲ, ಕೀಳರಿಮೆ ಬೇಕಿಲ್ಲ. ಅದೇ ರೀತಿ ಅದನ್ನು ಒಂದು ಅಸ್ತ್ರವಾಗಿ ಬಳಸುವುದೂ ಕೂಡ ತಪ್ಪು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮೇಲೆ ಬರುವುದನ್ನು ಬಿಟ್ಟು ತಮ್ಮ ಕಷ್ಟಕ್ಕೆ ಇತರ ಎಲ್ಲರ ಮೇಲೆ ಹರಿ ಹಾಯುವುದನ್ನು ನಮ್ಮ ರಾಜಕೀಯದವರು, ಬುದ್ಧಿ(ಲದ್ದಿ)ಜೀವಿಗಳು, ಮಾಧ್ಯಮಗಳು ಪ್ರಚೋದಿಸುತ್ತಿವೆ.
ಶ್ರೀಮಂತರೆಲ್ಲ ಕೆಟ್ಟವರಲ್ಲ. ಬಡವ, ದೀನ ಎನಿಸಿಕೊಂಡವರೆಲ್ಲ ಮುಗ್ಧರು, ಒಳ್ಳೆಯವರೂ ಆಗಬೇಕಿಲ್ಲ. ನಮ್ಮ ಈಗಿನ ಹೆಚ್ಚಿನ ಮಧ್ಯಮ ವರ್ಗ, ಶ್ರೀಮಂತವರ್ಗದವರು ಕಷ್ಟಪಟ್ಟು ಮೇಲೆ ಬಂದು, ಗಂಟೆಗಟ್ಟಲೆ ದುಡಿಯುವವರಾಗಿದ್ದಾರೆ. ದುಡಿಯುವುದು ಎಂದರೆ ಕೇವಲ ಹೊಲಗದ್ದೆಗಳಲ್ಲಿ ಬೆವರು ಸುರಿಸುವುದು ಮಾತ್ರವಲ್ಲ. ಏರ್ ಕಂಡೀಶನ್ ಕ್ಯಾಬಿನ್ ನಲ್ಲಿ ಕೂತವರೂ ಕಷ್ಟಪಟ್ಟೇ ದುಡಿಯುತ್ತಾರೆ.
ಗ್ರಾಮೀಣ ಜನರೆಲ್ಲ ಮುಗ್ಧರು, ನಗರದ ಬಣ್ಣದ ಮಾತಿನ ಜನರಿಂದ ಮೋಸಹೋಗುವವರು ಎಂಬಂತೆ ಈಗಲೂ ಕಥೆ, ಕಾದಂಬರಿ, ಸಿನೆಮಾಗಳಲ್ಲಿ ಚಿತ್ರಿತವಾಗುತ್ತದೆ. ನಮ್ಮ ರಾಜಕಾರಣಿಗಳಿಗೆ, ಸಾಹಿತಿಗಳಿಗೆ, ಸಿನೆಮಾದವರಿಗೆ ಹಳ್ಳಿ ಎಂದ ಕೂಡಲೆ ನೆನಪಾಗುವುದು ರೈತರು ಮಾತ್ರ. 'ಅನ್ನದಾತ', 'ನೇಗಿಲ ಯೋಗಿ' ಮುಂತಾದ ಸುಂದರ ವರ್ಣನೆ ಬೇರೆ. ಹಳ್ಳಿ ಎಂದ ಮಾತ್ರಕ್ಕೆ ರೈತ ಮಾತ್ರ ಅಲ್ಲಿರುತ್ತಾನೆಯೇ? ಯಾಕೆ ಹಳ್ಳಿಯಿಲ್ಲಿ ಇತರ ವೃತ್ತಿಯವರು ಇಲ್ಲವೇನು? ಹಳ್ಳಿಯಲ್ಲಿ ವೈದ್ಯರು, ಶಿಕ್ಷಕರು, ಚಮ್ಮಾರರು, ಬ್ಯಾಂಕ್ ನೌಕರರು, ಅಂಗಡಿ ಇಟ್ಟಿರುವವರು, LIC ಏಜೆಂಟರು, ಹೀಗೆ ಎಲ್ಲ ವೃತ್ತಿಯವರೂ ಇದ್ದಾರೆ. ನಮ್ಮ ಕುಟುಂಬ ಹಳ್ಳಿಯದ್ದಾದರೂ ನಮಗೆ ಹೊಲಗಳಿಲ್ಲ, ಗದ್ದೆಯಲ್ಲಿ ಯಾರೂ ಕೆಲಸ ಮಾಡಿಯೇ ಇಲ್ಲ.
ಶೋಷಣೆ ಈಗಲೂ ಇದೆ ನಿಜ. ದೌರ್ಜನ್ಯದ ಸುದ್ದಿ ಈಗಲೂ ಪತ್ರಿಕೆಯಲ್ಲಿ ಇರುತ್ತದೆ. ಅದಕ್ಕೆ ಬೇಕಾದ "ಸರಿಯಾದ, ನಿಜವಾದ" ಸಹಾಯ ಯಾವ ಒಂದು ಸೇನೆ, ಸಮಿತಿ, ಪಕ್ಷವೂ ಮಾಡುವುದಿಲ್ಲ. ಹೋರಾಟ, ಹಾರಾಟ, ಇವರ ಕಷ್ಟಕ್ಕೆಲ್ಲ ಅವರು ಕಾರಣ, ಅವರನ್ನೆಲ್ಲ ತುಳಿಯುವುದು ಇವರು ಎಂಬ ಚೀರಾಟ, ಘೋಷಣೆ ಕೂಗುವುದು ಬಿಟ್ಟು ಬೇರೇನು ಮಾಡಿವೆ ಈ ಸಂಘ, ಸೇನೆ, ಸಮಿತಿ, ಪತ್ರಿಕೆಗಳು?
ನನ್ನ ಪ್ರಶ್ನೆ ಇಷ್ಟೆ. ಒಂದು ದೇಶ ಎಂದರೆ ಎಲ್ಲಾ ಥರದ ಜನರಿರುತ್ತಾರೆ. ಒಳ್ಳೆಯವರು, ಕೆಟ್ಟವರು, ಬುದ್ಧಿವಂತರು, ಮೂರ್ಖರು, ಸಾಧಕರು, ವಿಫಲಿಗಳು ಎಲ್ಲಾ ಜನಾಂಗ, ಜಾತಿ, ಧರ್ಮ, ದೇಶದಲ್ಲಿರುತ್ತಾರೆ. ಮೇಲ್ವರ್ಗದವರೆಲ್ಲ ಬುದ್ಧಿವಂತರಲ್ಲ. ಮೀಸಲಾತಿಯಿಂದ ಬಂದವರೆಲ್ಲ ದಡ್ದರಲ್ಲ. ಅದೇ ರೀತಿ, 'ಈ' ವರ್ಗದವರೆಲ್ಲ ಪರಮ ಸುಖಿಗಳು, ಅವರಿಗೆ ಸರಕಾರದ ನೆರವು ಅಗತ್ಯವಿಲ್ಲ, 'ಆ' ವರ್ಗದವರು ನೂರಾರು ವರ್ಷದಿಂದ ತುಳಿತಕ್ಕೊಳಗಾದವರು, ಅದಕ್ಕೆ ಈಗಲೂ ಅವರಿಗೆ ಮಾತ್ರ ಸಹಾಯ ಮಾಡಬೇಕು ಎಂದೋ, ಆ ಜಾತಿಯವರು ಅಲ್ಪಸಂಖ್ಯಾತರು, ಈ ಬಹುಸಂಖ್ಯಾತರು ಅವರನ್ನೆಲ್ಲ ನುಂಗಿ ನೀರು ಕುಡಿದುಬಿಡುತ್ತಾರೆ ಎಂದು ಭಯಾನಕ ವರ್ಣನೆ ಮಾಡುತ್ತ ಭೀತಿ ವಾತಾವರಣ ಸೃಷ್ಟಿಸುತ್ತ ಹೋಗುವುದೇ ರಾಜಕಾರಣವೇ, ಅದೇ ಬುದ್ಧಿಜೀವಿತನವೇ? ಕೆಲ ಜನಾಂಗವನ್ನು ಮಾತ್ರ ಯಾಕೆ ಪ್ರತಿನಿಧಿಸಬೇಕು? ಇದು ಬ್ರಿಟಿಶರ divide and rule ಗಿಂತ ಹೇಗೆ ಭಿನ್ನವಾಗುತ್ತದೆ?
7 comments:
ದೀಪಸ್ಮಿತರೆ,
ವಿಚಾರಪೂರ್ಣ ಲೇಖನವನ್ನು ಬರೆದಿರುವಿರಿ. ನೀವು ಹೇಳುವುದು ಸರಿಯಾಗಿದೆ. ಮತಬ್ಯಾಂಕ ಸಲುವಾಗಿ, ನಮ್ಮ ರಾಜಕಾರಣಿಗಳು ಕೀಳುಮಟ್ಟದ ಪ್ರಚಾರ ಮಾಡುತ್ತಿರುವದು ಎದ್ದು ಕಾಣುತ್ತಿದೆ. ಇದೇ ಮುಂದುವರೆದರೆ, ನಮ್ಮ ದೇಶವು ನೂರು ಚೂರುಗಳಾಗುವದರಲ್ಲಿ ಸಂದೇಹವಿಲ್ಲ!
60 ವರ್ಷಗಳ ಹಿಂದೆ ಬ್ರಿಟಿಷರ ಕೆಳಗೆ ನಾವು ಗುಲಾಮರು, ಈಗ ನಮ್ಮವರ ಕೆಳಗೇ ನಾವು ಗುಲಾಮರು' ಈ ಮಾತು ನೆನಪಾಗತ್ತೆ
ಊತ್ತಮ ಲೇಖನ
good article..
ಸತ್ಯ. ಬರಹ ಯೋಚನೆಗೆ ಹಚ್ಚಿತು.
"ಹೌದಲ್ಲ... ನನ್ನನ್ನು ಪ್ರತಿನಿಧಿಸುವ ಯಾವ ರಾಜಕಾರಣಿಯೂ ಇಲ್ಲ... ಆದರೂ ನಾನು ವೋಟು ಹಾಕುತ್ತಿದ್ದೇನಲ್ಲಾ" ಎಂದು ಅನ್ನಿಸಿತು.
"ಮಧ್ಯಮ ವರ್ಗ, ಪೇಟೆ, ರೈತನಲ್ಲ ಎಂದಾಕ್ಷಣ ನನಗೆ ಏನೂ ತೊಂದರೆಗಳೇ ಇಲ್ಲ, ಸರಕಾರದ ಸಹಕಾರವೇ ಬೇಡವೆಂದೇ?" ಎಂದು ಯೋಚಿಸುವಂತಾಯಿತು.
ನಾವೂ ಕಷ್ಟಪಡುತ್ತೇವೆ - ನಮಗಾಗಿ, ಮನೆಯವರಿಗಾಗಿ. ೩ ಹೊತ್ತು ಊಟ ಸಿಗಲು ತೊಂದರೆಯಿಲ್ಲದಿದ್ದರೂ, ಕೆಲಸದ ಕಾರಣ ಊಟ ನಿದ್ದೆ ಮಾಡದೆ ಕಳೆದ ದಿನಗಳೂ ಇವೆಯಲ್ಲವೇ? ನಮ್ಮ ಜೀವನ, ಕೆಲಸಗಳೆಲ್ಲ ದೇಶ ಅಷ್ಟು ಪ್ರಗತಿ ಸಾಧಿಸಿದೆ, ಇಷ್ಟು ಪ್ರಗತಿ ಸಾಧಿಸಿದೆ ಎನ್ನಲಷ್ಟೇ ಮುಖ್ಯವಾಗಿದೆಯೇನೋ?
"ಮೃಗಾಲಯಕ್ಕೆ ಒಮ್ಮೆ ಭೇಟಿ ನೀಡಿದ ವ್ಯಕ್ತಿ ತನಗೆ ಕಾಡಿನ ಬಗ್ಗೆ, ಪ್ರಕೃತಿಯ ಬಗ್ಗೆ, ವನ್ಯಜೀವಿಗಳ ಬಗ್ಗೆ ಎಲ್ಲಾ ತಿಳಿದಿದೆ ಎಂದು ಹೇಳುವಷ್ಟೇ ಹಾಸ್ಯಾಸ್ಪದ"... ಒಳ್ಳೆಯ ಹೋಲಿಕೆ.
ಸರಿಯಾಗಿ ಬರೆದಿದ್ದೀರಿ. ಹಿಂದುವಳಿದವ ಎಂತಲೋ, ರೈತನ ಮಗ ಎಂತಲೋ ಹೇಳಿಕೊಂಡುಬಿಟ್ಟರೆ ತಲೆಯ ಮೇಲೆ ಕೊಂಬು ಬಂದತಯೇ ಸರಿ ಇಂದಿನ ವ್ಯವಸ್ಥೆಯಲ್ಲಿ.
ಉತ್ತಮ ಲೇಖನ..
Post a Comment